- ಭೀಮನ ಅಮಾವಾಸ್ಯೆ ಪೂಜಾ ಕಾರ್ಯಕ್ರಮದಲ್ಲಿ ಡಾ.ಒಡೆಯರ್ ಚನ್ನಮಲ್ಲಿಕಾರ್ಜನ ಶ್ರೀ ಆಶೀರ್ವಚನ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಸಮಾಜದಲ್ಲಿ ಪೋಷಕರು ಮಕ್ಕಳಿಗೆ ಉತ್ತಮ ಸಂಸ್ಕೃತಿ, ಸಂಸ್ಕಾರ ಕಲಿಸುವ ಜವಾಬ್ದಾರಿ ಹಾಗೂ ಹೊಣೆಗಾರಿಕೆ ಹೊಂದಿರಬೇಕು ಎಂದು ಡಾ.ಒಡೆಯರ್ ಚನ್ನಮಲ್ಲಿಕಾರ್ಜನ ಸ್ವಾಮೀಜಿ ನುಡಿದರು.ಪಟ್ಟಣದ ಹಿರೇಕಲ್ಮಠದಲ್ಲಿ ಲಿಂಗೈಕ್ಯ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಕೃಪಾಶೀರ್ವಾದದಿಂದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಭೀಮನ ಅಮಾವಾಸ್ಯೆ ಪೂಜಾ ಕಾರ್ಯಕ್ರಮ ಶ್ರೀಗುರು ಚನ್ನೇಶ್ವರ ಬೆಳ್ಳಿ ರಥೋತ್ಸವ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶ್ರಾವಣ ಎಂದರೆ ಕಿವಿಯಿಂದ ತಿಂಗಳುದ್ದಕ್ಕೂ ಒಳ್ಳೆಯದನ್ನೇ ಕೇಳುವುದು, ಆಲಿಸುವ ಉತ್ತಮ ಕೆಲಸ ಭಕ್ತರದ್ದಾಗಿರಬೇಕು ಎನ್ನುವುದಾಗಿದೆ. ಶ್ರಾವಣ ಮಾಸದಲ್ಲಿ ಶಿವ ಸೇರಿದಂತೆ ದೇವಾನುದೇವತೆಗಳ ಪುರಾಣ- ಪ್ರವಚನ ವೃತಗಳ ಆಚರಣೆಯಿಂದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮನೋಭಾವನೆ ಪ್ರತಿಯೊಬ್ಬರಲ್ಲಿ ಬೆಳೆಯುತ್ತದೆ ಎಂದರು.ಹಣ್ಣು ಮತ್ತು ತರಕಾರಿ ಇತರೆ ಬೆಳೆಗಳನ್ನು ಬೆಳೆದಿರುವ ರೈತರೇ ನೇರವಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ಅವರಿಗೆ ಉತ್ತಮ ಬೆಲೆ ಸಿಗುತ್ತದೆ. ಇತ್ತೀಚೆಗೆ ಅನೇಕ ರೈತರು ಜನರ ಆರೋಗ್ಯ ಕಾಪಾಡಲು ಡ್ರಾಗನ್ ಫ್ರೂಟ್ ಹಣ್ಣನ್ನು ಬೆಳೆದು ಅವರೇ ಮಾರುಕಟ್ಟೆಗೆ ಹೋಗಿ, ಮಾರಾಟ ಮಾಡುತ್ತಿದ್ದಾರೆ. ಇದರಿಂದ ಆರ್ಥಿಕವಾಗಿ ಸದೃಢತೆ ಸಾಧಿಸುತ್ತಿದ್ದಾರೆ. ಪೋಷಕರು, ಸಾರ್ವಜನಿಕರು ಸಹ ಮಧ್ಯವರ್ತಿಗಳಿಂದ ಯಾವುದೇ ಪದಾಥಗಳನ್ನು ಖರೀದಿಸದೇ ರೈತರಿಂದಲೇ ನೇರವಾಗಿ ಖರೀದಿಸಬೇಕು ಎಂದು ಸಲಹೆ ನೀಡಿದರು.
ಕೃತಕ ಆಹಾರ ಮತ್ತು ಕರಿದ ಪದಾರ್ಥಗಳನ್ನು ಹೆಚ್ಚು ತಿನ್ನುವುದರಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಪೋಷಕರು ಮಕ್ಕಳಿಗೆ ಹಣ್ಣು-ತರಕಾರಿಗಳ ಆಹಾರ ನೀಡಬೇಕು. ಇದರಿಂದ ಉತ್ತಮ ಆರೋಗ್ಯ ಹೊಂದಬಹುದು. ಅನೇಕರು ಒತ್ತಡದ ಜೀವನ ಮತ್ತು ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಬಿಳಿ (ವೈಟ್) ಡ್ರಾಗನ್ ಪ್ರೋಟ್ ತಿನ್ನಬೇಕು. ಇದರಿಂದ ಸಕ್ಕರೆ ಕಾಯಿಲೆ ನಿಯಂತ್ರಣ ಸಾಧ್ಯ ಎಂದರು.ಬೆಳ್ಳಿರಥ ಉತ್ಸವ ಸಮಯ ಬದಲು:
ಹಿರೇಕಲ್ಮಠದಲ್ಲಿ ಅಮಾವಾಸ್ಯೆ ಪೂಜಾ ಕಾರ್ಯಕ್ರಮ ಶ್ರೀ ಮಠದ ಕರ್ತೃಗದ್ದಿಗೆಗಳಿಗೆ ಮಹಾರುದ್ರಾಭಿಷೇಕ ಪೂಜಾ ಕಾರ್ಯಕ್ರಮ ನಡೆಯಿತು. ಅನಂತರ ರಾತ್ರಿ ಬದಲಿಗೆ ಮಧ್ಯಾಹ್ನವೇ ಬೆಳ್ಳಿ ರಥೋತ್ಸವ ನಡೆಯಲಿದೆ ಎಂದು ಸ್ವಾಮೀಜಿ ಹೇಳಿದರು.ಧಾರ್ಮಿಕ ಕಾರ್ಯಕ್ರಮದಲ್ಲಿ ಮಲೇಬೆನ್ನೂರು ರೇಣುಕಾ ರೈಸ್ ಇಂಡಸ್ಟ್ರೀಸ್ ಮಾಲೀಕ ಬಿ.ಎಂ. ನಂಜಯ್ಯ ಮತ್ತು ಸಹೋದರರಿಗೆ ವಿಶೇಷವಾಗಿ ಸನ್ಮಾನ ಮಾಡಲಾಯಿತು.
ಕೆ.ಆರ್. ಮ್ಯೂಜಿಕ್ ಅಕಾಡೆಮಿಯ ಕವನ ಅವರು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಅನ್ನದಾನಯ್ಯ ಶಾಸ್ತ್ರಿ, ನಿಜಗುಣ ಶಿವಯೋಗಿ ಶಾಸ್ತ್ರಿ, ಶ್ರೀ ಚನ್ನೇಶ್ವರ ಗಾನ ಕಲಾ ಸಂಘ,ಕೆಂಚಿಕೊಪ್ಪ ರುದ್ರೇಶ್, ಹಾಲಸ್ವಾಮಿ, ಮಠದ ವ್ಯವಸ್ಥಾಪಕ ಎಂ.ಪಿ.ಎಂ. ಚನ್ನಬಸಸಯ್ಯ, ನರಸನಹಳ್ಳಿ ಗುರುಪ್ರಸಾದ, ನಿವೃತ್ತ ಶಿಕ್ಷಕ ಎಂ.ರುದ್ರಯ್ಯ, ಕೆ.ಎನ್. ರೇವಣಸಿದ್ದಪ್ಪ, ಕಡದಕಟ್ಟೆ ದಾನಪ್ಪ, ಚನ್ನಪ್ಪಸ್ವಾಮಿ ಜನಕಲ್ಯಾಣ ಸೇವಾ ಟ್ರಸ್ಟ್ ಪದಾಧಿಕಾರಿಗಳಿದ್ದರು.- - - -5ಎಚ್.ಎಲ್.ಐ1:
ಭೀಮನ ಅಮಾವಾಸ್ಯೆ ಪೂಜಾ ಕಾರ್ಯಕ್ರಮ, ಶ್ರೀಗುರು ಚನ್ನೇಶ್ವರ ಬೆಳ್ಳಿ ರಥೋತ್ಸವ ಕಾರ್ಯಕ್ರಮದಲ್ಲಿ ಡಾ.ಒಡೆಯರ್ ಚನ್ನಮಲ್ಲಿಕಾರ್ಜನ ಸ್ವಾಮೀಜಿ ಮಾತನಾಡಿದರು.