ಕಾರವಾರ: ಮಳೆ ಹಾವಳಿ ನಿಂತಿತು ಎಂದು ಜನತೆ ಸಮಾಧಾನದ ನಿಟ್ಟುಸಿರು ಬಿಡುವುದರೊಳಗೆ ಮತ್ತೆ ಧೋ ಎಂದು ಆರಂಭವಾಗಿದೆ. ನಿರಂತರ ಮಳೆಯಿಂದ ಹೊನ್ನಾವರ, ಅಂಕೋಲಾದಲ್ಲಿ ಪ್ರವಾಹ ಉಂಟಾಗಿದ್ದು, ಕಾಳಜಿ ಕೇಂದ್ರ ಆರಂಭಿಸಲಾಗಿದೆ. ಹೊನ್ನಾವರದ ಗುಂಡಬಾಳ ಹಾಗೂ ಅಂಕೋಲಾದ ಕೇಣಿ ಹಳ್ಳ ಬುಧವಾರ ರಾತ್ರಿಯಿಂದ ಅಬ್ಬರಿಸುತ್ತಿರುವ ಪರಿಣಾಮವಾಗಿ ಮನೆಗಳು ಜಲಾವೃತವಾಗಿವೆ.ಹೊನ್ನಾವರ ತಾಲೂಕಿನ ಗುಂಡಬಾಳ ಹಾಗೂ ಭಾಸ್ಕೇರಿ ನದಿಗಳು ಉಕ್ಕೇರಿ ನದಿಯ ಇಕ್ಕೆಲಗಳಲ್ಲಿನ ಮನೆಗಳು, ತೋಟ ಜಲಾವೃತವಾಯಿತು. ಗುಂಡಿಬೈಲ್, ಚಿಕ್ಕನಕೋಡ, ಮುಟ್ಟಾ, ಹೆಬೈಲ್, ಕೆಂಚಗಾರ, ಗುಂಡಬಾಳ ದೇವಸ್ಥಾನ ಕೇರಿ, ಹಡಿನಬಾಳ, ಕಾವೂರು, ಖರ್ವಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಥಗೇರಿ, ಕೂಡ್ಲ ನದಿ ತಟದ ಎಡಬಲ ದಂಡೆಯ ಪ್ರದೇಶಗಳಲ್ಲಿ ಪ್ರವಾಹ ಸಂಭವಿಸಿದೆ. 9 ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, 341 ಜನರು ಆಶ್ರಯ ಪಡೆದಿದ್ದಾರೆ. ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊಸಾಕುಳಿಯ ವಿಶ್ವೇಶ್ವರ ಹೆಗಡೆ ಅವರ ನಿವಾಸದ ಮೇಲೆ ಬಂಡೆಗಳು ಉರುಳಿ ಅಪಾರ ಹಾನಿ ಉಂಟಾಗಿದೆ. ಅಂಕೋಲಾದಲ್ಲಿ ಆರ್ಭಟಿಸುತ್ತಿರುವ ಮಳೆಗೆ ಕೇಣಿಯ ಗಾಂವಕರವಾಡಾದ 15ಕ್ಕೂ ಹೆಚ್ಚು ಮನೆಗಳಿಗೆ ಬುಧವಾರ ರಾತ್ರಿ ನೀರು ನುಗ್ಗಿದೆ. ಕಾಳಜಿ ಕೇಂದ್ರ ತೆರೆಯಲಾಗಿದ್ದು 46 ಜನರು ಆಶ್ರಯ ಪಡೆದಿದ್ದಾರೆ. ಕುಮಟಾದಲ್ಲಿ ಚಂಡಿಕಾ ನದಿ ಅಬ್ಬರಿಸುತ್ತಿದೆ. ನದಿಯ ಇಕ್ಕೆಲಗಳಲ್ಲಿನ ಮನೆಗಳು ಜಲಾವೃತವಾಗುವ ಆತಂಕ ಎದುರಾಗಿದೆ. ಉಪ್ಪಿನಪಟ್ಟಣ ಸೇತುವೆಯ ಮೇಲೆ ನೀರು ಪ್ರವಹಿಸುತ್ತಿದೆ. ಭಟ್ಕಳದಲ್ಲಿ ಎರಡು ದಿನಗಳಿಂದ ಮಳೆ ಬಿಟ್ಟೂ ಬಿಡದೆ ಸುರಿಯುತ್ತಿದೆ. ರಾಷ್ಟ್ರೀಯ ಹೆದ್ದಾರಿ ಕೂಡ ಜಲಾವೃತವಾಗಿದೆ. ಕಾರವಾರದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅರಗಾ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡಿತು. ಭಾರಿ ಮಳೆಯಿಂದಾಗಿ ಶುಕ್ರವಾರ ಜಿಲ್ಲೆಯ 7 ತಾಲೂಕಿನ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಕಾರವಾರ: ಜಿಲ್ಲೆಯ ಬಹುತೇಕ ಕಡೆ ವ್ಯಾಪಕ ಮಳೆ ಹಿನ್ನೆಲೆ 7 ತಾಲೂಕಿನ ಶಾಲೆ- ಕಾಲೇಜುಗಳಿಗೆ ಆ. ೨ರಂದು ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ. ಅವರು ಆದೇಶ ಹೊರಡಿಸಿದ್ದಾರೆ.ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಜೋಯಿಡಾ, ದಾಂಡೇಲಿಯಲ್ಲಿ ಭಾರಿ ಮಳೆ ಹಿನ್ನೆಲೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ, ಐಟಿಐ, ಡಿಪ್ಲೊಮಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.