ರಾಜಭವನವನ್ನು ಪ್ರಜಾ ಭವನ ಮಾಡಿದ್ದ ಆಚಾರ್ಯರು

KannadaprabhaNewsNetwork | Updated : Nov 11 2023, 01:17 AM IST

ಸಾರಾಂಶ

ರಾಜ್ಯಪಾಲ ಪಿ.ಬಿ.ಆಚಾರ್ಯರು

ಕನ್ನಡಪ್ರಭ ವಾರ್ತೆ ಉಡುಪಿ

ಮಾಜಿ ರಾಜ್ಯಪಾಲ ಪಿ.ಬಿ.ಆಚಾರ್ಯರು ಇಲ್ಲಿನ ತೆಂಕಪೇಟೆಯ ಆಚಾರ್ಯ ಮಠದಲ್ಲಿ ಹುಟ್ಟಿ ಬೆಳೆದವರು. ಉಡುಪಿಯ ಕ್ರಿಶ್ಟಿಯನ್ ಸ್ಕೂಲ್ ಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪೂರೈಸಿ, ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜಿನ ಪ್ರಥಮ ತಂಡ ವಿದ್ಯಾರ್ಥಿಯಾಗಿ ಪದವಿಯನ್ನು ಪಡೆದವರು.

ಉದ್ಯೋಗಕ್ಕಾಗಿ ಮುಂಬಯಿ ಸೇರಿದ ಅವರು ರಾ.ಸ್ವ.ಸೇ. ಸಂಘದ ಸಂಪರ್ಕಕ್ಕೆ ಬಂದು, ಈಶಾನ್ಯ ಭಾರತದಲ್ಲಿ ಪ್ರಚಾರಕರಾಗಿ ಕಾರ್ಯ ನಿರ್ವಹಿಸಿದರು. ಆ ಕಾಲದಲ್ಲೇ ಪ್ರಧಾನಿ ಮೋದಿಯವರ ಸಂಪರ್ಕಕ್ಕೆ ಬಂದು, ಪರಿಣಾಮ ನಾಗಾಲ್ಯಾಂಡ್‌ನ ರಾಜ್ಯಪಾಲರಾದರು. ಜೊತೆಗೆ ಅಸ್ಸಾಂ, ತ್ರಿಪುರಾ, ಅರುಣಾಚಲಪ್ರದೇಶ, ಸಿಕ್ಕಿಂ, ಮೇಘಾಲಯ ಮೊದಲಾದ ರಾಜ್ಯಗಳ ಹಂಗಾಮಿ ರಾಜ್ಯಪಾಲರಾಗಿಯೂ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಆಚಾರ್ಯರದ್ದು .

ಸಂಘದ ಕಾರ್ಯಕ್ಕಾಗಿ ಈಶಾನ್ಯ ರಾಜ್ಯಗಳಲ್ಲಿ ತಿರುಗಾಡಿದ ಅನುಭವ ಇದ್ದ ಆಚಾರ್ಯರು, ರಾಜ್ಯಪಾಲರಿಗಿದ್ದ ಶಿಷ್ಟಾಚಾರದ ಹೊರತಾಗಿಯೂ, ದೇಶದ ಪ್ರತಿಷ್ಠಿತ ಬ್ಯಾಂಕ್, ಉದ್ಯಮಿಗಳು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಮಠಾಧೀಶರು ಧರ್ಮಾಧಿಕಾರಿಗಳನ್ನು ತಾವೇ ಸಂಪರ್ಕಿಸಿ, ಅಲ್ಲಿ ಸೇವಾ, ಉದ್ಯಮ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ ಕೇಂದ್ರಗಳನ್ನು ತೆರೆದುದು ಅವರ ಬಹಳ ದೊಡ್ಡ ಸಾಧನೆಯಾಗಿದೆ.

ಆಚಾರ್ಯರ ಅವಧಿಯಲ್ಲಿ ತಮ್ಮ ರಾಜಭವನವನ್ನು ತೀರಾ ಸಾಮಾನ್ಯ ಜನರಿಗೂ ಮುಕ್ತ ಮಾಡಿದ್ದು, ತಾವೂ ಬಿಗುಮಾನಗಳಿಲ್ಲದೆ ಅವರೊಂದಿಗೆ ಬೆರೆಯುತ್ತಿದ್ದರು. ನಾಗಾಲ್ಯಾಂಡಿನ ತರಕಾರಿ , ಜೀನಸು ವ್ಯಾಪಾರಸ್ಥರು , ಪೇಪರ್ - ಹಾಲು ಪೂರೈಕೆದಾರರು, ಧೋಬಿಗಳು ಕ್ಷೌರಿಕರು, ಜಾಡಮಾಲಿಗಳು, ಶಿಕ್ಷಕರು ವಿದ್ಯಾರ್ಥಿಗಳನ್ನು ರಾಜಭವನಕ್ಕೆ ಕರೆಸಿ ಉಪಾಹಾರ, ಆತಿಥ್ಯ ನೀಡಿ ಕಳುಹಿಸುತ್ತಿದ್ದುದಿದೆ. ಆಚಾರ್ಯರ ಪತ್ನಿ ಕವಿತಾ ಪತಿಯ ಕೆಲಸಗಳಿಗೆ ಕೈಜೋಡಿಸಿದವರು. ಸುಶಿಕ್ಷಿತೆಯಾಗಿದ್ದ ಅವರೂ ನಾಗಾಲ್ಯಾಂಡಿನ ಬುಡಕಟ್ಟು ಗುಡ್ಡಗಾಡು ಜನಾಂಗದ ಹತ್ತಾರು ಕಾರ್ಮಿಕರ ಬಡಮಕ್ಕಳನ್ನು ದತ್ತು ತೆಗೆದುಕೊಂಡು ತಾವೇ ಅವರಿಗೆ ಉಚಿತವಾಗಿ ತರಗತಿಗಳನ್ನು ನಡೆಸುತಿದ್ದರು. ನಿವೃತ್ತಿಯ ನಂತರ ಹತ್ತಾರು ಬಾರಿ ಉಡುಪಿಗೆ ಬಂದಿದ್ದರು, ಬಂದಾಗ ಪ್ರತಿಬಾರಿಯೂ ಪತ್ನಿಯೊಂದಿಗೆ ಕೃಷ್ಣಮಠಕ್ಕೆ ತೆರಳಿ, ದೇವರ ದರ್ಶನ ಪಡೆದು ಕೃಷ್ಣನ ಅನ್ನಪ್ರಸಾದವನ್ನು ಸೇವಿಸುತ್ತಿದ್ದರು. ಅನೇಕ ಕಾರ್ಯಕ್ರಮ, ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದರು.

ಪೇಜಾವರ ಮಠದ ಹಿಂದಿನ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಆತ್ಮೀಯರಾಗಿದ್ದ ಆಚಾರ್ಯರು, ಉಡುಪಿಯ ಎಲ್ಲ ಮಠಗಳಿಂದ ಸನ್ಮಾನಿಸಲಾಗಿದ್ದರು. ಅದಮಾರು ಶ್ರೀಗಳು ತಮ್ಮ ಪರ್ಯಾಯ ದರ್ಬಾರ್‌ನಲ್ಲಿ ಪಿ.ಬಿ. ಆಚಾರ್ಯರಿಗೆ ದರ್ಬಾರ್ ಸಂಮಾನ ನೀಡಿ ಗೌರವಿಸಿದ್ದರು ಎಂದು ಸಮಾಜ ಸೇವಕ ವಾಸುದೇವ ಭಟ್ ಪೆರಂಪಳ್ಳಿ ನೆನಪಿಸಿಕೊಂಡಿದ್ದಾರೆ.

Share this article