ಸೇನೆ ವಿರುದ್ಧ ಮಾತಾಡೋದು ತಪ್ಪು: ಶಾಸಕ ಆರ್.ವಿ. ದೇಶಪಾಂಡೆ

KannadaprabhaNewsNetwork |  
Published : May 17, 2025, 01:16 AM IST
ಸ | Kannada Prabha

ಸಾರಾಂಶ

ನಮ್ಮ ಸೇನೆಯ ಬಗ್ಗೆ ಗೌರವ, ಅಭಿಮಾನ ಇರಬೇಕು. ಸೇನೆಯ ಬಗ್ಗೆ ಯಾರಾದರೂ ವಿರೋಧವಾಗಿ ಮಾತನಾಡಿದರೆ ಅದು ತಪ್ಪು

ಕಾರವಾರ: ನಮ್ಮ ಸೇನೆಯ ಬಗ್ಗೆ ಗೌರವ, ಅಭಿಮಾನ ಇರಬೇಕು. ಸೇನೆಯ ಬಗ್ಗೆ ಯಾರಾದರೂ ವಿರೋಧವಾಗಿ ಮಾತನಾಡಿದರೆ ಅದು ತಪ್ಪು ಎಂದು ಶಾಸಕ ಆರ್.ವಿ. ದೇಶಪಾಂಡೆ ಅಭಿಪ್ರಾಯಪಟ್ಟರು.

ಕಾರವಾರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿರು. ಪಾಕಿಸ್ತಾನ ಒಂದು ಭಯೋತ್ಪಾದಕ ರಾಷ್ಟ್ರ. ಅವರು ಯುದ್ಧದಲ್ಲಿ ಸೋತಿದ್ದಾರೆ. ಅವರು ಸುಧಾರಿಸಬೇಕು. ಪಾಕಿಸ್ತಾನವೂ ಅಭಿವೃದ್ಧಿ ಹೊಂದಬೇಕು. ಭಾರತ-ಪಾಕಿಸ್ತಾನ ಸಂಬಂಧ ಉತ್ತಮವಾಗಿರಬೇಕು. ಆದರೆ, ಪ್ರೀತಿ, ವಿಶ್ವಾಸ ಮತ್ತು ಶಾಂತಿಗೆ ಚ್ಯುತಿ ಬಂದಾಗ ಏನು ಮಾಡಬೇಕು ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರ ಎರಡು ವರ್ಷಗಳ ಕಾಲ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಆಡಳಿತ, ಅಭಿವೃದ್ಧಿ ಹಾಗೂ ಕಾನೂನು-ಸುವ್ಯವಸ್ಥೆಗೆ ಸಂಬಂಧಿಸಿದ ಉತ್ತಮ ಕಾರ್ಯಗಳನ್ನು ಮಾಡಲಾಗಿದೆ ಎಂದು ದೇಶಪಾಂಡೆ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವರ ನೇಮಕದ ಬಗ್ಗೆ, ಯಾರನ್ನು ಏನು ಮಾಡಬೇಕು ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ನಿರ್ಧರಿಸುತ್ತಾರೆ. ಇದರ ಬಗ್ಗೆ ನಾನೇನೂ ಹೇಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನಾನು 9 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದೇನೆ. ಆದರೆ, ಮಂತ್ರಿ ಪದವಿ ನೀಡಬೇಕೆಂದು ಕೇಳುವುದರಿಂದ ಗೌರವ ಬರುವುದಿಲ್ಲ. ಜಿಲ್ಲಾ ಸಚಿವರು ತಮ್ಮ ಸಾಮರ್ಥ್ಯದಂತೆ ಕೆಲಸ ಮಾಡುತ್ತಿದ್ದಾರೆ. ಜನರ ನಿರೀಕ್ಷೆಗಳನ್ನು ಪೂರೈಸಿದ್ದಾರೆಯೋ ಇಲ್ಲವೋ ಎಂಬುದನ್ನು ಜನರೇ ನಿರ್ಣಯಿಸಬೇಕು ಎಂದು ತಿಳಿಸಿದರು.

ಜಿಲ್ಲೆಯ ಪ್ರವಾಸೋದ್ಯಮವನ್ನು ಮತ್ತಷ್ಟು ಅಭಿವೃದ್ಧಿಪಡಿಸಬೇಕು ಎಂದು ದೇಶಪಾಂಡೆ ಅಭಿಪ್ರಾಯಪಟ್ಟರು. ನಾನು ಸಚಿವರಾಗಿದ್ದಾಗ ರಾಕ್ ಗಾರ್ಡನ್ ಮತ್ತು ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಿದ್ದೇನೆ. ಈಗ ಜಿಲ್ಲಾಧಿಕಾರಿಯೊಂದಿಗೆ ಈ ವಿಷಯದಲ್ಲಿ ಮಾತನಾಡಿದ್ದೇನೆ ಎಂದರು.

ಹಾಲಕ್ಕಿ ಒಕ್ಕಲಿಗರು, ಕುಣಬಿ, ಮರಾಠಾ ಸಮುದಾಯಕ್ಕೆ ಎಸ್ಟಿ ಹಕ್ಕು ನೀಡುವ ಬಗ್ಗೆ ಮತ್ತೆ ಮುಖ್ಯಮಂತ್ರಿಯೊಂದಿಗೆ ಮಾತನಾಡಿದ್ದೇನೆ ಎಂದು ತಿಳಿಸಿದರು. ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ವಿನಂತಿಸಿದ್ದೇನೆ. ಆದರೆ ಇದನ್ನು ಮಾಡಲು ನನಗೆ ಅಧಿಕಾರ ಇಲ್ಲದಿರಬಹುದು. ಆದರೂ ಜನರ ಸೇವೆಗೆ ನಾನು ಸದಾ ಸಿದ್ಧ ಎಂದರು.

ಜೀವನ ಕ್ಷಣಿಕ. ಅಧಿಕಾರ ಎಷ್ಟು ಕ್ಷಣಿಕವಾದುದು ಎಂಬುದನ್ನು ಯೋಚಿಸಬೇಕು. ಅವಕಾಶ ಸಿಕ್ಕಾಗ ಸರಿಯಾಗಿ ಕರ್ತವ್ಯ ನಿರ್ವಹಿಸಬೇಕು. ಅಧಿಕಾರದ ಹಂಬಲವಿರಬಾರದು ಎಂದು ಆರ್.ವಿ. ದೇಶಪಾಂಡೆ ಹೇಳಿದರು.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ