ಗಣೇಶ ಮೆರವಣಿಗೆ ವೇಳೆ ವಾಗ್ವಾದ, ಹಲ್ಲೆ<bha>;</bha> ಪ್ರತಿಭಟನೆ

KannadaprabhaNewsNetwork | Published : Oct 14, 2023 1:00 AM

ಸಾರಾಂಶ

ಮುಸ್ಲಿಂ ಯುವಕರ ಕೂಡಲೇ ಬಂಧಿಸಿ, ಇನ್ಸಪೆಕ್ಟರ್‌, ಸಿಬ್ಬಂದಿ ಅಮಾನತುಗೊಳಿಸಿ:ಹಿಂದೂ ಪರ ಸಂಘಟನೆಗಳಿಂದ ಒತ್ತಾಯ

ಮುಸ್ಲಿಂ ಯುವಕರ ಕೂಡಲೇ ಬಂಧಿಸಿ, ಇನ್ಸಪೆಕ್ಟರ್‌, ಸಿಬ್ಬಂದಿ ಅಮಾನತುಗೊಳಿಸಿ ಹಿಂದೂ ಪರ ಸಂಘಟನೆಗಳಿಂದ ಒತ್ತಾಯ

ಕನ್ನಡಪ್ರಭ ವಾರ್ತೆ ದಾವಣಗೆರೆ

ಶ್ರೀ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಅಡ್ಡಿಪಡಿಸಿ, ಹಿಂದೂಗಳ ಮೇಲೆ ಹಲ್ಲೆ ಮಾಡಿದ ಮುಸ್ಲಿಮರ ಬಂಧಿಸುವಂತೆ ಹಾಗೂ ಮೆರವಣಿಗೆಯಲ್ಲಿದ್ದವರ ಮೇಲೆ ಹಲ್ಲೆ ಮಾಡಿದ ಪೊಲೀಸ್ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಹಿಂದೂ ಪರ ಸಂಘಟನೆಗಳು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದವು.

ನಗರದ ಶ್ರೀ ಜಯದೇವ ವೃತ್ತದಲ್ಲಿ ಹಿಂದೂ ಜಾಗರಣಾ ವೇದಿಕೆ ಸೇರಿ ವಿವಿಧ ಹಿಂದೂ ಪರ ಸಂಘಟನೆಗಳು ಇಲ್ಲಿನ ಬಸವರಾಜ ಪೇಟೆಯ ಗಣೇಶ ಮೆರವಣಿಗೆ ವೇಳೆ ಅಡ್ಡಿಪಡಿಸಿ, ಮೆರವಣಿಗೆಯಲ್ಲಿದ್ದ ಹಿಂದೂಗಳ ಮೇಲೆ ದೌರ್ಜನ್ಯ ಎಸಗಿದವರ ಬಂಧನಕ್ಕೆ ಒತ್ತಾಯಿಸಿ ಘೋಷಣೆ ಕೂಗಿ ನಗರ ಡಿವೈಎಸ್ಪಿ ಕಚೇರಿಗೆ ತೆರಳಿದರು.

ಈ ವೇಳೆ ಮಾತನಾಡಿದ ಹಿಂದೂ ಸಂಘಟನೆಗಳ ಮುಖಂಡರು, ಬಸವರಾಜ ಪೇಟೆಯ ಶ್ರೀ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಹಿಂದೂಗಳ ಮದೀನಾ ಆಟೋ ನಿಲ್ದಾಣದ ಬಳಿ ಮುಸ್ಲಿಂ ಸಮುದಾಯದವರು ಬಂದು ಮೆರವಣಿಗೆಗೆ ಅಡ್ಡಿಪಡಿಸಿದಾಗ ಎರಡೂ ಕಡೆಯವರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಮುಸ್ಲಿಂ ಯುವಕರು ಹಿಂದು ಯುವಕರ ಮೇಲೆ ಹಲ್ಲೆ ಮಾಡಿದ್ದಾರೆ. ‍ಆದರೆ, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಲ್ಲೆಗೊಳಗಾದ ಹಿಂದೂ ಯುವಕರ ಮೇಲೆಯೇ ಲಾಠಿ ಪ್ರಹಾರ ಮಾಡಿದ್ದು ಖಂಡನೀಯ ಎಂದರು.

ಪೊಲೀಸರ ಅಮಾನತುಗೊಳಿಸಿ:

ಗಣೇಶ ಮೆರವಣಿಗೆ ವೇಳೆ ವಿನಾಕಾರಣ ಹಿಂದೂ ಯುವಕರ ಮೇಲೆ ಲಾಠಿ ಪ್ರಹಾರ ಮಾಡಿದ್ದು ಸರಿಯಲ್ಲ. ಹಿಂದು ಯುವಕರ ಮೇಲೆ ಹಲ್ಲೆ ಮಾಡಿದ ಪೊಲೀಸ್ ಇನ್ಸಪೆಕ್ಟರ್‌ ಹಾಗೂ ಸಿಬ್ಬಂದಿಗೆ ತಕ್ಷಣ ಸೇವೆಯಿಂದ ಅಮಾನತುಗೊಳಿಸಬೇಕು. ರಾಜ್ಯ ಸರ್ಕಾರವು ಮತೀಯ ಗೂಂಡಾಗಳ ಪೋಷಿಸುತ್ತಿದ್ದು, ಇದರಿಂದಾಗಿ ಹಿಂದೂಗಳ ಹಬ್ಬ ಆಚರಣೆಗಳಿಗೆ ಅಡ್ಡಿಪಡಿಸುವ, ಹಲ್ಲೆ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ. ಹಿಂದೂ ಯುವಕರ ಮೇಲೆ ಹಲ್ಲೆ ಮಾಡಿದ ಮುಸ್ಲಿಂ ಯುವಕರ ಬಂಧಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಸ್ಥಳ ಬಿಟ್ಟು ಕದಲಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸಿದ ನಂತರ ಹಿಂದೂ ಪರ ಸಂಘಟನೆಗಳ ಮುಖಂಡರು ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆರಲ್ಲದೇ, ಹಲ್ಲೆ ಮಾಡಿದ ಮುಸ್ಲಿಂ ಯುವಕರನ್ನು ಬಂಧಿಸಬೇಕು, ಹಲ್ಲೆ ಮಾಡಿದ ಪೊಲೀಸ್ ಅಧಿಕಾರಿ, ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದರೆ ಮತ್ತೆ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಬಡಾವಣೆ ಪೊಲೀಸ್ ಠಾಣೆಗೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ರಿಗೆ ಬಸವರಾಜ ಪೇಟೆ ಮಹಿಳೆಯರು, ನಿವಾಸಿಗಳು, ಯುವಕರು, ಹಿಂದು ಸಂಘಟನೆಗಳು, ಬಿಜೆಪಿ ಮುಖಂಡರು ಗುರುವಾರದ ಘಟನೆ ಬಗ್ಗೆ ವಿವರಿಸಿದರು. ಡಿವೈಎಸ್ಪಿ ಮಲ್ಲೇಶ ದೊಡ್ಮನಿ ಹಾಗೂ ಅಧಿಕಾರಿ, ಸಿಬ್ಬಂದಿ ಇದ್ದರು.

ಸಂಘಟನೆ ಮುಖಂಡರಾದ ಸತೀಶ ಪೂಜಾರಿ, ಯಶವಂತರಾವ್ ಜಾಧವ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸಕರಿಯಪ್ಪ, ಪಿ.ಸಿ.ಶ್ರೀನಿವಾಸ ಭಟ್‌, ಮಾಜಿ ಮೇಯರ್‌ ಗಳಾದ ಎಸ್.ಟಿ.ವೀರೇಶ, ಬಿ.ಜಿ.ಅಜಯಕುಮಾರ, ಶಿವನಗೌಡ, ಟಿಂಕರ್ ಮಂಜಣ್ಣ, ನವೀನ ಸೇರಿ ಅನೇಕರು ಪ್ರತಿಭಟನೆಯಲ್ಲಿದ್ದರು. ರಾಜ್ಯ ಸರ್ಕಾರದಿಂದ ಮುಸ್ಲಿಮರ ತುಷ್ಟೀಕರಣ ಹೆಚ್ಚಳ

ಸಾಮರಸ್ಯದಿಂದ ಹಬ್ಬ ಆರಿಸುವ ವೇಳೆ ಊರಿನ ಶಾಂತಿ, ಸೌಹಾರ್ದತೆಗೆ ಗಮನ ನೀಡಬೇಕು. ಮುಸ್ಲಿಮರ ಹಬ್ಬದ ಆಚರಣೆಗೆ ಬಾವುಟ, ಬ್ಯಾನರ್‌ಗಳನ್ನು ಕಟ್ಟಲು ಅವಕಾಶ ನೀಡುತ್ತೇವೆ. ಆದರೆ, ಮುಸ್ಲಿಮರು ವಾಸಿಸುವ ಪ್ರದೇಶದಲ್ಲಿ ಗಣೇಶ ಮೆರವಣಿಗೆ ಹೋಗಬಾರದೆನ್ನಲು ಇದೇನು ತಾಲಿಬಾನ್ ಪ್ರದೇಶವಾ ಅಥವಾ ಪಾಕಿಸ್ತಾನವಾ? ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮುಸ್ಲಿಮರ ತುಷ್ಟೀಕರಣ ಹೆಚ್ಚುತ್ತಿದೆ. ಮತ ಬ್ಯಾಂಕ್‌ಗಾಗಿ ಅಲ್ಪಸಂಖ್ಯಾತರನ್ನು ಓಲೈಸುವ ಕೆಲಸ ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ ಎಂದು ಹಿಂದೂ ಸಂಘಟನೆಗಳ ಮುಖಂಡರು ಆರೋಪಿಸಿದರು .

...........ಮೆರವಣಿಗೆ ವೇಳೆ ಲಾಠಿಚಾರ್ಜ್ ಆಗಿಲ್ಲ: ಎಸ್ಪಿ ಉಮಾ

* ಗಲಾಟೆ ಸ್ಥಳದ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಕ್ರಮ

ದಾವಣಗೆರೆ: ಗಣೇಶ ಮೆರವಣಿಗೆ ವೇಳೆ ಯಾವುದೇ ಲಾಠಿಚಾರ್ಜ್ ಆಗಿಲ್ಲ, ಎರಡೂ ಕಡೆಯವರು ಆರೋಪ-ಪ್ರತ್ಯಾರೋಪ ಮಾಡುತ್ತಿದ್ದು, ಕಾನೂನು ಪ್ರಕಾರ ಸೂಕ್ತ ಕ್ರಮ ಜರುಗಿಸುತ್ತೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸ್ಪಷ್ಟಪಡಿಸಿದ್ದಾರೆ.

ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ ಬಸವರಾಜ ಪೇಟೆ ಶ್ರೀ ಗಣೇಶ ಮೂರ್ತಿ ಮೆರವಣಿಗೆಯನ್ನು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅನ್ಯ ಕೋಮಿನವರು ನಿಲ್ಲಿಸಿದರು ಎಂಬುದಾಗಿ ಹಿಂದೂ ಸಂಘಟನೆಗಳು, ಬಿಜೆಪಿ ಮುಖಂಡರು ಆರೋಪ ಮಾಡಿದ್ದಾರೆ. ಈ ಬಗ್ಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದರು. ಬಸವರಾಜ ಪೇಟೆ ನಿವಾಸಿಗಳ ಜೊತೆ ಮಾತನಾಡಿದ್ದೇನೆ. ಹಿಂದೂ ಸಂಘಟನೆಗಳ ಅಹವಾಲು ಆಲಿಸಿದ್ದೇವೆ. ಎರಡೂ ಕಡೆ ಪರಿಶೀಲಿಸಿ, ಕ್ರಮ ಕೈಗೊಳ್ಳುತ್ತೇವೆ. ಮೆರವಣಿಗೆ ವೇಳೆ ಯಾವುದೋ ಮಾತಿನ ಚಕಮಕಿ ನಡೆದಿದೆ. ಪೊಲೀಸರು ತಕ್ಷಣವೇ ಪರಿಸ್ಥಿತಿ ತಹಬದಿಗೂ ತಂದಿದ್ದಾರೆ. ಎರಡೂ ಕಡೆಯ ವಾದ-ಪ್ರತಿವಾದ ಆಲಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಒತ್ತಡಕ್ಕೆ ಮಣಿದು ಕಾರ್ಯನಿರ್ವಹಿಸಲ್ಲ:

ಘಟನಾ ಸ್ಥಳದ ವೀಡಿಯೋ ತುಣುಕುಗಳು, ಸಿಸಿ ಕ್ಯಾಮೆರಾ ದೃಶ್ಯಾವಗಳಿಗಳ ಆಧರಿಸಿ, ಕ್ರಮ ಜರುಗಿಸುತ್ತೇವೆ. ನಮಗೆ ಕಾನೂನು ಮತ್ತು ಸುವ್ಯವಸ್ಥೆಯೇ ಮುಖ್ಯ. ಯಾವುದೋ ಒಂದು ಸಮುದಾಯದ ಅಥವಾ ಧರ್ಮದ ಕೆಲಸ ಮಾಡುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಯಾವುದೋ ಒತ್ತಡಕ್ಕೆ ಮಣಿದು ಕಾರ್ಯ ನಿರ್ವಹಿಸುವುದಿಲ್ಲ. ಇಂತಹ ಆರೋಪಗಳೆಲ್ಲಾ ಸತ್ಯಕ್ಕೆ ದೂರವಾದವು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

.

Share this article