ಕನ್ನಡಪ್ರಭ ವಾರ್ತೆ ವಿಜಯಪುರ
ಹಿಂದೆ ನಾವು ಲಿಂಗಾಯತ ಧರ್ಮ ಮಾನ್ಯತೆಗೆ ಪ್ರಯತ್ನಿಸಿದ್ದೇವು. ಆದರೆ, ಕೆಲವರು ಧರ್ಮ ಒಡೆಯಲು ಪ್ರಯತ್ನಿಸಿದರು. ಅಂದು ಸ್ವತಂತ್ರ ಧರ್ಮದ ಮಾನ್ಯತೆ ಸಿಕ್ಕಿದ್ದರೆ ಇಂದು ಲಿಂಗಾಯಿತ ಎಲ್ಲ ಉಪ ಪಂಗಡಗಳಿಗೆ ಹೆಚ್ಚಿನ ಸೌಲಭ್ಯಗಳು ದೊರೆಯುತ್ತಿದ್ದವು ಎಂದು ಜಿಲ್ಲಾ ಉಸ್ತುಚಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.ಬಬಲೇಶ್ವರ ತಾಲೂಕಿನ ಧನ್ಯಾಳ ಗ್ರಾಮದಲ್ಲಿ ಬುಧವಾರ ವಿಶ್ವಗುರು ಬಸವೇಶ್ವರ ಮೂರ್ತಿ ಅನಾವರಣ ಮಾಡಿ ಮಾತನಾಡಿದ ಅವರು, ಧನ್ಯಾಳ ಗ್ರಾಮಸ್ಥರು ಶ್ರದ್ಧೆ, ಭಕ್ತಿ, ವಿಜೃಂಭಣೆಯಿಂದ ಸ್ವಾಮೀಜಿಗಳ ಸಾನಿಧ್ಯದಲ್ಲಿ ಬಸವೇಶ್ವರರ ಮೂರ್ತಿ ಉದ್ಘಾಟಿಸಿರುವುದು ಸಂತಸ ತಂದಿದೆ. ಧನ್ಯಾಳ ಗ್ರಾಮದಲ್ಲಿ ಮಲ್ಲಿಕಾರ್ಜುನ ದೇವಸ್ಥಾನ ಅಭಿವೃದ್ಧಿಗೆ ₹ 10 ಲಕ್ಷ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದರು.
ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಸಚಿವ ಎಂ.ಬಿ.ಪಾಟೀಲರು ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ವೀರ ರಾಣಿ ಕಿತ್ತೂರು ಚನ್ನಮ್ಮ ಹೆಸರು ನಾಮಕರಣ ಮಾಡಿ ಸ್ವಾತಂತ್ರ್ಯ ಹೋರಾಟದ ಕಿಚ್ಚಿಗೆ ಗೌರವ ನೀಡಿದ್ದಾರೆ. ಮಠದಲ್ಲಿ ಪ್ರಸಾದ ಸೇವಿಸಿರುವುದನ್ನು ಜನರು ಮರೆಯಬಹುದು. ಆದರೆ, ಹೊಲಗಳಿಗೆ ನೀರು ಕೊಟ್ಟವರನ್ನು ಎಂದೂ ಮರೆಯಬಾರದು. ಅನ್ನದಾತರು ಸದಾ ಅವರ ಬೆನ್ನಿಗೆ ನಿಲ್ಲಬೇಕು. ಧರ್ಮಕ್ಕೆ ನ್ಯಾಯ ಒದಗಿಸುವ ನಾಯಕರ ಜೊತೆ ನಾವೆಲ್ಲರೂ ಇರಬೇಕು ಎಂದು ಸ್ವಾಮೀಜಿ ಹೇಳಿದರು.ಮುದಗಲ್ ತಿಮ್ಮಾಪೂರದ ಕಲ್ಯಾಣಾಶ್ರಮದ ಮಹಾಂತೇಶ್ವರ ಮಠದ ಡಾ.ಮಹಾಂತ ಸ್ವಾಮಿಗಳು ಮಾತನಾಡಿ, ಬಸವಣ್ಣನವರು ತಾತ್ವಿಕ ತಳಹದಿಯ ಮೇಲೆ ಸಾತ್ವಿಕ ಸಮಾಜ ಕಟ್ಟಿದ್ದಾರೆ. ಎರಡು ವರ್ಷಗಳಿಂದ ರಾಜ್ಯ ಸರ್ಕಾರ ಬಸವಣ್ಣನ ವಿಚಾರಗಳನ್ನು ವಿಶ್ವಕ್ಕೆ ಪರಿಚಯಿಸುತ್ತಿದ್ದು, ಇದರಲ್ಲಿ ಎಂ.ಬಿ.ಪಾಟೀಲರ ಕೊಡುಗೆ ಅಪಾರವಾಗಿದೆ. ಬಸವಣ್ಣ ಮತ್ತು ಶರಣರ ವಚನ ಪ್ರಸಾರದಲ್ಲಿ ಡಾ.ಫ.ಗು.ಹಳಕಟ್ಟಿ, ಹರ್ಡೆಕರ ಮಂಜಪ್ಪನವರ ಪಾತ್ರ ಪ್ರಮುಖವಾಗಿದೆ. ರಾಷ್ಟ್ರ ಮತ್ತು ವಿಶ್ವ ಉಳಿಯಬೇಕಾದರೆ ಬಸವಾದಿ ಶರಣರ ತತ್ವಗಳನ್ನು ಅಳವಡಿಸಿಕೊಳ್ಳಬೇಕು. ಯುವ ಜನತೆ ದುಷ್ಚಟಗಳಿಂದ ದೂರವಿದ್ದು, ಧನ್ಯಾಳದ ಯುವಕರು ಧನ್ಯರಾಗಬೇಕು. ಬಸವ ತತ್ವ ಆದರ್ಶವಾಗಬೇಕು ಎಂದು ಕರೆ ನೀಡಿದರು.ಗ್ರಾಮದ ಮುಖಂಡ ಚಂದ್ರಶೇಖರ ಗಂಟೆಪ್ಪಗೋಳ ಮಾತನಾಡಿ, 12ನೇ ಶತಮಾನದಲ್ಲಿ ಬಸವಾದಿ ಶರಣರು ಮೌಢ್ಯಾಚರಣೆ, ಕಂದಾಚಾರ ಹೋಗಲಾಡಿಸಿ, ವರ್ಣ ವ್ಯವಸ್ಥೆ ತೊಲಗಿಸಿ ಸಮಸಮಾಜಕ್ಕೆ ನಾಂದಿ ಹಾಡಿದರು. ಎಂ.ಬಿ.ಪಾಟೀಲರು ಲಿಂಗಾಯಿತ ಧರ್ಮ ಮತ್ತು ಬಸವಾದಿ ಶರಣರ ಬಗ್ಗೆ ಜನಜಾಗೃತಿ ಮೂಡಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ, ನಿಡೋಣಿ ಚನ್ನವೀರೇಶ್ವರ ವಿರಕ್ತಮಠದ ಸಿದ್ದಲಿಂಗೇಶ್ವರ ಸ್ವಾಮೀಜಿ, ಹೆಬ್ಬಾಳಹಟ್ಟಿ ಚಂದ್ರಗಿರಿ ಸದಾಶಿವ ಮಠದ ವೇದಮೂರ್ತಿ ಸಿದ್ದಲಿಂಗಯ್ಯ ಹಿರೇಮಠ ಸ್ವಾಮೀಜಿ ಸೇರಿದಂತೆ ಹಲವರು ಭಾಗವಹಿಸಿದ್ದರು.-----ಕೋಟ್12ನೇ ಶತಮಾನದಿಂದ 1881ರವರೆಗೆ ಲಿಂಗಾಯಿತ ಪ್ರತ್ಯೇಕ ಧರ್ಮವಾಗಿತ್ತು. ಆದರೆ, 1881ರಲ್ಲಿ ಮೈಸೂರು ಅರಸರು ಲಿಂಗಾಯಿತರನ್ನು ಪ್ರತ್ಯೇಕ ಧರ್ಮದ ಕಾಲಂನಿಂದ ತೆಗೆದು ಹಿಂದೂ ಧರ್ಮದ ಶೂದ್ರ ವರ್ಣದಲ್ಲಿ ಸೇರಿಸಿದರು. ದಯವೇ ಧರ್ಮದ ಮೂಲವಯ್ಯ ಎಂಬ ತಿರುಳು ಹೊಂದಿರುವ ಬಸವ ಧರ್ಮ ಪಾಲನೆಯಾದರೆ ವಿಶ್ವದಲ್ಲಿ ಯುದ್ಧದ ವಾತಾವರಣವೇ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಬಸವ ಭಾರತವಾಗಲಿದೆ. ಆಗ ದೇಶದಲ್ಲಿ ಕಾಯಕ, ದಾಸೋಹ, ಸಮಾನತೆ, ಸಾಮರಸ್ಯ ನೆಲೆಸಲಿದೆ.ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ