ಯುವಕರು ವ್ಯಸನಕ್ಕೆ ಆಕರ್ಷಿತರಾಗುತ್ತಿರುವುದು ದುರಂತ

KannadaprabhaNewsNetwork | Published : Jan 7, 2024 1:30 AM

ಸಾರಾಂಶ

ಪಾಶ್ಚಿಮಾತ್ಯ ಸಂಸ್ಕೃತಿಯ ಸೋಗಿನಲ್ಲಿ ಯುವ ಸಮೂಹ ಮಾದಕ ವಸ್ತುಗಳಿಗೆ ಬಲಿಯಾಗುತ್ತಿರುವುದು ದುರಂತದ ಸಂಗತಿ.

ಹಿರಿಯೂರು: ಪಾಶ್ಚಿಮಾತ್ಯ ಸಂಸ್ಕೃತಿಯ ಸೋಗಿನಲ್ಲಿ ಯುವ ಸಮೂಹ ಮಾದಕ ವಸ್ತುಗಳಿಗೆ ಬಲಿಯಾಗುತ್ತಿರುವುದು ದುರಂತದ ಸಂಗತಿ ಎಂದು ಡಿವೈಎಸ್ಪಿ ಚೈತ್ರಾ ಕಳವಳ ವ್ಯಕ್ತಪಡಿಸಿದರು.

ನಗರದ ನೆಹರೂ ಮೈದಾನದಲ್ಲಿ ಹಿರಿಯೂರು ಉಪವಿಭಾಗ, ಗ್ರಾಮಾಂತರ ಪೊಲೀಸ್ ಠಾಣೆ, ನಗರ ಠಾಣೆ, ಐಮಂಗಲ, ಅಬ್ಬಿನಹೊಳೆ ಪೊಲೀಸ್ ಠಾಣೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ಸೇವನೆ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಾದಕ ವಸ್ತುಗಳ ಸೇವನೆಯಿಂದ ಧನ, ಮಾನ ಹಾಗೂ ಪ್ರಾಣ ಹಾನಿಯಾಗುತ್ತದೆ ಎಂಬುದನ್ನು ಮರೆತು ಕ್ಷಣಿಕ ಸುಖಕ್ಕಾಗಿ ಹಲವರು ದಾರಿ ತಪ್ಪುತ್ತಿರುವುದು ನೋವಿನ ಸಂಗತಿಯಾಗಿದೆ. ದೇಶದ ಭವಿಷ್ಯ ರೂಪಿಸುವ ಹೊಣೆಗಾರಿಕೆಯನ್ನು ನಿಭಾಯಿಸಬೇಕಾದ ಯುವಜನತೆ ಹಾಗೂ ವಿದ್ಯಾರ್ಥಿಗಳು ಸಹ ವ್ಯಸನಕ್ಕೆ ದಾಸರಾಗಿ ಮೈಮರೆಯುತ್ತಿರುವುದು ಆತಂಕದ ಸಂಗತಿಯಾಗಿದೆ.

ಮಾದಕ ವಸ್ತುಗಳನ್ನು ಬಳಸುವುದರಿಂದ ವ್ಯಕ್ತಿಯ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವು ಹದಗೆಡುತ್ತದೆ. ವಿದ್ಯಾರ್ಥಿಗಳು ಮಾದಕ ವ್ಯಸನದಿಂದ ದೂರ ಇದ್ದು ಆಧ್ಯಾತ್ಮಿಕ, ಯೋಗ ವಿದ್ಯಾಭ್ಯಾಸ, ಕುಟುಂಬದ ಪರಿಪಾಲನೆ, ಉತ್ತಮ ಪ್ರಜೆ, ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ರೂಪಗೊಳ್ಳಬೇಕು. ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಮಾದಕ ವಸ್ತುಗಳ ದುರ್ಬಳಕೆಗೆ ಬಲಿಯಾಗುತ್ತಿರುವುದು ಗಮನಕ್ಕೆ ಬಂದಿದೆ. ರಾಜ್ಯದಲ್ಲಿಯೇ ನಶೆಮುಕ್ತ ಹಿರಿಯೂರನ್ನಾಗಿಸಲು ಪಣ ತೊಟ್ಟಿದ್ದು, ಈ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು. ಮಾದಕ ವಸ್ತುಗಳ ಬಳಕೆಯಲ್ಲಿ ತೊಡಗಿಕೊಳ್ಳುತ್ತಾರೋ ಅಂತಹವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ನಗರ ಠಾಣೆ ಪಿಎಸ್ಐ ರಾಘವೇಂದ್ರ ಕಂಡಿಕೆ ಮಾತನಾಡಿ, ಮಾದಕ ವಸ್ತುಗಳ ಸೇವನೆಯ ವ್ಯಕ್ತಿಗಳಿಂದ ಸಮಾಜದಲ್ಲಿ ಅಜಾಗರೂಕತೆ, ಅನೈತಿಕತೆ ಹಾಗೂ ಅಪರಾಧ ಚಟುವಟಿಕೆಗಳು ಹೆಚ್ಚಾಗುವ ಕಾರಣ ಯಾವುದೇ ಒತ್ತಡಕ್ಕೆ ಮಣಿಯದೆ ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು. ಜೊತೆಗೆ ಅಪರಾಧಿ ಎಷ್ಟೇ ಬುದ್ಧಿವಂತಿಕೆ ತೋರಿಸಿದರು ಇಲಾಖೆಯ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

ಈ ಸಂದರ್ಭದಲ್ಲಿ ಸಿಪಿಐಗಳಾದ ಕಾಳಿಕೃಷ್ಣ, ಕಾಂತರಾಜ್, ಪಿಎಸ್ಐಗಳಾದ ಮಂಜುನಾಥ್, ಅಬ್ಬಿನಹೊಳೆ ಪಿಎಸ್ಐ ಬಾಹುಬಲಿ, ಮಹೇಶ್ ಗೌಡ, ಅನುಸೂಯಮ್ಮ ಮುಂತಾದವರು ಹಾಜರಿದ್ದರು.

Share this article