ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಸಂತೇಬಾಚಹಳ್ಳಿಯಲ್ಲಿ ಬಿ.ಶಿವಪ್ಪರ ನೇತೃತ್ವದಲ್ಲಿ ಗೆಳೆಯರ ಬಳಗ ಯುವಕರ ಸಂಘದ ವತಿಯಿಂದ ಆಯೋಜಿಸಿದ್ದ 67ನೇ ವರ್ಷದ ಗಣೇಶೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, 2010ರಲ್ಲಿ ಕೆ.ಆರ್.ಪೇಟೆ ತಹಸೀಲ್ದಾರ್ ಆಗಿದ್ದ ವೇಳೆ ಇದೇ ಗ್ರಾಮದ ಗಣೇಶೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ನನ್ನ ಗುರುಗಳಾದ ಕೆಂಗೇರಿ ವಿಶ್ವ ಒಕ್ಕಲಿಕ ಮಠದ ಪೀಠಾಧಿಪತಿಗಳಾಗಿದ್ದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಭಾಗವಹಿಸಿದ್ದರು ಎಂದರು.
ಶ್ರೀಗಳ ಜೊತೆ ನಾನು ಪಕ್ಕದಲ್ಲಿ ಕುಳಿತಿದ್ದೆ. ಆಗ ಅವರು ನನ್ನ ಮಠಕ್ಕೆ ಒಬ್ಬ ಗುರು ಬೇಕು ಎಂದು ಹೇಳಿದರು. ತಕ್ಷಣ ನಾನು ಬರುತ್ತೇನೆ ಎಂದು ಅವರಿಗೆ ಹೇಳಿದೆ. ಅದೇ ರೀತಿ ಕಾಕತಾಳೀಯವೇನೋ ಗೊತ್ತಿಲ್ಲ, ನನಗೆ ಇಂದು ಧೀಕ್ಷೆ ಪಡೆದು ಎಲ್ಲರ ಸೇವೆ ಮಾಡಲು ಅವಕಾಶ ಸಿಕ್ಕಿದೆ ಎಂದು ಸ್ಮರಿಸಿದರು.ಗ್ರಾಮದ ಹಿರಿಯರಾದ ಬಿ.ಶಿವಪ್ಪ ಅವರು ತಾವು ಯೌವನಾವಸ್ಥೆಗೆ ಕಾಲಿಟ್ಟ ದಿನದಿಂದ ಇಂದಿನವರೆಗೂ ಕಳೆದ 67 ವರ್ಷಗಳಿಂದ ಯುವಕರನ್ನು ಸಂಘಟಿಸಿ ನಿರಂತರವಾಗಿ ಗಣೇಶೋತ್ಸವ ಆಯೋಜನೆ ಮಾಡುತ್ತಿದ್ದಾರೆ. ಗಣೇಶೋತ್ಸವ ಕೇವಲ ಪ್ರಜಾ ಕಾರ್ಯಗಳಿಗೆ ಸೀಮಿತವಾಗದೆ ಗ್ರಾಮದ ಸಮಸ್ಯೆಗಳ ಪರಿಹಾರದ ವೇದಿಕೆಯಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಟಿ.ಮಂಜು ಮಾತನಾಡಿ, ಅತೀವೃಷ್ಟಿಯಿಂದ ಹಾನಿಗೀಡಾಗಿರುವ ಸಂತೇಬಾಚಹಳ್ಳಿ ಹೋಬಳಿಯ ಕೆರೆ- ಕಟ್ಟೆಗಳ ಪುನರ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಪೂರಕವಾಗಿ ಸ್ಪಂದಿಸುತ್ತಿಲ್ಲ. ಅನುದಾನ ಕೊರತೆಯಿಂದ ಅಭಿವೃದ್ಧಿಗೆ ತಡೆಯಾಗುತ್ತಿದೆ ಎಂದು ವಿಷಾದಿಸಿದರು.
ಸಂತೇಬಾಚಹಳ್ಳಿಗೆ ಒಂದು ಕೆ.ಪಿ.ಎಸ್. ಶಾಲೆಗೆ ಅನುಮೋದನೆ ಸಿಕ್ಕಿದೆ. ಹಳ್ಳಿಗಳ ರಸ್ತೆ ಅಭಿವೃದ್ಧಿಗೆ ಹಣ ನೀಡಿ ಕೆಲಸ ಮಾಡುತ್ತಿದ್ದೇನೆ. ಹೋಬಳಿ ಎಲ್ಲಾ ಕೆರೆಗಳನ್ನು ಹೇಮಾವತಿ ನದಿ ನೀರಿನಿಂದ ತುಂಬಿಸುವ ಗೂಡೇಹೊಸಹಳ್ಳಿ ಏತ ನೀರಾವರಿ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ. ಸಚಿವರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿದ್ದೇನೆ. ವಿಪಕ್ಷದಲ್ಲಿದ್ದರೂ ಕೂಡ ಅನುದಾನ ತಂದು ಉತ್ತಮ ಕೆಲಸ ಮಾಡಿದ್ದೇನೆ ಎಂದು ಹೇಳಿದರು.