ನೀರು ಪೂರೈಕೆಯಲ್ಲಿ ತಾರತಮ್ಯ, ಲಕ್ಕುಂಡಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ

KannadaprabhaNewsNetwork |  
Published : May 17, 2025, 01:15 AM IST
ಗದಗ ತಾಲೂಕಿನ ಲಕ್ಕುಂಡಿಯ 4ನೇ ವಾಡಿನ ಮಹಿಳೆಯರು ಕುಡಿಯುವ ನೀರು ಪೊರೈಕೆಯ ತಾರತಮ್ಯ ನೀತಿಯನ್ನು ವಿರೋಧಿಸಿ ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಕುಡಿಯುವ ನೀರು ಪೂರೈಕೆಯಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವುದನ್ನು ವಿರೋಧಿಸಿ ತಾಲೂಕಿನ ಲಕ್ಕುಂಡಿ ಗ್ರಾಮದ 4ನೇ ವಾರ್ಡಿನ ಮಹಿಳೆಯರು ಶುಕ್ರವಾರ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಗದಗ: ಕುಡಿಯುವ ನೀರು ಪೂರೈಕೆಯಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವುದನ್ನು ವಿರೋಧಿಸಿ ತಾಲೂಕಿನ ಲಕ್ಕುಂಡಿ ಗ್ರಾಮದ 4ನೇ ವಾರ್ಡಿನ ಮಹಿಳೆಯರು ಶುಕ್ರವಾರ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಖಾಲಿ ಕೊಡ ಹಿಡಿದುಕೊಂಡು ಗ್ರಾಮ ಪಂಚಾಯಿತಿಗೆ ಆಗಮಿಸಿದ ಮಹಿಳೆಯರು ಗ್ರಾಮ ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಚನ್ನಮ್ಮ ಕಂಠಿ, ರೇಣುಕಾ ಬೇಲೇರಿ, ವಿಜಯಲಕ್ಷ್ಮೀ ಕುಲಕರ್ಣಿ ಮಾತನಾಡಿ, ಕಳೆದ 8 ತಿಂಗಳಿಂದ 4ನೇ ವಾರ್ಡಿನ ನಮ್ಮ ಭಾಗದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಗ್ರಾಮ ಪಂಚಾಯಿತಿಯು ತಾರತಮ್ಯ ಮಾಡುತ್ತಿದೆ. 8 ತಿಂಗಳಿಂದ 150 ಮೀಟರ್ ದೂರವಿರುವ ಸಿಸ್ಟನ್ ಮೂಲಕ ನೀರು ತರಲಾಗುತ್ತಿದ್ದು, ಪಕ್ಕದ ವಾರ್ಡಿನಲ್ಲಿ ಪ್ರತಿ ದಿನ ನೀರು ಪೊರೈಕೆ ಮಾಡಿ ತಾರತಮ್ಯ ಮಾಡುತ್ತಿದ್ದಾರೆ. ಈ ಕುರಿತು ವಾಲ್‌ಮನ್‌ನ್ನು ಕೇಳಿದರೇ ಹಾರಿಕೆ ಉತ್ತರ ನೀಡಿ ಸ್ಪಂದಿಸುತ್ತಿಲ್ಲ. ಇನ್ನೂ ನಮ್ಮ ವಾರ್ಡಿನ ಜನ ಪ್ರತಿನಿಧಿಗಳಿಗೆ ನೀರು ಪೊರೈಕೆ ಸರಿಪಡಿಸಲು ವಿನಂತಿಸಿಕೊಂಡರೆ ಕಾಳಜಿ ವಹಿಸುತ್ತಿಲ್ಲ. ನೀವೇ ಗ್ರಾಮ ಪಂಚಾಯಿತಿಗೆ ಹೋಗಿರಿ ಎಂದು ಹೇಳುತ್ತಾರೆ. ಪೋನ್ ಮಾಡಿದರೆ ಸ್ವೀಚ್ ಆಫ್ ಮಾಡಿ ಇಟ್ಟುಕೊಳ್ಳುತ್ತಾರೆ. ಹಲವು ಬಾರಿ ಗ್ರಾಪಂ ಅಧಿಕಾರಿಗಳಿಗೆ ನಮ್ಮ ಸಮಸ್ಯೆ ಕುರಿತು ಕೇಳಿಕೊಂಡರು ಸಹ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಾರದೊಳಗೆ ನೀರಿನ ಸಮಸ್ಯೆಯನ್ನು ಸರಿಪಡಿಸದಿದ್ದರೆ ಗ್ರಾಪಂ ಮುಂದೆ ಧರಣಿ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ರೇಣವ್ವ ಬಣವಿ, ಸರೋಜವ್ವ ಬಣವಿ, ಗಿರಿಜವ್ವ ಬೇಲೇರಿ, ಶಾಂತವ್ವ ಬಣವಿ, ಚಂಬಮ್ಮ ಬಣವಿ, ರೇಣವ್ವ ಬಣವಿ ಸೇರಿದಂತೆ ಮುಂತಾದವರು ಇದ್ದರು. ಪ್ರತಿಭಟನೆ ಹಿಂದಕ್ಕೆ:ಗ್ರಾಪಂ ಎಸ್.ಡಿ.ಎ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಸ್ಥಳಕ್ಕೆ ಭೇಟಿ ನೀಡಿದ ಎಸ್‌ಡಿಎ ಎಂ.ಎ. ಗಾಜಿ ಅವರು, ಆ ಭಾಗದಲ್ಲಿ ನೀರು ಪೂರೈಕೆಯ ಪೈಪ್‌ಲೈನ್ ಒಳಗಡೆ ದುರಸ್ತಿಗೆ ಬಂದಿದೆ. ಸರಿಪಡಿಸಲು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಇನ್ನೂ ಶಾಶ್ವತ ಪರಿಹಾರಕ್ಕಾಗಿ ಈ ಭಾಗದಲ್ಲಿ ನೀರಿನ ಟ್ಯಾಂಕ್ ನಿರ್ಮಿಸಿ ಪೊರೈಕೆ ಮಾಡಲಾಗುವುದು ಎಂದು ತಿಳಿಸಿದರು.

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!