ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ನಿರ್ಧಾರ । ಸ್ಥಾಯಿ ಸಮಿತಿ ರಚನೆ ಸಂಬಂಧ ವಾಗ್ವಾದ
ಕನ್ನಡಪ್ರಭ ವಾರ್ತೆ ಅರಕಲಗೂಡುಪಟ್ಟಣದಲ್ಲಿ ಅಪೂರ್ಣಗೊಂಡಿರುವ ಯುಜಿಡಿ ಕಾಮಗಾರಿ ಪೂರ್ಣಗೊಳಿಸುವಂತೆ ಸರ್ಕಾರದ ಗಮನ ಸೆಳೆಯಲು ಬೆಂಗಳೂರು ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗ ಎಲ್ಲ ಸದಸ್ಯರು ಧರಣಿ ಹಮ್ಮಿಕೊಳ್ಳುವ ಕುರಿತು ಗುರುವಾರ ನಡೆದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಪ್ರದೀಪ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯ ರಮೇಶ್ ವಾಟಾಳ್ ಮಾತನಾಡಿ, ಪಟ್ಟದಲ್ಲಿ ಒಳ ಚರಂಡಿ ಸೌಲಭ್ಯ ಕಲ್ಪಿಸುವ ಸಲುವಾಗಿ 2001ರಲ್ಲೇ 10 ಕೋಟಿ ರು. ವೆಚ್ಚದಲ್ಲಿ ನಾಲ್ಕು ನೀರಿನ ಬೃಹತ್ ಟ್ಯಾಂಕ್ ನಿರ್ಮಿಸಲಾಗಿದೆ. ನಂತರ ಕಳೆದ 2016ರಲ್ಲಿ ಯುಜಿಡಿ ಕಾಮಗಾರಿಗೆ ಸರ್ಕಾರ 41 ಕೋಟಿ ರು.ಗೆ ಅನುಮೋದನೆ ನೀಡಿ ಮೊದಲ ಹಂತವಾಗಿ 18 ಕೋಟಿ ರು. ಬಿಡುಗಡೆ ಮಾಡಿತ್ತು. ಪಟ್ಟದ ಕೋಟೆ ಭಾಗದ ಕೆಲವು ಕಡೆ ಪೈಪ್‌ಲೈನ್ ಅಳವಡಿಸಿದ್ದು ಅರ್ಧಕ್ಕೆ ನಿಂತಿದೆ. 9 ವರ್ಷ ಕಳೆದರೂ ಅಪೂರ್ಣಗೊಂಡಿರುವ ಯುಜಿಡಿ ಕಾಮಗಾರಿ ಪುನಾರಂಭಿಸಿಲ್ಲ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಇಂಜಿನಿಯರ್ ಕೇಳಿದರೆ ಗುತ್ತಿಗೆದಾರರಿಗೆ 14 ಕೋಟಿ ರು. ಮಂಜೂರಾಗಿರುವುದಾಗಿ ಹೇಳುತ್ತಾರೆ. ಇನ್ನುಳಿದ 4 ಕೋಟಿ ರು. ಏನಾಯಿತು ಎಂಬುದರ ಮಾಹಿತಿ ಇಲ್ಲ. 18 ಕೋಟಿ ರು. ವೆಚ್ಚದಲ್ಲಿ ಆಗಬೇಕಿದ್ದ ಯುಜಿಡಿ ಕಾಮಗಾರಿ ಕೂಡ ನನೆಗುದಿಗೆ ಬಿದ್ದಿದೆ ಎಂದು ದೂರಿದರು.ಕಾಮಗಾರಿಯಲ್ಲಿ ಆಗಿರುವ ಲೋಪದೋಷ ಕುರಿತು ಸೂಕ್ತ ತನಿಖೆ ಆಗಬೇಕು. ಒಳಚರಂಡಿ ಸೌಲಭ್ಯ ಇಲ್ಲದೆ ಜನರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಮುಕ್ತಿ ಸಿಗದಾಗಿದೆ. ಈ ಕುರಿತು ಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಗೆ ಹಲವಾರು ಸಲ ಮನವಿ ಮಾಡಿದ್ದೇನೆ. ಪಟ್ಟಣದ 21 ಸಾವಿರ ನಿವಾಸಿಗಳ ಹಿತ ದೃಷ್ಟಿಯಿಂದ ಸರ್ಕಾರದ ಗಮನ ಸೆಳೆಯುವ ಸಲುವಾಗಿ ಗಾಂಧಿ ಪ್ರತಿಮೆ ಮುಂದೆ ಎಲ್ಲ ಸದಸ್ಯರು ಪ್ರತಿಭಟನೆ ನಡೆಸಬೇಕು. ಯುಜಿಡಿ ಕಾಮಗಾರಿ ಪೂರ್ಣಗೊಳಿಸಬೇಕು. ಕಾಮಗಾರಿ ಹೊಣೆ ಹೊತ್ತಿರುವ ಒಳ ಚರಂಡಿ ಮಂಡಳಿ ಅವ್ಯವಹಾರ ಬೆಳಕಿಗೆ ಬರಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಅಧ್ಯಕ್ಷ ಪ್ರದೀಪ್ ಕುಮಾರ್ ಸಭೆಯಲ್ಲಿ ಒಪ್ಪಿಗೆ ಸೂಚಿಸಿ ನಿರ್ಣಯ ಅಂಗೀಕರಿಸಲಾಯಿತು.ಪಟ್ಟಣದಲ್ಲಿ ಕೆಲವೇ ಅಂಗನವಾಡಿಗಳಿಗೆ ಮಕ್ಕಳು ಕುಳಿತುಕೊಳ್ಳುವ ಟೇಬಲ್ ಮತ್ತಿತರ ಸಾಮಾಗ್ರಿಗಳನ್ನು ಎಲ್ಲ 17 ವಾರ್ಡ್‌ಗಳಲ್ಲಿರುವ ಅಂಗನವಾಡಿಗಳಿಗೆ ಒದಗಿಸುವಂತೆ ಸದಸ್ಯರಾದ ಹೂವಣ್ಣ, ರಶ್ಮಿ, ಲಕ್ಷ್ಮಿ, ನಿಖಿಲ್ ಕುಮಾರ್, ಅನುಷಾ ಆಗ್ರಹಿಸಿದರು. ಇದಕ್ಕೆ ಸಮ್ಮತಿ ಸೂಚಿಸಿದ ಅಧ್ಯಕ್ಷರು ಎಲ್ಲ ವಾರ್ಡ್ ಗಳಲ್ಲಿ ಅಂಗನವಾಡಿಗಳನ್ನು ಪರಿಶೀಲಿಸಿ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವುದಾಗಿ ತಿಳಿಸಿದರು.
ಪಟ್ಟಣದಲ್ಲಿ ಪರವಾನಗಿ ಇಲ್ಲದೆ ಸಾಕಷ್ಟು ಕೋಳಿ ಅಂಗಡಿಗಳು ವ್ಯಾಪಾರ ನಡೆಸುತ್ತಿವೆ ಎಂದು ಸದಸ್ಯ ನಿಖಿಲ್ ಕುಮಾರ್ ಆರೋಪಿಸಿದರು. ಇದಕ್ಕೆ ಉತ್ತರಿಸಿದ ಆರೋಗ್ಯ ನಿರೀಕ್ಷ ದೀಕ್ಷಿತ್ ಅಂತಹ ಕೋಳಿ ಅಂಗಡಿಗಳಿಗೆ ನೋಟೀಸ್ ನೀಡಿರುವುದಾಗಿ ಹೇಳಿದರು. ಇದರಿಂದ ಕೆರಳಿದ ಸದಸ್ಯ ಕೃಷ್ಣಯ್ಯ ಅವರು ಬರಿ ನೋಟಿಸ್ ನೀಡಿದರೆ ಪ್ರಯೋಜನವಿಲ್ಲ. ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.ಸದಸ್ಯ ನಿಖಿಲ್ ಕುಮಾರ್ ಮಾತನಾಡಿ, ಪಟ್ಟದಲ್ಲಿ ಕೆಲ ವ್ಯಾಪಾರಿಗಳು ಕಡಿಮೆ ನೆಲ ಬಾಡಿಗೆ ನೀಡುತ್ತಿದ್ದು ಬಾಡಿಗೆ ದರ ಏರಿಸಬೇಕು ಎಂದರು. ಇದಕ್ಕೆ ಧನಿಗೂಡಿಸಿದ ಸದಸ್ಯೆ ರಶ್ಮಿ ಅವರು ಮಧ್ಯವರ್ತಿಗಳು ವ್ಯಾಪಾರಿಗಳಿಂದ ಅಧಿಕ ಬಾಡಿಗೆ ವಸೂಲಿ ಮಾಡಿ ಪಪಂ ಗೆ ಕಡಿಮೆ ದರ ಪಾವತಿಸುತ್ತಿದ್ದಾರೆ. ಇದು ತಪ್ಪಬೇಕು ಎಂದರು.
ಸ್ಥಾಯಿ ಸಮಿತಿ ರಚನೆ ಸಂಬಂಧ ಸಭೆಯಲ್ಲಿ ಸದಸ್ಯರ ನಡುವೆ ವಾಗ್ವಾದ ನಡಯಿತು. ಸದಸ್ಯರಾದ ರಶ್ಮಿ, ನಿಖಿಲ್ ಕುಮಾರ್ ಮಾತನಾಡಿ, ಅಧ್ಯಕ್ಷರು ಪ್ರಾಮಾಣಿಕವಾಗಿ ಅಧಿಕಾರ ಚಲಾಯಿಸುವಾಗ ಸ್ಥಾಯಿ ಸಮಿತಿ ರಚನೆ ಬೇಕಿಲ್ಲ ಎಂದರು. ಸದಸ್ಯ ಅನಿಕೇತನ್ ಮಾತನಾಡಿ, ಕೃಷ್ಣಯ್ಯ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಸ್ಥಾಯಿ ಸಮಿತಿ ರಚಿಸಬೇಕು ಎಂದರು. ಈ ವೇಳೆ ಸದಸ್ಯರ ನಡುವೆ ಪರ ವಿರೋಧ ಚರ್ಚೆ ನಡೆಯಿತು.ಅಧ್ಯಕ್ಷ ಪ್ರದೀಪ್ ಕುಮಾರ್, ಸದಸ್ಯ ನಿಖಿಲ್, ಉಪಾಧ್ಯಕ್ಷ ಸುಭಾನ ಷರೀಫ್, ಮುಖ್ಯಾಧಿಕಾರಿ ಬಸವರಾಜ ಟಾಕಪ್ಪ ಶಿಗ್ಗಾವಿ ಇದ್ದರು.