ಬೆಂಗಳೂರು : ಪಂಚರಾಜ್ಯ ಚುನಾವಣೆ ಫಲಿತಾಂಶ ಜತೆಗೆ ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಎರಡು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶವೂ ಸೋಮವಾರ ಹೊರ ಬೀಳಲಿದೆ. ಫಲಿತಾಂಶ ಹಾಗೂ ಅದರ ಮುಂದುವರೆದ ರಾಜಕೀಯ ಸಮೀಕರಣಗಳ ಕಾರಣಗಳಿಗೆ ಕಾಂಗ್ರೆಸ್‌ ವಲಯದಲ್ಲಿ ಈ ಫಲಿತಾಂಶದ ಬಗ್ಗೆ ತೀವ್ರ ಕುತೂಹಲ ಮನೆ ಮಾಡಿದೆ.

ಇತರೆ ಉಪ ಚುನಾವಣೆಗಳಿಗಿಂತ ಈ ಬಾರಿಯ ಉಪ ಚುನಾವಣೆ ಹೆಚ್ಚು ಸದ್ದು ಮಾಡಿತ್ತು. ಮುಸ್ಲಿಂ ಬಾಹುಳ್ಯವಿರುವ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಉಂಟಾದ ಟಿಕೆಟ್‌ ತಿಕ್ಕಾಟ ಇದಕ್ಕೆ ಕಾರಣವಾಗಿತ್ತು. ಆದರೆ, ಈ ತಿಕ್ಕಾಟದ ನಡುವೆಯೂ ದಾವಣಗೆರೆ ಕಾಂಗ್ರೆಸ್ ಗೆಲುವು ಖಚಿತ ಎಂಬ ವಿಶ್ವಾಸಕ್ಕೆ ಕೈ ಪಾಳಯ ಬಂದಿದೆ. ಅಲ್ಪಸಂಖ್ಯಾತ ಮತಗಳಲ್ಲಿ ತುಸು ಗೊಂದಲ ಉಂಟಾಗಿದ್ದರೂ ಪೂರ್ಣ ಪ್ರಮಾಣದಲ್ಲಿ ಕಾಂಗ್ರೆಸ್‌ನಿಂದ ವಿಮುಖರಾಗಿಲ್ಲ. ಜತೆಗೆ ಲಿಂಗಾಯತ ಮತಗಳು ಕ್ರೋಢೀಕರಣ ಆಗಿರುವುದರಿಂದ ದಾವಣಗೆರೆ ದಕ್ಷಿಣದಲ್ಲಿ ಭಾರಿ ಬಹುಮತ ಇಲ್ಲದಿದ್ದರೂ ಗೆಲುವಿನ ಭರವಸೆಯಲ್ಲಿ ಕಾಂಗ್ರೆಸ್‌ ಇದೆ.

ಜತೆಗೆ ಬಾಗಲಕೋಟೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಂಡ ಬೀಡುಬಿಟ್ಟಿದ್ದು ಹಾಗೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದ್ದು, ಇದು ಕಾಂಗ್ರೆಸ್‌ಗೆ ಉತ್ತಮ ಮತ ಫಸಲು ನೀಡಿದೆ ಎಂಬ ನಂಬಿಕೆ ಕೈ ಪಾಳಯದಲ್ಲಿದೆ.


ಹೀಗಾಗಿ ಕಾಂಗ್ರೆಸ್ಸಿಗರಿಗೆ ಬಹುಮತದಲ್ಲಿ ವ್ಯತ್ಯಾಸಗಳಿದ್ದರೂ ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಗೆಲ್ಲುವ ನಂಬಿಕೆಯಿದೆ. ಒಂದೊಮ್ಮೆ ಎರಡೂ ಕ್ಷೇತ್ರ ಸೋತರೆ ಅಧಿಕಾರ ಹಂಚಿಕೆ ಮತ್ತಿತರ ವಿಚಾರಗಳು ಮುನ್ನೆಲೆಗೆ ಬರುವ ಸಾಧ್ಯತೆಯಿದೆ.

ಉಪ ಚುನಾವಣೆಗಳು ಸಾಮಾನ್ಯವಾಗಿ ಅಧಿಕಾರದಲ್ಲಿರುವ ಪಕ್ಷದ ಪರವಾಗಿಯೇ ಇರುವುದು ರೂಢಿ. ಸಂಪನ್ಮೂಲ, ವ್ಯವಸ್ಥೆಯ ಬಲ, ಅನುಕಂಪದ ಲಾಭ ಮತ್ತಿತರ ಕಾರಣಗಳಿಂದ ಈ ಬಾರಿಯ ಉಪ ಚುನಾವಣೆಯಲ್ಲೂ ಆಡಳಿತಾರೂಢ ಕಾಂಗ್ರೆಸ್‌ಗೆ ಪೂರಕ ವಾತಾವರಣ ಇದೆ ಎಂಬ ಲೆಕ್ಕಾಚಾರ ಇದೆ.

ಸೋತರೆ ಏನು?:

ಅಕಸ್ಮಾತ್‌ ಎರಡೂ ಕಡೆ ಸೋತರೆ ಏನಾಗಬಹುದು ಎಂಬ ಲೆಕ್ಕಾಚಾರವೂ ಶುರುವಾಗಿದ್ದು, ಒಂದೊಮ್ಮೆ ಎರಡೂ ಕ್ಷೇತ್ರ ಸೋತರೆ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆಯ ಮುನ್ಸೂಚನೆಯಾಗಿ ಪರಿಗಣಿಸಬಹುದು. ಪ್ರತಿಪಕ್ಷಗಳ ಧ್ವನಿಗೆ ಬಲ ಬರಬಹುದು. ಸರ್ಕಾರ ತಮ್ಮಲ್ಲಿನ ಲೋಪಗಳನ್ನು ಸರಿಪಡಿಸಿಕೊಳ್ಳಲು ಸಮಯಾವಕಾಶ ಇರುವುದರಿಂದ ಸಾರ್ವತ್ರಿಕ ಚುನಾವಣೆ ವೇಳೆಗೆ ಆಗಬೇಕಾದ ಬದಲಾವಣೆಗಳಿಗೆ ಕೈ ಹಾಕಬೇಕಾಗಬಹುದು.

ಎರಡರಲ್ಲಿ ಒಂದು ಸೋತು, ಒಂದು ಗೆದ್ದರೆ ಯಾವ ಕ್ಷೇತ್ರ ಸೋತಿದ್ದಾರೆ ಎಂಬುದರ ಮೇಲೆಯೇ ಫಲಿತಾಂಶದ ಪರಿಣಾಮಗಳ ಲೆಕ್ಕಾಚಾರ ಅವಲಂಬಿಸಲಿದೆ. ದಾವಣಗೆರೆ ದಕ್ಷಿಣ ಸೋತರೆ ಮುಸ್ಲಿಂ ಬಂಡಾಯದ ಕಾರಣ ನೀಡಿ ಚುನಾವಣೆಗೆ ಕೆಲಸ ಮಾಡದ ಮುಸ್ಲಿಂ ನಾಯಕರನ್ನು ಹೊಣೆ ಮಾಡಬಹುದು. ಪ್ರಚಾರಕ್ಕೆ ಸಹಕಾರ ನೀಡದ ಸಚಿವರ ಮೇಲೂ ಕ್ರಮ ಕೈಗೊಳ್ಳಬಹುದು. ಜತೆಗೆ ಇದು ಡಿ.ಕೆ.ಶಿವಕುಮಾರ್‌ ಅವರು ಒತ್ತಾಯದಿಂದ ಕೊಡಿಸಿದ ಟಿಕೆಟ್ ಆಗಿರುವುದರಿಂದ ಅವರಿಗೆ ತುಸು ಹಿನ್ನಡೆ ಉಂಟಾಗಬಹುದು.

ಬಾಗಲಕೋಟೆ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಂಡ ಅಹರ್ನಿಶಿ ಕೆಲಸ ಮಾಡಿದೆ. ಸಿದ್ದರಾಮಯ್ಯ ಅವರದ್ದೇ ಸಮುದಾಯದ ಅಭ್ಯರ್ಥಿ ಆಗಿರುವುದಿಂದ ಹಿನ್ನಡೆ ಆಗಲ್ಲ ಎಂಬ ಗಟ್ಟಿ ವಿಶ್ವಾಸದಲ್ಲಿದ್ದಾರೆ. ಒಂದು ವೇಳೆ ಬಾಗಲಕೋಟೆ ಸೋತರೆ ಸಿದ್ದರಾಮಯ್ಯ ಅವರಿಗೆ ಹಿನ್ನಡೆ ಆಗಲಿದೆ.

ಎರಡೂ ಕ್ಷೇತ್ರ ಸೋತರೆ, ನಾಯಕತ್ವ ಬದಲಾವಣೆಯ ಚರ್ಚೆಗೆ ಇಂಬು ದೊರೆಯಬಹುದೇ ಎಂಬ ಕುತೂಹಲವಿದೆ. ಆದರೆ, ನಾಯಕತ್ವ ಬದಲಾವಣೆ ಎಂಬುದು ಉಪಚುನಾವಣೆ ಫಲಿತಾಂಶಕ್ಕಿಂತ ರಾಹುಲ್‌ಗಾಂಧಿ ಅವರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಹೆಚ್ಚಾಗಿ ಅವಲಂಭಿತ ಎನ್ನುತ್ತಾರೆ ಹಿರಿಯ ಕಾಂಗ್ರೆಸ್ ನಾಯಕರು.

ಅವರು ಪ್ರಕಾರ ರಾಹುಲ್‌ಗಾಂಧಿ ಅವರು ಈಗಾಗಲೇ ನಾಯಕತ್ವ ಬದಲಾವಣೆ ಮಾಡಲು ಅಥವಾ ಮಾಡದಿರಲು ಸ್ಪಷ್ಟ ನಿಲುವು ತಾಳಿದ್ದರೆ ಅದನ್ನು ಬದಲು ಮಾಡುವಷ್ಟು ಪರಿಣಾಮ ಈ ಚುನಾವಣೆ ಬೀರಲಾರದು. ಈ ಕಾರಣಕ್ಕೆ ಫಲಿತಾಂಶ ಅಧಿಕಾರ ಹಂಚಿಕೆ ವಿಚಾರದಲ್ಲಿ ಗೌಣ ಆಗಲಿದೆ ಎಂಬ ವಿಶ್ಲೇಷಣೆಯೂ ಇದೆ.

ಕುತೂಹಲ ಮೂಡಿಸಿದ ರಾಹುಲ್‌ ನಡೆ

ಅಧಿಕಾರ ಹಂಚಿಕೆ, ಸಂಪುಟ ಪುನಾರಚನೆ ಮತ್ತಿತರ ವಿಷಯಗಳ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೇತೃತ್ವದ ಎರಡೂ ಬಣಗಳು ಪ್ರಯತ್ನಿಸಿದರೂ ರಾಹುಲ್‌ಗಾಂಧಿ ಅವರ ಯಾರ ಭೇಟಿಗೂ ಸಿಗುತ್ತಿಲ್ಲ.

ಅಧಿಕಾರ ಹಂಚಿಕೆ, ಸಂಪುಟ ಪುನಾರಚನೆ ಕುರಿತು ರಾಹುಲ್‌ಗಾಂಧಿ ಅವರ ಯೋಚನೆ ಏನಿದೆ ಎಂಬುದು ಎಐಸಿಸಿ ಅಧ್ಯಕ್ಷರ ಆದಿಯಾಗಿ ಯಾರಿಗೂ ಸ್ಪಷ್ಟತೆ ಇಲ್ಲ. ಹೀಗಾಗಿ ಕೈ ಪಾಳೆಯದಲ್ಲಿನ ಈ ಬಗೆಗಿನ ಕುತೂಹಲ ಮುಂದುವರೆಯುವ ಸಾಧ್ಯತೆಯಿದೆ.

ನಾಯಕರ ಮೇಲೇನು ಪರಿಣಾಮ

- ಎರಡೂ ಕ್ಷೇತ್ರಗಳಲ್ಲಿ ಗೆಲುವಿನ ನಿರೀಕ್ಷೆಯಲ್ಲಿರುವ ಆಡಳಿತಾರೂಢ ಕಾಂಗ್ರೆಸ್‌ ಪಾಳಯ

- ದಾವಣಗೆರೆ ಗೆದ್ದರೆ ಡಿಕೆಗೆ ಹಿರಿಮೆ, ಸೋತರೆ ಮುಸ್ಲಿಂ ಬಂಡಾಯ ನಾಯಕರ ತಲೆದಂಡ?

- ಬಾಗಲಕೋಟೆ ಕ್ಷೇತ್ರದಲ್ಲಿ ಸೋತರೆ ಸಿಎಂ ಸಿದ್ದರಾಮಯ್ಯಗೆ ಅಲ್ಪ ಹಿನ್ನಡೆ ಆಗುವ ಸಾಧ್ಯತೆ

- ಎರಡೂ ಕಡೆ ಕಾಂಗ್ರೆಸ್‌ ಸೋತರೆ ನಾಯಕತ್ವ ಬದಲಾವಣೆಗೆ ಚರ್ಚೆಗೆ ಮತ್ತೆ ಇಂಬು ಸಾಧ್ಯತೆ

- ಆದರೆ ನಾಯಕತ್ವದ ಬದಲು ವಿಷಯದಲ್ಲಿ ರಿಸಲ್ಟ್‌ಗಿಂತ ರಾಹುಲ್‌ ಮನದಾಳವೇ ಅಂತಿಮ