ಗುತ್ತಿಗೆದಾರ ಸಂಘದ ಉಪಾಧ್ಯಕ್ಷನಮನೇಲಿ ಸಿಕ್ತು ₹42 ಕೋಟಿ ನಗದು!

KannadaprabhaNewsNetwork | Published : Oct 14, 2023 1:00 AM

ಸಾರಾಂಶ

ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ಶುಕ್ರವಾರ ಗುತ್ತಿಗೆದಾರರೊಬ್ಬರ ನಿವಾಸಗಳ ಮೇಲೆ ದಾಳಿ ನಡೆಸಿ ಬರೋಬ್ಬರಿ 42 ಕೋಟಿ ರು.ಗಿಂತ ಹೆಚ್ಚು ಮೌಲ್ಯದ ನಗದನ್ನು ಜಪ್ತಿ ಮಾಡಿದ್ದಾರೆ.
- ಬಿಬಿಎಂಪಿ ಮಾಜಿ ಕಾರ್ಪೊರೇಟರ್‌ ಪತಿಯ ನಿವಾಸಗಳ ಮೇಲೆ ಭರ್ಜರಿ ಐಟಿ ದಾಳಿ - 20 ಬಾಕ್ಸ್‌ನಲ್ಲಿ ರಾಶಿ ಹಣ, ಚಿನ್ನ ಪತ್ತೆ । ಇತ್ತೀಚಿನ ವರ್ಷದಲ್ಲೇ ಅತಿ ಹೆಚ್ಚು ಹಣ ಜಪ್ತಿ - ಗುತ್ತಿಗೆದಾರರ ಬಿಲ್‌ನಲ್ಲಿ ಪರ್ಸೆಂಟೇಜ್‌ ಸಂಗ್ರಹ? ಎಲೆಕ್ಷನ್‌ಗೆಂದು ಕೂಡಿಟ್ಟಿದ್ದ ಹಣ? ಕನ್ನಡಪ್ರಭ ವಾರ್ತೆ ಬೆಂಗಳೂರು ಕಳೆದ ಕೆಲವು ದಿನಗಳಿಂದ ತೆರಿಗೆ ವಂಚನೆ ಆರೋಪದ ಮೇಲೆ ನಿರಂತರ ಕಾರ್ಯಾಚರಣೆ ಕೈಗೊಂಡಿರುವ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ಶುಕ್ರವಾರ ಗುತ್ತಿಗೆದಾರರೊಬ್ಬರ ನಿವಾಸಗಳ ಮೇಲೆ ದಾಳಿ ನಡೆಸಿ ಬರೋಬ್ಬರಿ 42 ಕೋಟಿ ರು.ಗಿಂತ ಹೆಚ್ಚು ಮೌಲ್ಯದ ನಗದನ್ನು ಜಪ್ತಿ ಮಾಡಿದ್ದಾರೆ. ರಾಜ್ಯ ಗುತ್ತಿಗೆದಾರ ಸಂಘದ ಉಪಾಧ್ಯಕ್ಷರೂ ಆಗಿರುವ ಗುತ್ತಿಗೆದಾರ ಆರ್‌.ಅಂಬಿಕಾಪತಿ ಅವರಿಗೆ ಸೇರಿದ ನಾಲ್ಕಕ್ಕೂ ಅಧಿಕ ಸ್ಥಳಗಳ ಮೇಲೆ ಖಚಿತ ಮಾಹಿತಿ ಮೇರೆಗೆ ದಿಢೀರ್‌ ದಾಳಿ ನಡೆಸಿ ಐಟಿ ಅಧಿಕಾರಿಗಳು 20ಕ್ಕೂ ಹೆಚ್ಚು ಬಾಕ್ಸ್‌ಗಳಲ್ಲಿ ಸಂಗ್ರಹಿಸಿಟ್ಟಿದ್ದ 42 ಕೋಟಿ ರು.ಗಿಂತ ಹೆಚ್ಚಿನ ಮೊತ್ತವನ್ನು ಪತ್ತೆ ಮಾಡಿ ವಶಕ್ಕೆಪಡೆದುಕೊಂಡಿದ್ದಾರೆ. ಕಾರ್ಯಾಚರಣೆ ವೇಳೆ ಸಿಕ್ಕ ಕಂತೆ ಕಂತೆ ನೋಟುಗಳನ್ನು ಕಂಡು ಸ್ವತಃ ಐಟಿ ಅಧಿಕಾರಿಗಳೇ ದಂಗಾಗಿದ್ದಾರೆ. ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಐಟಿ ದಾಳಿಗಳ ಪೈಕಿ ಇದು ಅತಿ ದೊಡ್ಡ ನಗದು ಪತ್ತೆಯಾದ ದಾಳಿ ಇದಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ. ಅಂಬಿಕಾಪತಿಗೆ ಸೇರಿದ ಆರ್‌.ಟಿ.ನಗರ, ಸುಲ್ತಾನ್‌ಪಾಳ್ಯ, ಕಾವಲ್‌ಬೈರಸಂದ್ರ, ಮಾನ್ಯತಾ ಟೆಕ್‌ಪಾರ್ಕ್‌ ಬಳಿ ಇರುವ ನಿವಾಸಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ. ಇದಲ್ಲದೇ, ಇವರ ಕೆಲವು ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಆದರೆ ಐಟಿ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದು, ತನಿಖೆ ಪ್ರಕ್ರಿಯೆ ಮುಕ್ತಾಯದ ಬಳಿಕ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದಿದ್ದಾರೆ. ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷರಾಗಿರುವ ಅಂಬಿಕಾಪತಿಯು ಬಿಬಿಎಂಪಿ ಮಾಜಿ ಸದಸ್ಯೆಯಾಗಿದ್ದ ಅಶ್ವತ್ಥಮ್ಮ ಅವರ ಪತಿ. ಅಶ್ವತ್ಥಮ್ಮ ಅವರು ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ತಂಗಿ ಎಂದು ತಿಳಿದು ಬಂದಿದೆ. ಐಟಿ ಅಧಿಕಾರಿಗಳು ಪತ್ತೆ ಹಚ್ಚಿರುವ 42 ಕೋಟಿ ರು.ಗೆ ಯಾವುದೇ ದಾಖಲೆಗಳು ಇಲ್ಲದ ಕಾರಣ ತೆರಿಗೆ ವಂಚನೆ ಆರೋಪ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ಗುರುವಾರವಷ್ಟೇ ಐಟಿ ಅಧಿಕಾರಿಗಳು ಹಲವು ಉದ್ಯಮಿಗಳು, ಚಿನ್ನಾಭರಣ ವ್ಯಾಪಾರಿಗಳಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಗುತ್ತಿಗೆದಾರರ ಮೇಲೂ ಸಹ ಕಾರ್ಯಾಚರಣೆ ನಡೆಸಲಾಗಿತ್ತು. ಶೋಧ ಕಾರ್ಯ ವೇಳೆ ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದಾಗ ಅಂಬಿಕಾಪತಿ ನಿವಾಸದಲ್ಲಿ ಕೋಟ್ಯಂತರ ರು. ನಗದು ಇರುವ ಬಗ್ಗೆ ಮಾಹಿತಿ ನೀಡಿದ್ದರು. ಇದೇ ಮಾಹಿತಿ ಮೇರೆಗೆ ಗುರುವಾರ ರಾತ್ರಿಯಿಂದಲೇ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಶುಕ್ರವಾರ ತಡರಾತ್ರಿವರೆಗೂ ಶೋಧ ಕಾರ್ಯ ನಡೆಸಲಾಗಿದೆ. ನಗದು ಜತೆಗೆ ಚಿನ್ನಾಭರಣ ಸಹ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಬೆಡ್‌ರೂಂನಲ್ಲಿ ನಗದು ಪತ್ತೆ: ಸುಲ್ತಾನ್‌ಪಾಳ್ಯದ ಆತ್ಮಾನಂದ ಕಾಲೋನಿಯಲ್ಲಿನ ನಿವಾಸದಲ್ಲಿ ನಗದು ಪತ್ತೆಯಾಗಿದೆ. ಇನ್ನುಳಿದಂತೆ ಕಾವಲ್‌ಬೈರಸಂದ್ರದ ಗಣೇಶ್ ಬ್ಲಾಕ್‌ನಲ್ಲಿನ ನಿವಾಸ, ಆರ್‌.ಟಿ.ನಗರ ಬಳಿಯ ವೈಟ್‌ಹೌಸ್‌ ಮತ್ತು ಮಾನ್ಯತಾ ಟೆಕ್‌ ಪಾರ್ಕ್‌ ಬಳಿಯ ನಿವಾಸದಲ್ಲಿ ಚಿನ್ನಾಭರಣ, ದಾಖಲೆಗಳು ಲಭ್ಯವಾಗಿವೆ. ಸುಲ್ತಾನ್‌ಪಾಳ್ಯ ನಿವಾಸದ ಬೆಡ್‌ರೂಂನಲ್ಲಿ ಕೋಟಿ ಕೋಟಿ ಹಣವನ್ನು ಇಡಲಾಗಿತ್ತು. ಮಂಚದಡಿಯಲ್ಲಿ 20ಕ್ಕೂ ಹೆಚ್ಚಿನ ಬಾಕ್ಸ್‌ನಲ್ಲಿ 500 ರು. ಮುಖಬೆಲೆಯ 42 ಕೋಟಿ ರು.ಗಿಂತ ಹೆಚ್ಚಿನ ಮೊತ್ತ ಇಡಲಾಗಿತ್ತು. ಹಣದ ಕಂತೆ ಇಟಿದ್ದ ಕೊಠಡಿಯನ್ನು ಬಳಕೆ ಮಾಡುತ್ತಿರಲಿಲ್ಲ. ಆ ಕೊಠಡಿಯನ್ನು ಲಾಕ್‌ ಮಾಡಲಾಗಿತ್ತು ಎನ್ನಲಾಗಿದೆ. ಐಟಿ ಅಧಿಕಾರಿಗಳು ಅಂಬಿಕಾಪತಿಗೆ ಸಂಬಂಧಪಟ್ಟ ಬ್ಯಾಂಕ್‌ ಖಾತೆಗಳ ಮತ್ತು ಬ್ಯಾಂಕ್‌ ಲಾಕರ್‌ಗಳ ಕುರಿತು ಮಾಹಿತಿ ಸಂಗ್ರಹಿಸಿದ್ದು, ಖಾತೆ ಮತ್ತು ಲಾಕರ್‌ ಇರುವ ಎಲ್ಲಾ ಬ್ಯಾಂಕ್‌ಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಂಬಿಕಾಪತಿ ಮತ್ತವರ ಕುಟುಂಬದ ಸದಸ್ಯರು 20ಕ್ಕೂ ಹೆಚ್ಚು ಬ್ಯಾಂಕ್‌ ಖಾತೆ ಹೊಂದಿರುವ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಅವುಗಳನ್ನು ಪರಿಶೀಲನೆ ನಡೆಸಿ ಹಣದ ವಹಿವಾಟಿನ ಬಗ್ಗೆ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಈ ನಡುವೆ, ನಗದನ್ನು ಟಿಟಿ ವಾಹನದಲ್ಲಿ ಐಟಿ ಅಧಿಕಾರಿಗಳು ಕೊಂಡೊಯ್ದು ಬ್ಯಾಂಕ್‌ಗೆ ಜಮಾ ಮಾಡಿದ್ದಾರೆ. ಚುನಾವಣೆಗಾಗಿ ಸಂಗ್ರಹ?: ಅಂಬಿಕಾಪತಿ ನಿವಾಸದಲ್ಲಿ ಪತ್ತೆಯಾದ 42 ಕೋಟಿ ರು. ನಗದನ್ನು ಒಂದು ಮೂಲದ ಪ್ರಕಾರ ಚುನಾವಣೆಗಾಗಿ ಸಂಗ್ರಹಿಸಲಾಗಿತ್ತು. ತೆಲಂಗಾಣ, ಮಧ್ಯಪ್ರದೇಶ, ಮಿಜೋರಂ ಸೇರಿದಂತೆ ಪಂಚರಾಜ್ಯಗಳಲ್ಲಿ ಚುನಾವಣೆ ಘೋಷಣೆಯಾಗಿದ್ದು, ಅಲ್ಲಿಗೆ ಸಾಗಿಸಲು ಸಿದ್ಧತೆ ಕೈಗೊಳ್ಳಲಾಗಿತ್ತು. ತೆಲಂಗಾಣ ಚುನಾವಣೆಗಾಗಿ ಈ ಹಣವನ್ನು ಬಳಕೆ ಮಾಡುವ ಉದ್ದೇಶ ಇತ್ತು ಎಂದು ಹೇಳಲಾಗಿದೆ. ಇದಕ್ಕಾಗಿಯೇ ಸಂಗ್ರಹಿಸಲಾಗಿದ್ದು, ಕೆಲವೇ ದಿನದಲ್ಲಿ ಅವುಗಳ ಸಾಗಣೆ ಮಾಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಇನ್ನೊಂದು ಮೂಲದ ಪ್ರಕಾರ, ಬಿಬಿಎಂಪಿಗೆ ಬಿಡುಗಡೆಯಾದ ಮೊತ್ತಕ್ಕೆ ಪ್ರತಿಯಾಗಿ ಸರ್ಕಾರಿ ಅಧಿಕಾರಿಗಳಿಗೆ ಮತ್ತು ರಾಜಕಾರಣಿಗಳಿಗೆ ಸಂದಾಯ ಮಾಡಲು ಸಂಗ್ರಹಿಸಲಾಗಿತ್ತು ಎನ್ನಲಾಗಿದೆ. ಆದರೆ, ಈ ಬಗ್ಗೆ ಐಟಿ ಅಧಿಕಾರಿಗಳು ಖಚಿತ ಪಡಿಸಲು ನಿರಾಕರಿಸಿದ್ದು, ವಿಚಾರಣೆ ಬಳಿಕವಷ್ಟೇ ಸತ್ಯಾಂಶ ಗೊತ್ತಾಗಲಿದೆ ಎಂದು ಹೇಳಿದ್ದಾರೆ. ಇ.ಡಿ. ತನಿಖೆಯ ಕಂಟಕ: ಮನೆಯಲ್ಲಿ 42 ಕೋಟಿ ರು.ಗಿಂತ ಹೆಚ್ಚು ಮೊತ್ತದ ನಗದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಗುತ್ತಿಗೆದಾರ ಅಂಬಿಕಾಪತಿಗೆ ಜಾರಿ ನಿರ್ದೇಶನಾಲಯದ (ಇ.ಡಿ.) ತನಿಖೆಯ ಕಂಟಕ ಎದುರಾಗುವ ಸಾಧ್ಯತೆ ಹೆಚ್ಚಿದೆ. ಐಟಿ ಅಧಿಕಾರಿಗಳು ಇ.ಡಿ. ಅಧಿಕಾರಿಗಳಿಗೂ ಮಾಹಿತಿ ಒದಗಿಸಲಿದ್ದಾರೆ. ತನಿಖೆ ಪ್ರಕ್ರಿಯೆ ಮುಗಿಸಿದ ಬಳಿಕ ಇ.ಡಿ.ಗೆ ಸಂಪೂರ್ಣವಾದ ವಿವರಣೆಯನ್ನು ನೀಡಲಿದ್ದಾರೆ. ನಂತರ ಇ.ಡಿ. ಪ್ರವೇಶವಾಗಲಿದ್ದು, ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಿದೆ. ಇನ್ನೂ ಹಲವರ ಮೇಲೆ ದಾಳಿ: ಐಟಿ ಅಧಿಕಾರಿಗಳು ಕೇವಲ ಗುತ್ತಿಗೆದಾರ ಅಂಬಿಕಾಪತಿಗೆ ಸೇರಿದ ನಿವಾಸಗಳ ಮೇಲೆ ಮಾತ್ರ ದಾಳಿ ನಡೆಸಿಲ್ಲ. ಬದಲಿಗೆ ಇನ್ನೂ ಕೆಲವು ಗುತ್ತಿಗೆದಾರ ಸಂಸ್ಥೆಗಳು ಮತ್ತು ಗುತ್ತಿಗೆದಾರರ ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ. ಸ್ಟಾರ್‌ ಬಿಲ್ಡರ್‌, ಬಿಎಸ್‌ಆರ್‌ ಕಂಟ್ರ್ಯಾಕ್ಟರ್‌ ಸೇರಿದಂತೆ ಇತರೆ ಸಂಸ್ಥೆಗಳು ಮತ್ತು ಗೌತಮ್‌ ಎಂಬ ಗುತ್ತಿಗೆದಾರ ಸೇರಿದಂತೆ ಇತರರ ಮೇಲೂ ಕಾರ್ಯಾಚರಣೆ ಕೈಗೊಂಡಿದ್ದು, ಪರಿಶೀಲನೆ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ. ನೋಟಿನ ಮಷಿನ್‌ ಮೂಲಕ ಹಣ ಎಣಿಕೆ: ಅಂಬಿಕಾಪತಿ ಮನೆಯಲ್ಲಿ ದೊರಕಿದ ನಗದನ್ನು ಲೆಕ್ಕ ಹಾಕಲು ಐಟಿ ಅಧಿಕಾರಿಗಳು ನೋಟು ಎಣಿಸುವ ಯಂತ್ರಗಳನ್ನು ತರಿಸಿದ್ದರು. ಮಧ್ಯಾಹ್ನದಿಂದ ಸಂಜೆಯವರೆಗೆ ಹಣ ಎಣಿಕೆ ಮಾಡಲಾಗಿದೆ ಎನ್ನಲಾಗಿದೆ. ಇನ್ನು, ಮನೆಯಲ್ಲಿ ಸಿಕ್ಕ ಚಿನ್ನಾಭರಣದ ಪರಿಶೀಲನೆಗಾಗಿ ಅಕ್ಕಸಾಲಿಗರನ್ನು ಸಹ ಕರೆಸಿ ಮೌಲ್ಯದ ಬಗ್ಗೆ ಮಾಹಿತಿ ಸಂಗ್ರಹಿಸಲಾಯಿತು ಎಂದು ಹೇಳಲಾಗಿದೆ.

Share this article