ರಾಂ ಅಜೆಕಾರು
ಕನ್ನಡಪ್ರಭ ವಾರ್ತೆ ಕಾರ್ಕಳಕಂಬಳವು ತುಳುನಾಡಿನ ಹಿರಿಮೆ, ಸಂಸ್ಕೃತಿಯ ಭಾಗವಾಗಿದೆ. ಈ ಕಂಬಳಕ್ಕೆ ಈ ಋತುವಿನಲ್ಲಿ ಹೊಸತೊಂದು ಪ್ರಯೋಗ ಮಾಡಲು ಕಂಬಳ ಸಮಿತಿ ಮುಂದಾಗಿದೆ.
ಶನಿವಾರ ಕಂಬಳ ಸಮಿತಿ ವತಿಯಿಂದ ಕಾರ್ಕಳ ತಾಲೂಕಿನ ಮಿಯ್ಯಾರಿನಲ್ಲಿ ನಡೆದ ಪ್ರಾಯೋಗಿಕ ಕಂಬಳದಲ್ಲಿ ಓಟದ ಸ್ಪಷ್ಟತೆ ಹಾಗೂ ನಿರ್ದಿಷ್ಟ ಮಾಹಿತಿಗಾಗಿ ಎಫ್‌ಎಟಿ (ಫುಲ್ಲಿ ಅಟೊಮೇಟಿಕ್ ಟೈಮಿಂಗ್ಸ್) ಎಂಬ ಆ್ಯಪ್ ಪರಿಚಯಿಸಿದೆ. ಈ ಎಫ್ಎಟಿ ಸಿಸ್ಟಂ ಆ್ಯಪ್ ಆಧಾರಿತ ವ್ಯವಸ್ಥೆಯಾಗಿದ್ದು, ನಿಗದಿತ ಅವಧಿಯಲ್ಲಿ ಕೋಣಗಳ ಕ್ರಮಿಸುವಿಕೆ ಹಾಗೂ ವೇಗವನ್ನು ಎಲ್ಲವೂ ಸ್ಪಷ್ಟ ಚಿತ್ರಣ ಮೂಲಕ ಕ್ರೋಢೀಕರಿಸಲಿದೆ. ಎಲ್ಲವು ಸ್ವಯಂಚಾಲಿತ ವ್ಯವಸ್ಥೆಯಾಗಿದ್ದು, ಸದ್ಯ ಪ್ರಾಯೋಗಿಕ ಹಂತದಲ್ಲಿದೆ. ಶನಿವಾರ ಕಾರ್ಕಳ ಮಿಯ್ಯಾರು ಕಂಬಳದಲ್ಲಿ ಈ ಎಫ್ಎಟಿ ಸಿಸ್ಟಂ ಅನ್ನು ಕಂಬಳದಲ್ಲಿ ಅಳವಡಿಸಿ ಮಾಹಿತಿಯನ್ನು ಕಲೆಹಾಕಲಾಯಿತು.ಕಾರ್ಯಚರಣೆ ಹೇಗೆ?
ಕಾರ್ಕಳ ಮೂಲದ ಐಎನ್‌ಬಿಐ ಸಾಫ್ಟ್‌ವೇರ್ ಕಂಪನಿಯು ಈ ಎಫ್ಎಟಿ ಸಿಸ್ಟಂ ಆ್ಯಪನ್ನು ಅಭಿವೃದ್ಧಿಪಡಿಸಿದೆ. ಕಂಬಳದ ಎರಡು ಕರೆಗಳ ಮಂಜೊಟ್ಟಿಯ ಕೆಳಗೆ ಹಾಗೂ ಕಂಬಳದ ಓಟ ಅರಂಭವಾಗುವ ಭಾಗದಲ್ಲಿ ಒಟ್ಟು ನಾಲ್ಕು ಆ್ಯಪ್ ಆಧಾರಿತ ಕ್ಯಾಮರಾ ಉಪಕರಣಗಳನ್ನು ಅಳವಡಿಸಲಾಗುತ್ತದೆ.ಇದರ ಮೂಲಕ ಓಟದ ಆರಂಭಿಕ ಹಂತದಲ್ಲಿ ಹಾಗೂ ಕೊನೆಯ ಹಂತದವರೆಗೂ ಕಂಬಳ ಕೋಣಗಳ ಓಟದ ವೇಗವನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. ಕಂಬಳದ ಕೋಣಗಳ ವೇಗ ಸೆಕೆಂಡುಗಳಲ್ಲಿ ನಿಗದಿಯಾಗುವ ಕಾರಣ, ವೇಗವಾಗಿ ಕ್ರಮಿಸಿ ಮಂಜೊಟ್ಟಿ ಮುಟ್ಟಿದ ಕೋಣಗಳ ಗೆಲುವಿನ ಮಾಹಿತಿಯನ್ನು ಸೈರನ್ ಮೂಲಕ ತಿಳಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಕ್ಯಾಮರಾಗಳ ಮೂಲಕ ಎಲ್ಲ ಮಾಹಿತಿಯನ್ನು ಕ್ರೋಢೀಕರಿಸಿ ಚಿತ್ರಗಳನ್ನು ಸೆರೆಹಿಡಿದು ನಿಖರತೆ ತೋರಿಸಲು ಈ ಆ್ಯಪ್ ಅನುಕೂಲವಾಗಲಿದೆ.
ಪ್ರಸ್ತುತ ಇರುವ ಕಂಬಳದ ಲೇಸರ್ ಬೀಮ್ ವ್ಯವಸ್ಥೆಯನ್ನು ಸಾಯಿ (ಸ್ಪೋರ್ಟ್ಸ್ ಅಕಾಡೆಮಿ ಆಫ್ ಇಂಡಿಯಾ) ಮಾನ್ಯತೆ ಪಡೆದಿದೆ.ಲೇಸರ್ ಬೀಮ್‌ಗಿಂತ ಎಫ್‌ಎಟಿ ಸಿಸ್ಟಮ್ ಭಿನ್ನ
ಲೇಸರ್ ಬೀಮ್ ವ್ಯವಸ್ಥೆಯಲ್ಲಿ ರಾತ್ರಿ ವೇಳೆ ಅಳವಡಿಸುವ ಉಪಕರಣಗಳಿಗೆ ಕೀಟಗಳ ಹಾವಳಿ ಹೆಚ್ಚಿರುವ ಕಾರಣ ಫಲಿತಾಂಶ ನೀಡಲು ಸಮಯ ತೆಗೆದುಕೊಳ್ಳುತಿತ್ತು. ಆದರೆ ಎಫ್ಎಟಿ ಸಿಸ್ಟಂನಲ್ಲಿ ಈ ರೀತಿಯ ಯಾವುದೇ ತೊಂದರೆಗಳಿಲ್ಲ. ಎಲ್ಲವು ಚಿತ್ರಗಳ ಮೂಲಕ ದಾಖಲಾಗುತ್ತವೆ.ಕಳೆದ ಐದು ವರ್ಷಗಳಿಂದ ಕಂಬಳವು ಲೇಸರ್ ಫಿನಿಷಿಂಗ್ ಸಿಸ್ಟಂ ಮೂಲಕ ಕಾರ್ಯಾಚರಿಸುತಿತ್ತು. ಈ ಬಾರಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ತಂತ್ರಜ್ಞಾನ ಆಧುನೀಕರಿಸಿ ಎಫ್ಎಟಿ ಸಿಸ್ಟಂ ಅಳವಡಿಸಲಾಗುತ್ತಿದೆ.