ಕನ್ನಡಪ್ರಭ ವಾರ್ತೆ ಅಮೀನಗಡ
ಸೂಳೇಬಾವಿಯ ಶಾಖಾಂಬರಿ ನೇಕಾರ ಸಹಕಾರ ಸಂಘದಲ್ಲಿ, ನೇಕಾರರ ಮಿತವ್ಯಯ ಹಣ ಹಾಗೂ ಪಕ್ಕಾಮಾಲು ವಹಿವಾಟಿನಲ್ಲಿ ಅವ್ಯವಹಾರ ಆಗಿರೋದು ನಿಜ. ಅದನ್ನು ಶೀಘ್ರ ಸರಿಪಡಿಸುತ್ತೇವೆ ಎಂದು ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ, ನೇಕಾರ ಧುರೀಣ ರವೀಂದ್ರ ಕಲಬುರ್ಗಿ ಹೇಳಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘ ನಮ್ಮ ಊರಿನಲ್ಲಿ ಅಂದಿನ ಹಿರಿಯರ ಮಾರ್ಗದರ್ಶನದಲ್ಲಿ ಬಡ ನೇಕಾರರ ಕುಟುಂಬಗಳಿಗೆ ಆಶ್ರಯವಾಗಲೆಂಬ ಸದುದ್ದೇಶದಿಂದ ಪ್ರಾರಂಭಗೊಂಡಿದ್ದು, ನೂರಾರು ಕುಟುಂಬಗಳಿಗೆ ಸರ್ಕಾರ, ಕೈಮಗ್ಗ ಇಲಾಖೆ ಇಲಾಖೆಯಿಂದ ಬರುವ ಸೌಲಭ್ಯಗಳು ದೊರಕುವಂತೆ, ಸಂಘದ ಪ್ರತಿಯೊಂದು ಚಟುವಟಿಕೆಗಳೂ ಪಾರದರ್ಶಕ ವ್ಯವಹಾರ, ವಹಿವಾಟು ನಡೆಯುತ್ತಿದ್ದು, ಸಂಘಕ್ಕೆ ರಾಷ್ಟ್ರೀಯ ಪ್ರಶಸ್ತಿ ದೊರೆಯುವ ಮೂಲಕ ಇಡೀ ರಾಜ್ಯದಲ್ಲೇ ಅತ್ಯುತ್ತಮ ಸಂಘವೆಂಬ ಮನ್ನಣೆಗೆ ಒಳಪಟ್ಟಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಚುನಾವಣೆಗಳು ಆಗುತ್ತ ಕಾಲಕಾಲಕ್ಕೆ ಲೆಕ್ಕಪತ್ರ ಪರಿಶೀಲನೆಯೂ ಆಗುವುದರ ಮೂಲಕ ಸಂಘ ಪಾರದರ್ಶಕತೆ ಪ್ರದರ್ಶಿಸಿದೆ.ನಾವು, ರವೀಂದ್ರ ಕಲಬುರ್ಗಿ ಹಾಗೂ ಗ್ರಾಮದ ಹಿರಿಯರು ಈ ಸಂಘದ ಹಿತೈಷಿಗಳಾಗಿ ಮಧ್ಯೆ ಪ್ರವೇಶಿಸಿ, ಕೂಲಂಕಶವಾಗಿ ಪರಿಶೀಲಿಸಿದಾಗ ಸಂಘಕ್ಕೆ ನಾಲ್ಕು ತಿಂಗಳ ಹಿಂದೆ ನೂತನ ಅಧ್ಯಕ್ಷ, ಪದಾಧಿಕಾರಿಗಳು ಆಯ್ಕೆಗೊಂಡಿದ್ದಾರೆ. ಈ ಹಿಂದಿನ ಅಧ್ಯಕ್ಷರು ಸರಿಯಾಗಿ ವ್ಯವಹಾರ ನೋಡಿಕೊಳ್ಳಬೇಕಿತ್ತು. ಕಾರ್ಯದರ್ಶಿ ಸರಿಯಾಗಿ ಮಾಡಿರುತ್ತಾರೆಂಬ ನಂಬಿಕೆ ಮೇಲೆ ಬಿಟ್ಟು ನಿರ್ಲಕ್ಷಿಸಿದ್ದಾರೆ. ಕಾರ್ಯದರ್ಶಿ ಬಿ.ಎನ್.ರಾಮದುರ್ಗ ಅವರು ₹1.18 ಕೋಟಿ ಮಿತವ್ಯಯ ಹಣ ದುರುಪಯೋಗ ಪಡಿಸಿಕೊಂಡಿದ್ದು, ವ್ಯಾಪಾರ ವಹಿವಾಟಿನ ಖಾತೆಯಲ್ಲಿ ₹ 30 ಲಕ್ಷ ಸದಸ್ಯರಿಗೆ ಸಾಲದ ರೂಪದಲ್ಲಿ ನೀಡಿರುವುದು ಕಂಡು ಬಂದಿದೆ ಎಂದರು.
ಇದರ ಬಗ್ಗೆ ನಾವು ಹಿರಿಯರು, ಪದಾಧಿಕಾರಿಗಳನ್ನು ವಿಚಾರಿಸಿದಾಗ, ಸಂಘದ ವ್ಯವಹಾರ ಖಾತೆಯಲ್ಲಿ ಸದಸ್ಯರು ತೆಗೆದುಕೊಂಡಿರುವ ಹಣ ಸತ್ಯವಾಗಿದೆ. ₹1.18 ಕೋಟಿ ಮಿತವ್ಯಯ ಹಣವನ್ನು ಕಾರ್ಯದರ್ಶಿ ದುರ್ಬಳಕೆ ಮಾಡಿಕೊಂಡಿರುವುದು ಒಪ್ಪಿಕೊಂಡಿದ್ದಾನೆ.₹1.18 ಕೋಟಿ ಹಣವನ್ನು ಪ್ಲಾಟ್, ಮನೆ ಮಾರಿ ಹಿಂತಿರುಗಿಸುವುದಾಗಿ ಬಾಂಡ್‌ನಲ್ಲಿ ಲಿಖಿತ ಬರೆದುಕೊಟ್ಟಿದ್ದಾನೆ. ಈಗಾಗಲೇ ₹10 ಲಕ್ಷ ವಸೂಲಿಯಾಗಿದ್ದು, ಕಾರ್ಯದರ್ಶಿಯ ಆಸ್ತಿಯನ್ನು ಬೇರೆಯವರಿಗೆ ವರ್ಗಾಯಿಸಿ ಕೊಡಬೇಕಾಗಿರುವುದರಿಂದ ಅದಕ್ಕೆ ಬೇಕಾದ ಪೂರಕ ದಾಖಲಾತಿಗಳ ಸಂಗ್ರಹಕ್ಕೆ ತಾಂತ್ರಿಕ ಅಡಚಣೆಗಳಿದ್ದು, ಅತಿ ಶೀಘ್ರವಾಗಿ ಎಂದರೂ 4-5 ತಿಂಗಳಲ್ಲಿ ಸಂಪೂರ್ಣ ವಸೂಲಾತಿ ಮಾಡಿ ಸಂಘಕ್ಕೆ ಭರಿಸಲಾಗುವುದು. ನೇಕಾರರು ಯಾವುದೇ ಆತಂಕಪಡಬೇಕಾಗಿಲ್ಲ. ಇನ್ನು ಮುಂದೆ ಈ ರೀತಿ ಆಗದಂತೆ ಎಚ್ಚರವಹಿಸಲಾಗುವುದು ಎಂದು ಭರವಸೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ರವೀಂದ್ರ ಕಲಬುರ್ಗಿ, ಸಂಘದ ಅಧ್ಯಕ್ಷ ಪ್ರವೀಣ ರಾಮದುರ್ಗ, ಹಿಂದಿನ ಅಧ್ಯಕ್ಷ ಕೆ.ಎಸ್.ರಾಮದುರ್ಗ, ಪದಾಧಿಕಾರಿಗಳು ಇದ್ದರು.