ಕನ್ನಡಪ್ರಭವಾರ್ತೆ ಚಿತ್ರದುರ್ಗ
ನೀಟ್ ಪರೀಕ್ಷೆ ಅಕ್ರಮದಲ್ಲಿ ಭಾಗಿಯಾದ ಎಲ್ಲರಿಗೂ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಪರೀಕ್ಷೆಗಳಲ್ಲಿ ಗಂಭೀರ ಲೋಪಗಳಾಗಿವೆ. ವೈದ್ಯಕೀಯ ಕೋರ್ಸ್‍ಗಳಿಗೆ ಪ್ರವೇಶಾತಿ ಪಡೆಯಲು ಈ ಬಾರಿ ಕ್ರಮವಾಗಿ ಸುಮಾರು 9 ಲಕ್ಷ ಹಾಗೂ 24 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ರಾಷ್ಟ್ರೀಯ ಮಟ್ಟದ ಮಹತ್ವ ಹಾಗೂ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಹೊಂದಿರುವ ಪರೀಕ್ಷೆಗಳ ಅಕ್ರಮಗಳಿಂದ ವಿದ್ಯಾರ್ಥಿ ಸಮುದಾಯದಲ್ಲಿ ಭವಿಷ್ಯದ ಬಗ್ಗೆ ಆತಂಕ ನಿರ್ಮಾಣವಾಗಿದೆ. ಪರೀಕ್ಷೆಗಳು ನ್ಯಾಯ ಸಮ್ಮತವಾವಾಗಿ ನಡೆದಿಲ್ಲವೆಂದು ಸರ್ಕಾರ ಒಪ್ಪಿಕೊಂಡು ಸಿಬಿಐ ತನಿಖೆಗೆ ವಹಿಸಿದ್ದರೂ ಇದುವರೆಗೂ ಈ ಗಂಭೀರ ಲೋಪಗಳಿಗೆ ಯಾರನ್ನು ಹೊಣೆಗಾರರನ್ನಾಗಿ ಮಾಡಲಾಗಿಲ್ಲ. ಹಾಗೂ ತಪ್ಪಿತಸ್ಥರನ್ನು ಪತ್ತೆ ಹಚ್ಚಿಲ್ಲ. ಆಧುನಿಕ ತಂತ್ರಜ್ಞಾನ ಹೊಂದಿರುವ ಈ ಸಂದರ್ಭದಲ್ಲಿಯೂ ಪರೀಕ್ಷಾ ವ್ಯವಸ್ಥೆಗಳಲ್ಲಿ ಲೋಪದೋಷ ಆಗಿರುವುದರಿಂದ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಕಾರ್ಯಕ್ಷಮತೆಯ ಮೇಲೆ ಸಂಶಯಗಳು ವ್ಯಕ್ತವಾಗುತ್ತಿವೆ.ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದ ಪರೀಕ್ಷೆಗಳನ್ನು ಎದುರಿಸಲು ಸಾಕಷ್ಟು ಶ್ರದ್ಧೆಯೊಂದಿಗೆ ಸಮಯ ಹಾಗೂ ಹಣ ವ್ಯಯಿಸಿದ್ದಾರೆ. ಪರೀಕ್ಷೆಗಳಲ್ಲಿನ ಅಕ್ರಮಗಳಿಂದ ವರ್ಷಾನುಗಟ್ಟಲೆ ತಯಾರಿ ನಡೆಸಿದ ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ ಹಾಗೂ ಪಿ ಎಚ್ ಡಿ ಪ್ರವೇಶಾತಿ ಬಯಸಿದ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ. ವಿದ್ಯಾರ್ಥಿಗಳ ಈ ತ್ರಿಶಂಕು ಸ್ಥಿತಿ ಹಾಗೂ ಆತಂಕಗಳನ್ನು ನಿವಾರಿಸಿ ಸೂಕ್ತವಾದ ನ್ಯಾಯವನ್ನು ದೊರಕಿಸಿಕೊಡಬೇಕೆಂದು ಜಿಲ್ಲಾಧಿಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ.
ಎಬಿವಿಪಿ ಜಿಲ್ಲಾ ಸಂಚಾಲಕ ಸಿದ್ದೇಶ್, ನಗರ ಕಾರ್ಯದರ್ಶಿ ಗೋಪಿ, ರಾಜ್ಯ ಕಾರ್ಯಕಾರಿಣಿ ಕನಕರಾಜ್, ಸಾಮಾಜಿಕ ಜಾಲತಾಣ ಚಿತ್ರಸ್ವಾಮಿ, ಮಹಿಳಾ ವಿದ್ಯಾರ್ಥಿನಿ ಪ್ರಮುಖ್ ಚೈತ್ರಾ, ಕಾರ್ಯಕರ್ತರಾದ ಜಗದೀಶ್, ಸಂಜು, ಕಾರ್ತಿಕ್ ಇದ್ದರು.