ಕನ್ನಡಪ್ರಭ ವಾರ್ತೆ ಶಹಾಪುರ
ಸಗರನಾಡಿನ ಪ್ರತಿಷ್ಠಿತ ಸರ್ಕಾರಿ ವಿದ್ಯಾ ಸಂಸ್ಥೆಯಾಗಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉತ್ತಮ ಕಲಿಕಾ ವಾತಾವರಣದ ಜೊತೆಗೆ ಸಂಪನ್ಮೂಲ ಅಧ್ಯಾಪಕರಿದ್ದು, ಕಾಲೇಜಿನ ಸಂಪನ್ಮೂಲ ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಕೆಂಭಾವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ನಾಗಪ್ಪ ಚವಲ್ಕರ್ ಹೇಳಿದರು.ಜಪಾನ್ ವಿಶ್ವವಿದ್ಯಾಲಯದಲ್ಲಿ ನಡೆದ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಪ್ರಬಂಧ ಮಂಡಿಸಿದ ನಿಮಿತ್ತ ಕಾಲೇಜಿನ ಪ್ರಾಂಶುಪಾಲ ಡಾ.ಸಂಗಪ್ಪ ಎಸ್.ರಾಂಪುರೆ ಅವರಿಗೆ ಕಾಲೇಜು ವತಿಯಿಂದ ಇತ್ತೀಚೆಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರತಿಭಾವಂತ ಸಂಪನ್ಮೂಲ ವ್ಯಕ್ತಿಗಳಾದ ಡಾ.ಸಂಗಪ್ಪ ರಾಂಪುರೆ ಮಂಡಿಸಿದ ಪ್ರಬಂಧವನ್ನು ತಾವೆಲ್ಲರೂ ಓದಬೇಕು. ಆ ಪ್ರಬಂಧ ಭಾರತದ ಕ್ರೀಡಾ, ಪ್ರವಾಸೋದ್ಯಮದ ಮೇಲೆ ಬೆಳಕು ಚೆಲ್ಲುತ್ತದೆ. ವಿದ್ಯಾರ್ಥಿಗಳು ಪದವಿಯಿಂದಲೇ ಸಂಶೋಧನಾ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.ಪತ್ರಕರ್ತ ಅಮರೇಶ್ ಹಿರೇಮಠ ಮಾತನಾಡಿ, ಡಾ.ಸಂಗಪ್ಪ ರಾಂಪುರೆ ಅವರು ಕಠಿಣ ಪರಿಶ್ರಮದಿಂದ ಉನ್ನತ ಮಟ್ಟದ ಸಾಧನೆ ಮಾಡಿ ನಮಗೆಲ್ಲರಿಗೂ ಅನುಕರಣೀಯರಾಗಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಾಂಶುಪಾಲ ಡಾ.ಸಂಗಪ್ಪ ಎಸ್. ರಾಂಪುರೆ, ಜಪಾನ್ ರಾಷ್ಟ್ರ ಆಧುನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಬಹಳಷ್ಟು ಮುಂದುವರೆದಿದೆ. ಅಲ್ಲಿನ ಯುವಜನತೆ ವಿಜ್ಞಾನ ಮತ್ತು ತಂತ್ರಜ್ಞಾನ ಸದುಪಯೋಗ ಪಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳುತ್ತಿದ್ದಾರೆ ಎಂದು ತಮ್ಮ ಜಪಾನ್ ಪ್ರವಾಸದ ಅನುಭವಗಳನ್ನು ಹಂಚಿಕೊಂಡರು.ಈ ವೇಳೆ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಸಿದ್ದಪ್ಪ ದಿಗ್ಗಿ , ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಬಸಂತ ಸಾಗರ, ಅಧ್ಯಾಪಕ ಡಾ.ಶರಣಪ್ಪ ಸಂಘರ್ಷ ಮಾತನಾಡಿದರು.ಅಧ್ಯಾಪಕರಾದ ಡಾ.ದೇವಪ್ಪ ಹೊಸಮನಿ, ರಾಘವೇಂದ್ರ ಹಾರಣಗೇರಾ, ಡಾ.ಸುರೇಶ ಮಾಮಡಿ, ದೇವಿಂದ್ರಪ್ಪ ದರಿಯಾಪುರ ಇತರರಿದ್ದರು.