ಭ್ರಷ್ಟಾಚಾರಕ್ಕಾಗಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಿರುವುದು ರಾಜ್ಯದ ದುರದೃಷ್ಟ-ಪಿ. ರಾಜೀವ

KannadaprabhaNewsNetwork | Published : Sep 10, 2024 1:31 AM

ಸಾರಾಂಶ

ರಾಜ್ಯದಲ್ಲಿ ದಿನಕ್ಕೊಂದು ಭ್ರಷ್ಟಾಚಾರ ಪ್ರಕರಣ ಬೆಳಕಿಗೆ ಬರುತ್ತಿದೆ. ಭ್ರಷ್ಟಾಚಾರದ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಿರುವುದು ರಾಜ್ಯದ ದುರದೃಷ್ಟಕರ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪಿ. ರಾಜೀವ ಹೇಳಿದರು.

ಹಾವೇರಿ: ರಾಜ್ಯದಲ್ಲಿ ದಿನಕ್ಕೊಂದು ಭ್ರಷ್ಟಾಚಾರ ಪ್ರಕರಣ ಬೆಳಕಿಗೆ ಬರುತ್ತಿದೆ. ಭ್ರಷ್ಟಾಚಾರದ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಿರುವುದು ರಾಜ್ಯದ ದುರದೃಷ್ಟಕರ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪಿ. ರಾಜೀವ ಹೇಳಿದರು.ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಸಿಎಂ ಸಿದ್ದರಾಮಯ್ಯ ಎರಡು ಬಾರಿ ರಾಜಸ್ವ ಕೊರತೆಯ ಬಜೆಟ್ ಮಂಡಿಸಿದ್ದಾರೆ. ಎರಡು, ಮೂರು ವರ್ಷ ಹೀಗೆಯೇ ಮುಂದುವರಿದರೆ ಸಾಲದ ಸುಳಿಯಲ್ಲಿ ರಾಜ್ಯ ಸಿಲುಕಿಕೊಳ್ಳುತ್ತದೆ. ಸಿದ್ದರಾಮಯ್ಯ ಹಿಂದಿನ ಬಜೆಟ್‌ಗಳಲ್ಲಿ ರಾಜಸ್ವ ಕೊರತೆ ಇಲ್ಲದ ಬಜೆಟ್ ಕೊಟ್ಟಿದ್ದೇನೆ ಎಂದು ಗರ್ವದಿಂದ ಹೇಳುತ್ತಿದ್ದರು. ಆದರೆ, ಕಳೆದ ಬಾರಿ ₹12,500 ಕೋಟಿ ರಾಜಸ್ವ ಕೊರತೆಯ ಬಜೆಟ್ ಮಂಡಿಸಿದ್ದಾರೆ. ಈ ಬಾರಿ ₹25,000 ಕೋಟಿ ಆಗಿದೆ. ಸರ್ಕಾರದ ₹1.5 ಲಕ್ಷ ಕೋಟಿ ಸಾಲದಲ್ಲಿ ರಾಜಸ್ವ ಕೊರತೆಗೆ ಭಾಗಶಃ ಹಣ ವ್ಯಯಿಸಲಾಗುತ್ತದೆ. ದೇಶದಲ್ಲೇ ಸುಭದ್ರವಾಗಿದ್ದ ಸರ್ಕಾರ ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುವ ಆತಂಕ ಎದುರಾಗಿದೆ ಎಂದರು.ಕೆಐಡಿಬಿಯಲ್ಲಿ ಒಂದು ನಿವೇಶನಕ್ಕೆ ₹50 ಲಕ್ಷ ಲಂಚ ಕೊಡಬೇಕಿದೆ. ಈ ಕುರಿತು ಬಿಜೆಪಿ ಹೈಕೋರ್ಟ್ ಮೊರೆ ಹೋಗಲು ಸಿದ್ಧತೆ ನಡೆಸಿದೆ. ಕಾಂಗ್ರೆಸ್ ಸರ್ಕಾರಕ್ಕೆ ಎಲ್ಲ ಆಸ್ಪತ್ರೆಗಳಿಗೆ ಪ್ಯಾರಾಸಿಟಮಲ್ ಔಷಧ ಸರಬರಾಜು ಮಾಡಲಾಗುತ್ತಿಲ್ಲ. ಬಿತ್ತನೆ ಬೀಜ, ಪೆಟ್ರೋಲ್ ಸೇರಿದಂತೆ ಎಲ್ಲದರಲ್ಲೂ ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ರಾಜ್ಯದ ಹಾಲು ಉತ್ಪಾದಕರಿಗೆ ಸರ್ಕಾರ ₹1,450 ಕೋಟಿ ಸಹಾಯಧನ ಬಾಕಿ ಉಳಿಸಿಕೊಂಡಿದೆ. ರೈತರ ಹಣ ಬಾಕಿ ಉಳಿಸಿಕೊಂಡ ಹೊಣೆಗೇಡಿ ಸರ್ಕಾರ ಇದು. ಸಾರಿಗೆ ನಿಗಮದ ನೌಕರರಿಗೆ ₹1,200 ಕೋಟಿಗೂ ಅಧಿಕ ಗ್ರಾಚುಟಿ ಹಣ ಬಾಕಿ ಉಳಿಸಿಕೊಂಡಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ, ಮಾಜಿ ಶಾಸಕ ಶಿವರಾಜ ಸಜ್ಜನರ, ರಾಜ್ಯ ಉಪಾಧ್ಯಕ್ಷೆ ಡಾ.ಶೋಭಾ ನಿಸ್ಸೀಮಗೌಡ್ರ, ಡಾ. ಬಸವರಾಜ ಕೇಲಗಾರ, ಭೋಜರಾಜ ಕರೂದಿ, ಮಂಜುನಾಥ ಓಲೇಕಾರ ಇತರರು ಇದ್ದರು. ಶಿಗ್ಗಾಂವಿಗೆ ಅರ್ಹ ಅಭ್ಯರ್ಥಿ ಆಯ್ಕೆ: ಶಿಗ್ಗಾಂವಿ ಉಪ ಚುನಾವಣೆ ಸಿದ್ಧತೆ ಕುರಿತು ರಾಜ್ಯ ಪ್ರಭಾರಿ ನೇತೃತ್ವದಲ್ಲಿ ಶೀಘ್ರದಲ್ಲೇ ಸಭೆ ನಡೆಯಲಿದೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿ ನಿರಂತರವಾಗಿ ಗೆಲುವು ಸಾಧಿಸಿದೆ. ಭರತ ಬೊಮ್ಮಾಯಿ ಸೇರಿದಂತೆ ಹಲವರು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಕುಟುಂಬ ರಾಜಕಾರಣವನ್ನು ಬಿಜೆಪಿ ಯಾವತ್ತೂ ವಿರೋಧಿಸಿದೆ. ಸಮೀಕ್ಷೆ ಮಾಡಿದ ಬಳಿಕ ಹೈಕಮಾಂಡ್ ಅರ್ಹರನ್ನು ಆಯ್ಕೆ ಮಾಡುತ್ತದೆ ಎಂದು ಪಿ .ರಾಜೀವ ಹೇಳಿದರು.

Share this article