ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ಮಕ್ಕಳಲ್ಲಿ ಪರಿಸರ ಪ್ರೇಮ ಬೆಳೆಸುವುದು ಅತಿ ಮುಖ್ಯವಾಗಿದೆ ಎಂದು ರೋಟರಿ ಕಬ್‌ನ ಖಜಾಂಚಿ ಎಸ್.ಎಸ್.ಶಾಂತಕುಮಾರ್ ಸಲಹೆ ನೀಡಿದರು.ಗುಬ್ಬಿಗಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರೋಟರಿ ಕ್ಲಬ್, ಇನ್ನರ್ ವೀಲ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ನಡೆದ ಶಾಲೆಯ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಅನೇಕ ಕಡೆ ನೆಟ್ಟ ಗಿಡಗಳು 1ವರ್ಷವೂ ಇರುವುದಿಲ್ಲ. ಗಿಡ ನೆಡುವುದರ ಜೊತೆಗೆ ಗಿಡದ ಜೋಪಾನವೂ ಅಷ್ಟೇ ಮುಖ್ಯವಾಗುತ್ತದೆ. ಗುಬ್ಬಿಗಾ ಶಾಲೆಯ ಪರಿಸರ ಚೆನ್ನಾಗಿದ್ದು ಶಾಲೆಯವರು, ಮಕ್ಕಳು ನೆಟ್ಟ ಗಿಡಗಳನ್ನು ಚೆನ್ನಾಗಿ ಪೋಷಣೆ ಮಾಡಬೇಕು ಎಂದು ಸಲಹೆ ನೀಡಿದರು.
ಅತಿಥಿಯಾಗಿದ್ದ ರೋಟರಿ ಕ್ಲಬ್ ಅಧ್ಯಕ್ಷ ದಿವಾಕರ್ ಮಾತನಾಡಿ, ಇಂದು ರೋಟರಿ ಸಂಸ್ಥೆಯಿಂದ ಸ್ವಾತಂತ್ರ್ಯೋತ್ಸವದ ನೆನಪಿಗಾಗಿ ಗುಬ್ಬಿಗಾ ಶಾಲೆಗೆ ತೆಂಗಿನ ಗಿಡ, ಗಸಗಸೆ ಗಿಡ ನೀಡಿದ್ದೇವೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರನ್ನು ಇಂದು ನೆನಪಿಸಿಕೊಳ್ಳಬೇಕಾಗಿದೆ ಎಂದರು.ಶಾಲೆಯ ಮುಖ್ಯೋಪಾಧ್ಯಾಯ ಅಶೋಕ್ ಮಾತನಾಡಿ, ಗುಬ್ಬಿಗಾ ಸರ್ಕಾರಿ ಶಾಲೆಯಲ್ಲಿ ವ್ಯವಸ್ಥಿತವಾಗಿ ಕೈತೋಟ ಮಾಡಿದ್ದೇವೆ. 300 ಅಡಿಕೆ ನೆಟ್ಟಿದ್ದು ಮುಂದೆ ಅಡಿಕೆ ತೋಟದಿಂದ ಶಾಲೆಗೆ ವರಮಾನ ಬರಲಿದ್ದು ಶಾಲೆಗೆ ಆಸ್ತಿಯಾಗಲಿದೆ. ಮಕ್ಕಳ ಆಟಕ್ಕಾಗಿ ಕ್ರೀಡಾ ಸಾಮಾಗ್ರಿಯ ವ್ಯವಸ್ಥೆ ಮಾಡಲಾಗಿದೆ. ಶಾಲೆಯು ಅಭಿವೃದ್ದಿ ಹೊಂದಿದ್ದು ಪೋಷಕರು ನಮ್ಮ ಶಾಲೆಗೆ ಮಕ್ಕಳನ್ನು ಸೇರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಿವೃತ್ತ ಸೈನಿಕ ಎಲ್ದೋಸ್ ಹಾಗೂ ಡೇವೀಸ್ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ್ ಧ್ವಜಾರೋಹಣ ನೆರವೇರಿಸಿದರು.ಅತಿಥಿಗಳಾಗಿ ಗುಬ್ಬಿಗಾ ಗ್ರಾಪಂ ಅಧ್ಯಕ್ಷೆ ನಾಗರತ್ನ, ಶಾಲೆಯ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಧುಕುಮಾರ್, ಎಸ್‌ಡಿಎಂಸಿ ಉಪಾಧ್ಯಕ್ಷೆ ಸವಿತ, ರೋಟರಿ ಸಂಸ್ಥೆಯ ಕಾರ್ಯದರ್ಶಿ ಮಧು ವೆಂಕಟೇಶ್, ರೋಟರಿ ಸಂಸ್ಥೆಯ ಪದಾಧಿಕಾರಿಗಳಾದ ವಿನಯ್, ವಿದ್ಯಾನಂದಕುಮಾರ್, ರಾಜಕುಮಾರ್, ಲೋಕೇಶ್, ಸದಸ್ಯರಾದ ಚೇತನ್,ಎಸ್.ಟಿ.ಗೌಡ,ಸಚಿತ್, ಇನ್ನರ್ ವೀಲ್ ಸಂಸ್ಥೆಯ ಐಎಸ್‌ಒ ನಾಗಲಕ್ಷ್ಮಿ, ಕಾರ್ಯದರ್ಶಿ ರಾಧಿಕ ಅರ್ಜುನ್, ಸದಸ್ಯೆ ಪೂರ್ಣಿಮ ಇದ್ದರು.