ಬಾನುಲಿ ಕೇಂದ್ರಕ್ಕೆ ಆಕಾಶವಾಣಿ ಎಂದು ಹೆಸರಿಟ್ಟವರು ನಾ. ಕಸ್ತೂರಿ

KannadaprabhaNewsNetwork |  
Published : Aug 15, 2025, 01:00 AM IST
3 | Kannada Prabha

ಸಾರಾಂಶ

ನನ್ನ ಕವನಗಳ ಯೋಗ್ಯತೆ ಕಂಡು ಹಿಡಿದು ಉತ್ತೇಜನ ಕೊಟ್ಟವರು ಕಸ್ತೂರಿಯವರು ಮತ್ತು ಸಿದ್ದೇಶ್ವರಾನಂದರು ಎಂದು ಕುವೆಂಪು ಅವರೇ ಬರೆದುಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರುಗೋಪಾಲಸ್ವಾಮಿ ಅವರು ಆರಂಭಿಸಿದ ಮೈಸೂರು ಬಾನುಲಿ ಕೇಂದ್ರಕ್ಕೆ ‘ಆಕಾಶವಾಣಿ’ ಎಂದು ಹೆಸರಿಟ್ಟವರೇ ಕಸ್ತೂರಿ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಸ್ಮರಿಸಿದರು.ಸರಸ್ವತಿಪುರಂನ ಜೆಎಸ್‌ಎಸ್‌ ಮಹಿಳಾ ಕಾಲೇಜಿನಲ್ಲಿ ಗುರುವಾರ ನಡೆದ ನಾ. ಕಸ್ತೂರಿ ಹಾಸ್ಯ ರಸಿಕ ವೃಂದ ಹಾಗೂ ಆಕಾಶವಾಣಿ ಮೈಸೂರು ಆಯೋಜಿಸಿದ್ದ ನಾ. ಕಸ್ತೂರಿ ಸಂಸ್ಮರಣೋತ್ಸವದಲ್ಲಿ ಕೊರವಂಜಿ ಕಸ್ತೂರಿ ಹಾಗೂ ನಾ. ಕಸ್ತೂರಿ ಅವರ ಬದುಕು- ಬರಹ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ನಾಲ್ಕಾರು ಸಾಲುಗಳಲ್ಲಿ ವಾಸ್ತವ ಸಂಗತಿಯನ್ನು ಹಾಸ್ಯದಿಂದ ತೆರೆದಿಡುವ ಪ್ರತಿಭೆಯನ್ನು ಅವರು ಹೊಂದಿದ್ದರು. ಮಲಯಾಳಂ ಮಾತೃಭಾಷಿಕರಾದ ಅವರು ಬನುಮಯ್ಯ ಪ್ರೌಢಶಾಲೆಯಲ್ಲಿ ಅಧ್ಯಪನಾ ವೃತ್ತಿ ಆರಂಭಿಸಿ 25ನೇ ವಯಸ್ಸಿಗೆ ಕನ್ನಡ ಕಲಿತು, ನಾಟಕ, ಕಾದಂಬರಿ, ಅನುವಾದ ಸೇರಿದಂತೆ ಎಲ್ಲಾ ಪ್ರಕಾರಗಳಲ್ಲಿ ಅತ್ಯಮೂಲ್ಯ ಕೃತಿ ಕೊಟ್ಟರು. ಬರಹಗಳಿಂದ ಓದುಗರಲ್ಲಿ ಹಾಸ್ಯಪ್ರಜ್ಞೆ ಮೂಡಿಸುವ ಕೆಲಸವನ್ನು ಅವರು ಸಮರ್ಥವಾಗಿ ಮಾಡಿದ್ದಾರೆ ಎಂದರು.ನನ್ನ ಕವನಗಳ ಯೋಗ್ಯತೆ ಕಂಡು ಹಿಡಿದು ಉತ್ತೇಜನ ಕೊಟ್ಟವರು ಕಸ್ತೂರಿಯವರು ಮತ್ತು ಸಿದ್ದೇಶ್ವರಾನಂದರು ಎಂದು ಕುವೆಂಪು ಅವರೇ ಬರೆದುಕೊಂಡಿದ್ದಾರೆ. ಮೈಸೂರಿನಲ್ಲಿ ರಾಮಕೃಷ್ಣ ಆಶ್ರಮದ ಸ್ಥಾಪನೆಗೆ ಶ್ರಮಿಸಿದರು. ಸಿದ್ದೇಶ್ವರಾನಂದ ಅವರು ಕಸ್ತೂರಿ ಅವರ ಬಾಲ್ಯದ ಗೆಳೆಯ ಎಂದರು.ಮಲಯಾಳಂ ಮಾತೃಭಾಷೆಯಾದರೂ ಕನ್ನಡ ಸಾಹಿತ್ಯ ಲೋಕಕ್ಕೆ ನಾ. ಕಸ್ತೂರಿ ಕೊಡುಗೆ ಅನನ್ಯ. ನಾಲ್ಕಾರು ಸಾಲುಗಳಲ್ಲಿ ವಾಸ್ತವ ಸಂಗತಿಯನ್ನು ಹಾಸ್ಯದಿಂದ ತೆರೆದಿಡುವ ಪ್ರತಿಭೆ ಅವರದ್ದಾಗಿತ್ತು ಎಂದು ಅವರು ಹೇಳಿದರು.ಆಕಾಶವಾಣಿ ಉಪ ನಿರ್ದೇಶಕ ಎಸ್‌.ಎಸ್‌. ಉಮೇಶ್‌ ಮಾತನಾಡಿ, ಆಕಾಶವಾಣಿ ಬೆಳವಣಿಗೆಯಲ್ಲಿ ಅವರ ಕೊಡುಗೆ ದೊಡ್ಡದು. ಮೊದಲ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ನಿತ್ಯ ಒಂದು ಗಂಟೆಯ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಬಾನುಲಿಗೆ ಹೆಸರಿನ್ನುಡುವ ಚರ್ಚೆಯು ನಡೆಯುತ್ತಿದ್ದಾಗ ಅವರ ತಾಯಿ ಆಕಾಶವಾಣಿ ಎಂದು ಹೇಳಿದ್ದರಂತೆ ಎಂದು ಸ್ಮರಿಸಿದರು.ನಿತಿನ್ ರಾಜಾರಾಮ್‌ ಶಾಸ್ತ್ರೀ ಮತ್ತು ಸಂಗಡಿಗರು ನಾ. ಕಸ್ತೂರಿ ಅವರ ಆಯ್ದ ಕವನಗಳ ಗೀತಗಾಯನ ನಡೆಸಿಕೊಟ್ಟರು.ಲೇಖಕರಾದ ಬೇಲೂರು ರಾಮಮೂರ್ತಿ, ಕೆ.ಸಿ. ಶಿವಪ್ಪ, ಎಚ್‌ಎಂಟಿ ಸಂಸ್ಥೆಯ ನಿವೃತ್ತ ಮುಖ್ಯಸ್ಥ ಎನ್‌. ರಾಮಾನುಜ, ಎಂ. ಶಿವಕುಮಾರ್, ವಾಗ್ಮಿ ವೈ.ವಿ. ಗುಂಡೂರಾವ್‌, ಪ್ರೊ.ಎಂ. ಕೃಷ್ಣೇಗೌಡ ಮಾತನಾಡಿದರು. ಬಿ.ಎಸ್‌. ರಾಜಾರಾಂ ಪಾಲ್ಗೊಂಡಿದ್ದರು.

PREV

Recommended Stories

ಲೋಕಾ ಎಸ್ಪಿ ಬದ್ರಿನಾಥ್‌ ಸೇರಿ 19 ಪೊಲೀಸರಿಗೆ ರಾಷ್ಟ್ರ ಪದಕ
ಕೊಲೆ ಆರೋಪಿ ದರ್ಶನ್‌ಗೆ ತಪ್ಪದ ದಯಾನಂದ್ ಕಂಟಕ