ಕನ್ನಡಪ್ರಭ ವಾರ್ತೆ ಬೆಂಗಳೂರು
ಕೇಂದ್ರ ಸರ್ಕಾರ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿರುವುದನ್ನು ಖಂಡಿಸಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಶನಿವಾರ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಕಾರ್ಯಕರ್ತರು ಖಾಲಿ ಸಿಲಿಂಡರ್ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ವಾಣಿಜ್ಯ ಬಳಕೆ ಸಿಲಿಂಡರ್‌ಗಳಿಗೆ ಹಾರ ಹಾಕಿ, ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ವಿರುದ್ಧ ದಿಕ್ಕಾರ ಕೂಗಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಬೆಲೆ ಏರಿಕೆಯನ್ನು ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಯುವ ಕಾಂಗ್ರೆಸ್ ವತಿಯಿಂದ ತೀವ್ರ ಹೋರಾಟ ರೂಪಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.ಈ ವೇಳೆ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್ ಗೌಡ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಬೆಲೆ ಏರಿಕೆ ಮಾಡುವ ಅಷ್ಟೊಂದು ಹಂಬಲವಿದ್ದರೆ, ಮೊದಲು ತನ್ನ ಪಕ್ಷದ ಅಂಧ ಭಕ್ತರಿಗೆ ಪ್ರತ್ಯೇಕ ಕಾರ್ಡ್‌ಗಳನ್ನು ನೀಡಲಿ. ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುವ ಅಪ್ಪಟ ಬಿಜೆಪಿ ಬೆಂಬಲಿಗರು ಮಾತ್ರ ಹೆಚ್ಚಿನ ಮೊತ್ತ ಪಾವತಿಸಲಿ. ಆದರೆ, ಜನಸಾಮಾನ್ಯರಿಗೆ ಮಾತ್ರ ಹಳೆಯ ದರದಲ್ಲೇ ಸಿಲಿಂಡರ್ ವಿತರಿಸಲಿ ಎಂದು ಆಗ್ರಹಿಸಿದರು. ಈ ಬೆಲೆ ಏರಿಕೆ ನಿರ್ಧಾರದಿಂದಾಗಿ ಬೀದಿ ಬದಿಯ ಸಣ್ಣ ವ್ಯಾಪಾರಿಗಳು ಮತ್ತು ಹೋಟೆಲ್ ಉದ್ಯಮಿಗಳು ಬೀದಿಗೆ ಬೀಳುವಂತಾಗಿದೆ. ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯು ಹೋಟೆಲ್‌ಗಳಲ್ಲಿ ಕಾಫಿ, ಟೀ, ತಿಂಡಿ, ಊಟ ಎಲ್ಲವುಗಳ ಬೆಲೆ ಏರಿಕೆಗೂ ಕಾರಣವಾಗಲಿದ್ದು, ಸಾರ್ವಜನಿಕರ ಮೇಲೆ ನೇರ ಪರಿಣಾಮ ಬೀರಲಿದೆ. ಆರ್ಥಿಕ ಕುಸಿತದಿಂದ ದೇಶದ ಜನತೆ ಈಗಾಗಲೇ ಕಂಗಾಲಾಗಿದ್ದು, ಈ ದರ ಏರಿಕೆ ಗಾಯದ ಮೇಲೆ ಬರೆ ಎಳೆದಂತಿದೆ ಎಂದು ಕಿಡಿಕಾರಿದರು.