ಕನ್ನಡಪ್ರಭ ವಾರ್ತೆ ಬೆಂಗಳೂರು
ಕನಕಪುರ ರಸ್ತೆಯ ವಾಜರಹಳ್ಳಿಯಲ್ಲಿನ ಕೆಂಪರಾಜು ಎಂಬುವವರ ಮನೆ ಮೇಲೆ ಐಟಿ ದಾಳಿಯಾಗಿದೆ. ಈತ ಕಾಂಗ್ರೆಸ್ ಮುಖಂಡನಾಗಿದ್ದು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಿ.ಕೆ.ಸುರೇಶ್ ಆಪ್ತ ಎನ್ನಲಾಗಿದೆ.
ಭಾನುವಾರ ಮಧ್ಯಾಹ್ನ ಸುಮಾರು 3.30ಕ್ಕೆ ಎರಡು ಇನ್ನೋವಾ ಕಾರುಗಳಲ್ಲಿ ಬಂದಿರುವ ಐಟಿ ಅಧಿಕಾರಿಗಳು, ಕೆಂಪರಾಜು ಅವರ ಮನೆ ಮೇಲೆ ದಾಳಿ ನಡೆಸಿ ಕೆಲ ದಾಖಲೆಗಳನ್ನು ವಶಕ್ಕೆ ಪಡೆದು ತಡರಾತ್ರಿವರೆಗೂ ಪರಿಶೀಲಿಸಿದ್ದಾರೆ. ಈ ಪೈಕಿ ಕೆಲ ದಾಖಲೆಗಳನ್ನು ಜಪ್ತಿ ಮಾಡಿ, ಆದಾಯ ಮೂಲದ ಬಗ್ಗೆ ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ.ಕನಕಪುರದ ಬಸವೇಶ್ವರನಗರ ನಿವಾಸಿಯಾಗಿದ್ದ ಕೆಂಪರಾಜು ಯುವ ಕಾಂಗ್ರೆಸ್ ಚುನಾವಣೆಗೆ ಸ್ಪರ್ಧಿಸಿದ್ದರು. ಸದ್ಯ ವಾಜರಹಳ್ಳಿಯಲ್ಲಿ ನೆಲೆಸಿರುವ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.
ರಾಜಕೀಯದ ಜತೆಗೆ ಗ್ರಾನೈಟ್, ಕ್ರಷರ್, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಐಟಿ ಅಧಿಕಾರಿಗಳು ಕೆಂಪರಾಜು ಮನೆ ಮೇಲೆ ದಾಳಿ ನಡೆಸಿ ವ್ಯವಹಾರಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಜಪ್ತಿ ಮಾಡಿ ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ. ಒಂದು ವೇಳೆ ಅಕ್ರಮ ವಹಿವಾಟು, ಅಧಿಕ ಆದಾಯ ಕಂಡು ಬಂದಲ್ಲಿ ಕೆಂಪರಾಜುಗೆ ಸಂಕಷ್ಟ ಎದುರಾಗಲಿದೆ. ಲೋಕಸಭಾ ಚುನಾವಣೆ ಸಂದರ್ಭದಲ್ಲೇ ಐಟಿ ಅಧಿಕಾರಿಗಳು ದಾಳಿ ಮಾಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.