ಡಾ.ಸ್ಮಿತಾ ಸುರೇಬಾನಕರ್‌ಗೆ ಇತಿಹಾಸ ಸಾಂಸ್ಕೃತಿಕ ಶ್ರೀ ಪ್ರಶಸ್ತಿ

KannadaprabhaNewsNetwork |  
Published : Nov 06, 2026, 03:00 AM IST
ಸುರೇಬಾನ್ಕರ್‌ | Kannada Prabha

ಸಾರಾಂಶ

ಇತಿಹಾಸ ಸಂಶೋಧನೆ, ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆಯಲ್ಲಿ ಮಹತ್ವದ ಕೊಡುಗೆ ನೀಡಿರುವ ಬೆಳಗಾವಿಯ ಹಿರಿಯ ಸಂಶೋಧಕಿ ಹಾಗೂ ಆರ್.ಪಿ.ಡಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಸ್ಮಿತಾ ಸುರೇಬಾನಕರ್‌ ಅವರಿಗೆ ಕರ್ನಾಟಕ ಇತಿಹಾಸ ಅಕಾಡೆಮಿಯ ಪ್ರತಿಷ್ಠಿತ ಇತಿಹಾಸ ಸಾಂಸ್ಕೃತಿಕ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಇತಿಹಾಸ ಸಂಶೋಧನೆ, ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆಯಲ್ಲಿ ಮಹತ್ವದ ಕೊಡುಗೆ ನೀಡಿರುವ ಬೆಳಗಾವಿಯ ಹಿರಿಯ ಸಂಶೋಧಕಿ ಹಾಗೂ ಆರ್.ಪಿ.ಡಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಸ್ಮಿತಾ ಸುರೇಬಾನಕರ್‌ ಅವರಿಗೆ ಕರ್ನಾಟಕ ಇತಿಹಾಸ ಅಕಾಡೆಮಿಯ ಪ್ರತಿಷ್ಠಿತ ಇತಿಹಾಸ ಸಾಂಸ್ಕೃತಿಕ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಭಾಲ್ಕಿ ತಾಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲ ಅನುಭವ ಮಂಟಪದಲ್ಲಿ ಈಚೆಗೆ ನಡೆದ ಕರ್ನಾಟಕ ಇತಿಹಾಸ ಅಕಾಡೆಮಿಯ 40ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಪುರಾಲೇಖ ತಜ್ಞ ಜೆ.ಎಂ.ನಾಗಯ್ಯ ಹಾಗೂ ಇತಿಹಾಸ ಸಂಶೋಧಕಿ ಡಾ.ಸ್ಮಿತಾ ಸುರೇಬಾನಕರ್‌ ಅವರಿಗೆ ತಲಾ ₹1 ಲಕ್ಷ ನಗದು ಬಹುಮಾನ ಒಳಗೊಂಡ ಇತಿಹಾಸ ಸಾಂಸ್ಕೃತಿಕ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇತಿಹಾಸ ಸಂಶೋಧನೆ, ಪರಂಪರೆಯ ಸಂರಕ್ಷಣೆ ಹಾಗೂ ಸಾರ್ವಜನಿಕರಲ್ಲಿ ಐತಿಹಾಸಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ಕರ್ನಾಟಕ ಇತಿಹಾಸ ಅಕಾಡೆಮಿಯು ಕಳೆದ 3 ವರ್ಷಗಳಿಂದ ಈ ಪ್ರಶಸ್ತಿಯನ್ನು ನೀಡುತ್ತಿದೆ. ಈ ಬಾರಿ ಇತಿಹಾಸ, ಸಂಸ್ಕೃತಿ, ಪರಂಪರೆ ಮತ್ತು ವಾಸ್ತುಶಿಲ್ಪ ಕ್ಷೇತ್ರಗಳಲ್ಲಿ ನಮ್ಮ ಬೆಳಗಾವಿ ನಗರದ ನಿವಾಸಿ ಡಾ.ಸ್ಮಿತಾ ಅವರು ನಡೆಸಿರುವ ಅಮೂಲ್ಯ ಸಂಶೋಧನಾ ಕಾರ್ಯವನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.ಬೆಳಗಾವಿಯ ಇತಿಹಾಸ, ಸಂಸ್ಕೃತಿ ಮತ್ತು ವಾಸ್ತುಶಿಲ್ಪ ಪರಂಪರೆಯನ್ನು ಸಂಶೋಧನೆಯ ಮೂಲಕ ನಾಡಿನಾದ್ಯಂತ ಪರಿಚಯಿಸುತ್ತಿರುವ ಡಾ.ಸ್ಮಿತಾ ಸುರೇಬಾನಕರ್‌ ಅವರ ಸಾಧನೆಗೆ ಸಂದಿರುವ ಈ ಗೌರವ ಜಿಲ್ಲೆಯ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ವಲಯದಲ್ಲಿ ಸಂತಸ ಮೂಡಿಸಿದೆ. ಡಾ.ಸ್ಮಿತಾ ಅವರ Splendours of Belagavi ಕೃತಿಯು ಬೆಳಗಾವಿಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ವೈಭವವನ್ನು ಪರಿಚಯಿಸುವ ಮಹತ್ವದ ಪುಸ್ತಕವಾಗಿದೆ. ಅಲ್ಲದೆ, ಬೆಳಗಾವಿ ವಾಸ್ತುಶಿಲ್ಪ ನಿಧಿ ಕೃತಿಯಲ್ಲಿ ಜಿಲ್ಲೆಯ ಶಿಲ್ಪಕಲೆ ಹಾಗೂ ವಾಸ್ತುಶಿಲ್ಪ ಪರಂಪರೆಯ ಕುರಿತು ವಿಸ್ತೃತ ಅಧ್ಯಯನವನ್ನು ದಾಖಲಿಸಿದ್ದಾರೆ. ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅವರ 25ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಪ್ರಕಟಗೊಂಡಿವೆ.ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷ ಡಾ.ದೇವರಕೊಂಡ ರೆಡ್ಡಿ, ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ರವೀಂದ್ರನಾಥ್, ವಿಶ್ವವಿದ್ಯಾಲಯದ ಕುಲಪತಿ ಡಾ.ಪರಮಶಿವಮೂರ್ತಿ ಹಾಗೂ ಕರ್ನಾಟಕದ ಅರಣ್ಯ ಸಚಿವ ಈಶ್ವರ ಖಂಡ್ರೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದುಗಳು ಜಾಗೃತಿವಾದರೆ ಅದೇ ದೊಡ್ಡ ಶಕ್ತಿ
ರಾಮಮಂದಿರ ಪೇಜಾವರ ಶ್ರೀಗಳ ಕನಸಾಗಿತ್ತು