ಕನ್ನಡಪ್ರಭ ವಾರ್ತೆ ಆಲಮಟ್ಟಿ
ಆಲಮಟ್ಟಿ ಜಲಾಶಯದಿಂದ ತೆಲಂಗಾಣಕ್ಕೆ ಸುಮಾರು 10 ಟಿಎಂಸಿ ನೀರನ್ನು ಬಿಟ್ಟಿದ್ದು ಈ ಭಾಗದ ಸಂತ್ರಸ್ತರಿಗೆ ಮಾಡಿದ ಅನ್ಯಾಯ. ಇನ್ನು ಮುಂದೆ ಜಲಾಶಯದಿಂದ ನೀರು ಬಿಡುವುದನ್ನು ನಿಲ್ಲಿಸಿ, ಸಂತ್ರಸ್ತರ ಜಮೀನುಗಳಿಗೆ ಜೂ.15ರವರೆಗೆ ಮುಳವಾಡ ಏತ ನೀರಾವರಿ ಮೂಲಕ ನೀರನ್ನು ಬಿಡಬೇಕು ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಆಗ್ರಹಿಸಿದರು.ಆಲಮಟ್ಟಿಯ ಚಂದ್ರಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಅಲ್ಲಿಂದ ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯವರೆಗೆ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಮುಳವಾಡ ಏತ ನೀರಾವರಿಯಿಂದ ವಂಚಿತವಾಗಿರುವ ಕೂಡಗಿ ಎನ್.ಟಿ.ಪಿ.ಸಿ ಹತ್ತಿರದ ಅಂಗಡಗೇರಿ, ಬೀರಲದಿನ್ನಿ ಗ್ರಾಮ ಪಂಚಾಯತಿ, ಗೊಳಸಂಗಿ ಗ್ರಾಮ ಪಂಚಾಯತಿ, ತೆಲಗಿ ಗ್ರಾಮ ಪಂಚಾಯತಿ, ವಂದಾಲ ಗ್ರಾಮ ಪಂಚಾಯತಿ, ಬೇನಾಳ ಆರ್.ಎಸ್ ಗ್ರಾಮ ಪಂಚಾಯತಿ, ಚಿಮ್ಮಲಗಿ ಈ ಭಾಗದಲ್ಲಿನ ನೀರಾವರಿಯಿಂದ ವಂಚಿತವಾಗಿರುವ ಜಮೀನಿಗೆ ನೀರು ಬಿಡಬೇಕು. ಅದಕ್ಕಾಗಿ ಕಾಲುವೆಗಳ ಜಾಲ ವಿಸ್ತರಿಸಬೇಕು ಎಂದು ಆಗ್ರಹಿಸಿದರು.
ಕೊಲ್ಹಾರ ಪಟ್ಟಣ ಪಂಚಾಯತಿ ವ್ಯಾಪ್ತಿಯ ಕೊಲ್ದಾರ ಪಶ್ಚಿಮ ದಿಕ್ಕಿನ ನೀರಾವರಿ ವಂಚಿತ ಭೂಮಿಗಳಿಗೆ ನೀರಾವರಿಗೆ ಒಳಪಡಿಸುವುದು. ಆಲಮಟ್ಟಿ ಜಲಾಶಯವನ್ನು 519 ಅಡಿದಿಂದ 524ರವರೆಗೆ ನೀರು ನಿಲ್ಲಿಸುವ ಕಾರ್ಯಕ್ರಮಕ್ಕೆ ಸುಮಾರು ₹ 1 ಲಕ್ಷ ಕೋಟಿ ಅನುದಾನ ಬೇಕಾಗಿರುವುದನ್ನು ಮಂಜೂರು ಮಾಡುವುದು, ಆಲಮಟ್ಟಿಯ ಲಾಲ್ ಬಹದ್ದೂರ ಶಾಸ್ತ್ರಿ ಜಲಾಶಯ ಹಾಗೂ ನಾರಾಯಣಪೂರ ಬಸವಸಾಗರ ಜಲಾಶಯಗಳ ನೀರಾವರಿ ಯೋಜನೆಗಳಿಗೆ ಈಗಾಗಲೆ ಹಂಚಿಕೆಯಾದ ನೀರನ್ನು ಪರಿಷ್ಕರಣೆ ಮಾಡಿ ಎರಡು ಜಲಾಶಯಗಳ ಅಚ್ಚುಕಟ್ಟು ಪ್ರದೇಶ ಹಂಚಿಕೆ ಮಾಡಿ ರೈತರ ಹಿತ ಕಾಪಾಡಬೇಕು ಎಂದು ಬೆಳ್ಳುಬ್ಬಿ ಆಗ್ರಹಿಸಿದರು.ಆಲಮಟ್ಟಿ ಜಲಾಶಯ ಉತ್ತರ ಕರ್ನಾಟಕದ ಜೀವ ನದಿಯಾಗಿದೆ. ಈ ಯೋಜನೆಗೆ ಭೂಮಿ ಮನೆ-ಮಠಗಳನ್ನು ಕಳೆದುಕೊಂಡು ಸಂಪೂರ್ಣ ನಿರಾಶ್ರೀತರಾದ ವಿದ್ಯಾವಂತ ಯುವಕರಿಗೆ ಮುಳುಗಡೆಯ ಅಧಿಸೂಚನೆ ದಿನಾಂಕ ಪರಿಗಣಿಸದೆ ಮುಳಗಡೆ ಪ್ರಮಾಣ ಪತ್ರ ನೀಡಬೇಕು. ಅಲ್ಲದೇ ನೌಕರಿ ಹಾಗೂ ಶಿಕ್ಷಣದಲ್ಲಿ ಮುಳುಗಡೆ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂದು ಎಂದರು.
ನೀರಾವರಿಗೆ ಹಣವೇ ಇಲ್ಲ:ಮುಖ್ಯಮಂತ್ರಿ ಸಿದ್ರಾಮಯ್ಯನವರು ಹಿಂದೆ ಕೃಷ್ಣಾ ಮೇಲ್ದಂಡೆ ಯೋಜನೆಗೆ ವರ್ಷಕ್ಕೆ ₹ 50 ಸಾವಿರ ಕೋಟಿ ಕೊಡುವುದಾಗಿ ಭರವಸೆ ಕೊಟ್ಟಿದ್ದರು. ಈ ವರ್ಷದ ಬಜಟ್‌ನಲ್ಲಿ ರಾಜ್ಯದ ಎಲ್ಲಾ ನೀರಾವರಿ ಸೇರಿ ₹ 22 ಸಾವಿರ ಕೋಟಿ ನಿಗದಿ ಮಾಡಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆಯ ವಿಷಯ ಪ್ರಸ್ತಾಪವೇ ಆಗಿಲ್ಲ ಎಂದು ದೂರಿದರು.
ಈ ಸಂದರ್ಭದಲ್ಲಿ ಕೊಲ್ಹಾರದ ಕೈಲಾಸನಾಥ ಸ್ವಾಮೀಜಿ, ಅಂಗಡಗೇರಿಯ ರುದ್ರಮುನಿ ಸ್ವಾಮೀಜಿ, ಕಸ್ತೂರಿ ಬೆಳ್ಳುಬ್ಬಿ, ರಾಜಶ್ರೀ ಯರನಾಳ, ಶಿವಾನಂದ ಅವಟಿ, ಆನಂದ ಬಿಷ್ಟಗೊಂಡ, ಗುರುಲಿಂಗಪ್ಪ ಅಂಗಡಿ, ಸಂತೋಷ ನಾಯಕ, ಬಸವರಾಜ ಬಾಗೇವಾಡಿ, ಬಾಲಚಂದ್ರ ನಾಗರಾಳ, ಬಿ.ಎಚ್.ಗಣಿ, ಸಂತೋಷ ಕಡಿ, ಪ್ರಶಾಂತ ಪವಾರ ಮತ್ತಿತರರು ಇದ್ದರು. ಮುಖ್ಯ ಎಂಜಿನಿಯರ್ ಡಿ.ಬಸವರಾಜ, ಕಾರ್ಯನಿರ್ವಾಹಕ ಎಂಜಿನಿಯರ್ ಸುಧೀರ ಸಜ್ಜನ, ಅಧೀಕ್ಷಕ ವಿ.ಆರ್.ಹಿರೇಗೌಡರ ಮನವಿ ಸ್ವೀಕರಿಸಿದರು.