ಸಿದ್ದಾಪುರ: ತ್ರಿಕಾಲ ಬಲಿ ಉತ್ಸವ ನಡೆಯುವ ಶ್ರೀಕ್ಷೇತ್ರ ಇಟಗಿಯು ಜಿಲ್ಲೆಯ ಹೆಮ್ಮೆಯ ಕ್ಷೇತ್ರವಾಗಿದೆ. ಇಲ್ಲಿನ ಇತಿಹಾಸ, ಧಾರ್ಮಿಕ ಆಚರಣೆಗಳು ಬಹಳ ಮಹತ್ವದ್ದಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ತಾಲೂಕಿನ ಬಿಳಗಿ ಸೀಮೆಯ ಶ್ರೀಕ್ಷೇತ್ರ ಇಟಗಿಯಲ್ಲಿ ನಡೆಯುತ್ತಿರುವ ದಿವ್ಯಾಷ್ಟಬಂಧ ಮಹೋತ್ಸವದಲ್ಲಿ ಪಾಲ್ಗೊಂಡು ರಾಮೇಶ್ವರ ಮತ್ತು ಅಮ್ಮನವರ ದರ್ಶನ ಮಾಡಿ, ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ದೇವಸ್ಥಾನದ ಪಾತ್ರ ಎನ್ನುವ ಶಿಲಾಫಲಕ ಅನಾವರಣಗೊಳಿಸಿ ಮಾತನಾಡಿದ ಅವರು, ಸಿದ್ದಾಪುರ ತಾಲೂಕು ಸ್ವಾತಂತ್ರ‍್ಯ ಹೋರಾಟದಲ್ಲಿ ಬಹಳ ವಿಶೇಷ ಸ್ಥಾನವನ್ನು ಪಡೆದಿದೆ. ಸ್ವಾತಂತ್ರ‍್ಯ ಹೋರಾಟದಲ್ಲಿ ಈ ತರಹದ ದೇವಸ್ಥಾನಗಳಿಂದ ದೊಡ್ಡ ಮಟ್ಟದ ಸಹಾಯ ದೊರಕಿದೆ. ಅದರಲ್ಲೂ ಇಟಗಿ ಕ್ಷೇತ್ರದಂತಹ ಸ್ಥಳಗಳು ಪ್ರತಿ ಹಂತದಲ್ಲೂ ಒಂದಲ್ಲ ಒಂದು ರೀತಿಯ ಸಹಾಯ-ಸಹಕಾರವನ್ನು ಒದಗಿಸಿದೆ. ಹಾಗಾಗಿ ಇವತ್ತು ಮಾಡಿದ ಅನಾವರಣ ಕಾರ್ಯಕ್ರಮ ಬಹಳ ಸ್ಮರಣೀಯವಾದಂತಹದು ಎಂದರು.ರಾಮಚಂದ್ರಪುರಮಠದ ಹಿಂದಿನ ಗುರುಗಳಿಂದ ನಡೆದಿದ್ದ ಅಷ್ಟಬಂಧ ಮಹೋತ್ಸವವು ೫೯ ವರ್ಷದ ನಂತರ ನಡೆದಿರುವುದು ಇಡೀ ಸೀಮೆಗೆ ವಿಶೇಷವಾದದ್ದು. ಸನಾತನ ಹಿಂದೂ ಧರ್ಮದ ಸಂಸ್ಕೃತಿಯನ್ನು ಉಳಿಸಲು ಇವೆಲ್ಲವೂ ಬಹಳ ಮುಖ್ಯ. ಇಟಗಿಯ ಈ ಕ್ಷೇತ್ರದಲ್ಲಿ ನಡೆಯುವ ತ್ರಿಕಾಲ ಬಲಿ ಉತ್ಸವವು ನೋಡಲು ಸಿಗುವುದು ವಿರಳಾತಿವಿರಳ ಮತ್ತು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಇಂದಿನ ತಲೆಮಾರಿನವರೆಲ್ಲ ಸೇರಿಕೊಂಡು ಇಷ್ಟು ದೊಡ್ಡ ಕಾರ್ಯಕ್ರಮದ ಸಂಕಲ್ಪ ಮಾಡಿ ನಡೆಸುತ್ತಿರುವುದು ಮಹತ್ವದ ಸಂಗತಿ. ಸ್ವರಾಜ್ಯದ ಏಳಿಗೆಯಲ್ಲಿ ಇಟಗಿಯಂತಹ ಕ್ಷೇತ್ರಗಳು ಕೇಂದ್ರ ಬಿಂದು ಆಗಲಿದೆ ಎಂದರು.
ಅಷ್ಟಬಂಧ ಮಹೋತ್ಸವದ ಅಧ್ಯಕ್ಷ ಡಾ.ಶಶಿಭೂಷಣ ಹೆಗಡೆ ಸ್ವಾಗತಕೋರಿದರು. ಈ ಸಂದರ್ಭದಲ್ಲಿ ಇಟಗಿಯ ಮೋಕ್ತೇಸರ ಮಂಡಳಿಯ ಅಧ್ಯಕ್ಷ ಚಂದ್ರಶೇಖರ ಹೆಗಡೆ ಹಿರಿಯ ವಕೀಲ ಜೆ.ಪಿ.ಎನ್ ಹೆಗಡೆ ಹರಗಿ,ನಾರಾಯಣಮೂರ್ತಿ ಹೆಗಡೆ ಹರಗಿ,ಜಿ.ಬಿ.ಹೆಗಡೆ,ತಿಮ್ಮಪ್ಪ ಎಂ.ಕೆ. ಮತ್ತಿತರರು ಭಾಗಿಯಾಗಿದ್ದರು.
ಸಿದ್ದಾಪುರ ತಾಲೂಕಿನ ಇಟಗಿಯ ರಾಮೇಶ್ವರ ದೇವಾಲಯದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಶಿಲಾಫಲಕ ಅನಾವರಣಗೊಳಿಸಿದರು.