ಕನ್ನಡಪ್ರಭವಾರ್ತೆ ಸಿರಿಗೆರೆಲಿಂಗತ್ವ ಅಲ್ಪಸಂಖ್ಯಾತರು ಭಿಕ್ಷಾಟನೆ ತೊರೆದು ಸ್ವಾಭಿಮಾನ ಹಾಗೂ ಸ್ವಾವಲಂಬಿ ಜೀವನ ನಡೆಸುವ ನಿಟ್ಟಿನಲ್ಲಿ ವಿವಿಧ ಉದ್ಯಮಗಳಲ್ಲಿ ತೊಡಗಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪದ್ಮಾವತಿ ಸಲಹೆ ನೀಡಿದರು. ಚಿತ್ರದುರ್ಗ ತಾಲೂಕಿನ ಕೊಳಹಾಳ್ ಭರಮಸಾಗರದ ಮಡಿಲು ಸ್ವಾವಲಂಬಿ ಟ್ರಸ್ಟ್‌ನ ಮಂಗಳಮುಖಿಯರು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಪ್ರಾಯೋಜಕತ್ವದಲ್ಲಿ ರು.21.23 ಲಕ್ಷ ವೆಚ್ಚದಲ್ಲಿ ಸ್ಥಾಪಿಸಿರುವ ಕುರಿ ಸಾಕಾಣಿಕೆ ಘಟಕವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿ, ಮಹಿಳಾ ಅಭಿವೃದ್ಧಿ ನಿಗಮವು ಸಮಾಜದ ಕಟ್ಟ ಕಡೆಯ ಮಹಿಳೆ ಹಾಗೂ ದಮನಿತ ಮಹಿಳೆಯರ ಪರವಾಗಿದೆ. ಸಮಾಜದ ದುರ್ಬಲ ಹಾಗೂ ಶೋಷಿತ ಮತ್ತು ಅಸಹಾಯಕ ಮಹಿಳೆಯರನ್ನು ಆರ್ಥಿಕವಾಗಿ ಸಾಮಾಜಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದರು. ಭರಮಸಾಗರ ಸಮೀಪದ ಕೊಳಹಾಳ್‍ನಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಸ್ಥಾಪಿಸಲು ಉದ್ದೇಶಿಸಿದ ಕೋಳಿ ಮತ್ತು ಕುರಿ-ಮೇಕೆ ಸಾಕಾಣಿಕೆ ಘಟಕವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ, ನಿಗಮದ ನಿರ್ದೇಶಕ ಮಂಡಳಿಯಲ್ಲಿ ಅನುಮೋದನೆಯ ನಂತರ ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಡಿ ರು.21.23 ಲಕ್ಷಗಳನ್ನು (ಶೇ.50ರಷ್ಟು ಸಾಲ ಮತ್ತು ಶೇ.50 ರಷ್ಟು ಸಹಾಯಧನ) ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು. ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಪ್ರಾಯೋಜಕತ್ವದಲ್ಲಿ ಮಡಿಲು ಸ್ವಾವಲಂಭಿ ಟ್ರಸ್ಟ್ ಕುರಿ ಘಟಕವನ್ನು ಸ್ಥಾಪಿಸಲಾಗಿದ್ದು ಇಡೀ ರಾಜ್ಯಕ್ಕೆ ಮಾದರಿಯಾಗಿರುತ್ತಾರೆ. ಇವರನ್ನು ಪ್ರೇರಣೆಯಾಗಿ ತೆಗೆದುಕೊಂಡು ದುರ್ಬಲ ವರ್ಗ ಹಾಗೂ ಸಮಾಜದಿಂದ ಶೋಷಣೆಗೆ ಒಳಗಾದವರು ಮುಖ್ಯವಾಹಿನಿಗೆ ಬರಬೇಕು ಎಂದು ಕೋರಿದರು. ಯಾವುದೇ ರಾಜಕೀಯ ಪ್ರಭಾವ ಇಲ್ಲದೇ, ಮಡಿಲು ಸ್ವಾವಲಂಬಿ ಟ್ರಸ್ಟ್‌ನ ಅರುಂಧತಿ ಅವರ ಶ್ರಮ ಹಾಗೂ ಗುರಿಯನ್ನು ಗುರುತಿಸಿ, ನಿಗಮವು ಸಾಲ-ಸೌಲಭ್ಯ ನೀಡಿದೆ. ಹಾಗಾಗಿ ನೀವುಗಳು ಇತರರಿಗೂ ದಾರಿದೀಪವಾಗಬೇಕು ಎಂದು ಸಲಹೆ ನೀಡಿದರು.
ಮಡಿಲು ಸ್ವಾವಲಂಬಿ ಟ್ರಸ್ಟ್‌ನ ಅರುಂಧತಿ ಮಾತನಾಡಿ, ಮಂಗಳಮುಖಿಯರು ಕೇವಲ ಭಿಕ್ಷಾಟನೆ, ಲೈಂಗಿಕತೆಗೆ ಸೀಮಿತವಾಗಿದ್ದಾರೆ ಎಂಬ ಪರಿಕಲ್ಪನೆ ದೂರವಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಲಿಂಗತ್ವ ಅಲ್ಪಸಂಖ್ಯಾತರಿಗೆ ಹೆಚ್ಚಿನ ಸಾಲ ಸೌಲಭ್ಯ, ಸಹಾಯಧನ ನೀಡುವ ಮೂಲಕ ಮುಖ್ಯವಾಹಿನಿಗೆ ಬರಲು ಶ್ರಮಿಸಬೇಕು ಎಂದರು.ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಪುಷ್ಪಲತಾ, ತಹಸೀಲ್ದಾರ್ ಡಾ.ನಾಗವೇಣಿ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕಕಿ ಇಂದಿರಾ, ಅಕ್ಕಮಹಾದೇವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪವಿತ್ರ, ಜಿಲ್ಲಾ ನಿರೂಪಣಾಧಿಕಾರಿ ವಿಜಯ್ ಕುಮಾರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಎನ್.ಸುಧಾ, ವೀಣಾ ಸೇರಿದಂತೆ ಮಡಿಲು ಸ್ವಾವಲಂಬಿ ಟ್ರಸ್ಟ್ ಪದಾಧಿಕಾರಿಗಳು ಇದ್ದರು.