ಮಲೆನಾಡಲ್ಲಿ ಈಗ ಕಾಡು ಹಣ್ಣುಗಳ ಕಾಲ

KannadaprabhaNewsNetwork |  
Published : May 29, 2026, 01:45 AM IST
27ಎಚ್ಎಸ್ಎನ್4ಎ :  | Kannada Prabha

ಸಾರಾಂಶ

ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಮಲೆನಾಡು ಕಾಡುಗಳು ಹಣ್ಣು ನೀಡುತ್ತಿದ್ದು, ಈ ಬಾರಿ ಎಲ್ಲ ಬಗೆಯ ಹಣ್ಣುಗಳ ಇಳುವರಿ ಅಧಿಕವಾಗಿದೆ. ಕಾಡಿಗೆ ತೆರಳುವ ಜನರು ಹಣ್ಣುಗಳನ್ನು ತುಂಬಿಕೊಂಡು ಮನೆ ಸೇರುತ್ತಿದ್ದಾರೆ. ಮುಳ್ಳುಗಿಡದಲ್ಲಿ ಬಿಳಿಬಣ್ಣದಲ್ಲಿರುವ ಚೊಟ್ಟೆ ಹಣ್ಣು ಸಾಮಾನ್ಯವಾಗಿ ಮಲೆನಾಡು ಹಾಗೂ ಅರೆಮಲೆನಾಡಿನಲ್ಲಿ ಮಾತ್ರ ಕಾಣಸಿಗುತ್ತಿದ್ದು, ಏಪ್ರಿಲ್ ಹಾಗೂ ಮೇ ಮಧ್ಯಭಾಗದವರಗೆ ಫಸಲು ನೀಡುವ ಈ ಹಣ್ಣನ್ನು ಕೊಯ್ದ ಹತ್ತು ನಿಮಿಷದೊಳಗೆ ತಿನ್ನಬೇಕು, ತಪ್ಪಿದಲ್ಲಿ ಕಪ್ಪುವರ್ಣಕ್ಕೆ ತಿರುಗುವ ಹಣ್ಣನ್ನು ತಿನ್ನುವುದು ಕಷ್ಟಕರ ಇದರಿಂದಾಗಿಯೇ ಮಾರುಕಟ್ಟೆಯಲ್ಲಿ ಈ ಹಣ್ಣಿನ ಲಭ್ಯತೆ ಇಲ್ಲ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಮುಂಗಾರು ಮೊದಲ ಮಳೆಯೊಂದಿಗೆ ಹೂವಾಗುವ ಹಲವು ಬಗೆಯ ಹಣ್ಣುಗಳು ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಹಣ್ಣು ನೀಡುತ್ತಿದ್ದು, ಈ ಬಾರಿ ಎಲ್ಲ ಬಗೆಯ ಹಣ್ಣುಗಳ ಇಳುವರಿ ಅಧಿಕವಾಗಿದೆ. ಕಾಡಿಗೆ ತೆರಳುವ ಜನರು ಹಣ್ಣುಗಳನ್ನು ತುಂಬಿಕೊಂಡು ಮನೆ ಸೇರುತ್ತಿದ್ದಾರೆ. ಹಲಸು: ಪಶ್ಚಿಮಘಟ್ಟದ ಕಾಡು ಹಾಗೂ ಕಾಫಿತೋಟಗಳಲ್ಲಿ ಈ ಬಾರಿ ಅಧಿಕ ಎನ್ನುವಷ್ಟು ಹಲಸಿನ ಫಸಲಿದ್ದು, ಬಕ್ಕೆ ಹಾಗೂ ಬೀಳುವ ಹಣ್ಣುಗಳು ಎಲ್ಲೆಲ್ಲೂ ಕಾಣಸಿಗುತ್ತಿದ್ದು ತಿನ್ನುವವರಿಲ್ಲದೆ ಕರಗಿ ಸುರಿಯುತ್ತಿವೆ.ಮಾವು:ತಾಲೂಕಿನಲ್ಲಿ ಮಾವಿನ ಫಸಲು ಈ ಬಾರಿ ಅಧಿಕವಾಗಿದ್ದು ಅದರಲೂ ಈ ಬಾರಿ ಹಿಂದೆ ಎಂದು ಫಸಲು ನೀಡದ ಮರಗಳು ಸಹ ಈ ಬಾರಿ ಫಸಲು ಮೂಡುವ ಮೂಲಕ ವಿಸ್ಮಯ ಮೂಡಿಸುತ್ತಿವೆ. ಅದರಲ್ಲೂ ವಿವಿಧ ಗಾತ್ರ ಹಾಗೂ ರುಚಿಯ ಕಾಡು ಮಾವಿನ ಹಣ್ಣುಗಳು ಈ ಬಾರಿ ಹೆಚ್ಚಿದ್ದು ಕಾಡುಮಾವಿನ ಹಣ್ಣಿನ ಗೊಜ್ಜು ಮಾಡದ ಮನೆಯೆ ಇಲ್ಲ ಎಂದರು ತಪ್ಪಾಗದು.ನೇರಲೆ:ನೇರಳೆ ಫಸಲು ಸಹ ಈ ಬಾರಿ ಅಧಿಕವಾಗಿದ್ದು ‘ಸಕ್ಕರೆ ರೋಗ ನಿಯಂತ್ರಣಕ್ಕೆ ನೇರಳೆ ಹಣ್ಣು ಮದ್ದು’ ಎಂಬ ಮಾತಿನಿಂದ ಜನರು ಮುಂಜಾನೆ ಎದ್ದು ನೇರಲೆ ಮರದಡಿಗೆ ಓಡುತ್ತಿದ್ದಾರೆ. ಇದರಲ್ಲಿ ಜಮ್ಮ ನೇರಳೆ(ದೊಡ್ಡನೇರಳೆ) ಹಾಗೂ ಸಣ್ಣ ನೇರಳೆ ಹಣ್ಣು ಎಂಬ ಎರಡು ವಿಧಗಳಿದ್ದು ಸಣ್ಣನೇರಳೆ ರುಚಿಗೆ ಎತ್ತಿದ ಕೈ.ಪನ್ನೇರಳೆ:ಅಧಿಕ ನೀರಿನಾಂಶ ಇರುವ ಅತ್ಯಂತ ರುಚಿಕರವಾದ ಪನ್ನೇರಳೆ ಹಣ್ಣು ಈಗ ತಾಲೂಕಿನ ಕಾಡುಮೇಡುಗಳಲೆಲ್ಲ ಫಸಲು ಬಿಟ್ಟಿದ್ದು, ತಾಲೂಕಿಗೆ ಆಗಮಿಸುವ ಪ್ರವಾಸಿಗರು ಪನ್ನೇರಳೆ ಸವಿದು ಸಂತೃಪ್ತಿ ಪಡುತ್ತಿದ್ದಾರೆ.ಸೀಬೆಹಣ್ಣು:ತಾಲೂಕಿನ ಕಾಡುಗಳಲ್ಲಿ ಈಗ ಸೀಬೆ ಹಣ್ಣುಗಳೆ ಗೋಚರಿಸುತ್ತಿವೆ. ಈ ಬಾರಿ ಸೀಬೆಹಣ್ಣುಗಳು ಭಾರಿ ಪ್ರಮಾಣದಲ್ಲಿ ಫಸಲು ನೀಡಿದ್ದು, ಕೆಂಪು ಹಾಗೂ ಬಿಳಿ ಬಣ್ಣದ ಸೀಬೆ ತಿನ್ನುವವರಿಲ್ಲದೆ ಹಣ್ಣುಗಳು ನೆಲಸೇರುತ್ತಿವೆ. ಸಕ್ಕರೆರೋಗ ನಿಯಂತ್ರಣಕ್ಕೆ ಸೀಬೆಮದ್ದು ಎಂಬ ಕಾರಣವಿದ್ದರೂ ಸೀಬೆ ಹಣ್ಣು ಮುಟ್ಟುವವರಿಲ್ಲದಾಗಿದೆ. ಪಕ್ಷಿಗಳ ಅಚ್ಚುಮೆಚ್ಚಿನ ಹಣ್ಣುಗಳು ಈಗ ಪಕ್ಷಿಗಳಿಗೂ ಬೇಸರ ತರಿಸಿವೆ. ಚೊಟ್ಟೆಹಣ್ಣು:ಮುಳ್ಳುಗಿಡದಲ್ಲಿ ಬಿಳಿಬಣ್ಣದಲ್ಲಿರುವ ಚೊಟ್ಟೆ ಹಣ್ಣು ಸಾಮಾನ್ಯವಾಗಿ ಮಲೆನಾಡು ಹಾಗೂ ಅರೆಮಲೆನಾಡಿನಲ್ಲಿ ಮಾತ್ರ ಕಾಣಸಿಗುತ್ತಿದ್ದು, ಏಪ್ರಿಲ್ ಹಾಗೂ ಮೇ ಮದ್ಯಭಾಗದವರಗೆ ಫಸಲು ನೀಡುವ ಈ ಹಣ್ಣನ್ನು ಕೊಯ್ದ ಹತ್ತು ನಿಮಿಷದೊಳಗೆ ತಿನ್ನಬೇಕು, ತಪ್ಪಿದಲ್ಲಿ ಕಪ್ಪುವರ್ಣಕ್ಕೆ ತಿರುಗುವ ಹಣ್ಣನ್ನು ತಿನ್ನುವುದು ಕಷ್ಟಕರ ಇದರಿಂದಾಗಿಯೇ ಮಾರುಕಟ್ಟೆಯಲ್ಲಿ ಈ ಹಣ್ಣಿನ ಲಭ್ಯತೆ ಇಲ್ಲ. ಹೆಸನಣ್ಣು:ತಾಲೂಕಿನ ಎಲ್ಲೆಡೆ ದೊರೆಯುವ ಹೆಸನಣ್ಣು ಅತ್ಯಂತ ರುಚಿಕರ ಹಣ್ಣು. ನೋಡಲು ಸಣ್ಣ ಗಾತ್ರದ ಹಲಸಿನಂತೆ ಕಾಣುವ ಈ ಹಣ್ಣು ಕಾಯಿಯಾಗಿರುವಾಗ ಹಸಿರಾಗಿದ್ದು ನಂತರ ಹಣ್ಣಾಗುವ ವೇಳೆಗೆ ಕೆಂಪು ವರ್ಣಕ್ಕೆ ತಿರುಗುವ ಈ ಹಣ್ಣನ್ನು ಮಲೆನಾಡಿಗರ ಹೊರತುಪಡಿಸಿ ಅನ್ಯರು ಸವಿದಿರುವುದು ಅಪರೂಪ.ಗಿರಿಕೆಹಣ್ಣು;ಅಲ್ಪ ಹುಳಿಯಾಗಿದ್ದರೂ ಆರೋಗ್ಯಕ್ಕೆ ಅತ್ಯುತ್ತಮ ಎನ್ನಲಾಗುತ್ತದೆ. ಹಸಿರು ಬಣ್ಣದಿಂದ ಕೂಡಿರುವ ಕಾಯಿ ಹಣ್ಣಾಗುವ ವೇಳೆಗೆ ಹಳದಿಬಣ್ಣಕ್ಕೆ ತಿರುಗುತ್ತಿದ್ದು ಇದು ಸಹ ಇಂದಿನ ಜನಾಂಗಕ್ಕೆ ತಿಳಿಯದಂತಹ ಹಣ್ಣು ಆದರೂ ಈ ಹಣ್ಣಿನ ಮರ ಮಲೆನಾಡಿನ ಎಲ್ಲೆಡೆ ಕಂಡು ಬರುತ್ತಿದೆ.ಹಾಲೆಹಣ್ಣು:ಮೆಣದಿಂದ ಕೂಡಿರುವ ಹಾಲೆಹಣ್ಣಿಗೆ ಹುಳುಗಳ ಕಾಟ ಅತಿಹೆಚ್ಚು. ಮೆಣದಿಂದ ಕೂಡಿದ ಈ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಜಂತುಹುಳುಗಳು ಸಮಸ್ಯೆ ನಿವಾರಣೆಯಾಗಲಿದೆ ಎಂಬ ಪ್ರತೀತಿಯಿಂದ ಹಿಂದಿನ ಜನರು ಹಾಲೆ ಹಣ್ಣನ್ನು ಹುಡುಕಿಕೊಂಡು ಹೋಗುತ್ತಿದ್ದರು. ಆದರೆ, ಇಂದು ಈ ಹಣ್ಣಿನ ಮಹತ್ವದ ಅರಿವಿಲ್ಲದ ಜನಾಂಗಕ್ಕೆ ಹಣ್ಣು ಸವಿಯುವ ಭಾಗ್ಯವೂ ಇಲ್ಲದಾಗಿದೆ.ಈಚಲಹಣ್ಣು:ಪಶ್ಚಿಮಘಟ್ಟದ ಹಲವೆಡೆ ಈಚಲು ಈಗ ಹಣ್ಣಾಗಿದ್ದು ಪ್ರವಾಸಿಗರು ಹಣ್ಣನ್ನು ಹುಡುಕಿಕೊಂಡು ಹೋಗಿ ಸವಿಯುತ್ತಿದ್ದಾರೆ.ಉರುಬಲಹಣ್ಣು: ಬಳ್ಳಿಯಲ್ಲಿ ಬಿಡುವ ಉರುಬಲ ಹಣ್ಣು ನೋಡಲು ಕಡಲೆಕಾಯಿ ತರಹವಿದ್ದು ಸವಿಯಲು ಅಲ್ಪ ಹುಳಿಯಾಗಿದ್ದರೂ ಆರೋಗ್ಯಕ್ಕೆ ಉತ್ತಮ ಎಂಬ ಮಾತಿದೆ. ಬಹುತೇಕ ಕಾಡು ಪ್ರದೇಶಗಳಲ್ಲಿ ಮಾತ್ರ ದೊರೆಯುವ ಈ ಹಣ್ಣು ಈಗ ಅಪರೂಪವಾಗಿದೆ.ಗರ್ಜಿಹಣ್ಣು:ಅತ್ಯಂತ ಸಹಿಯಾಗಿರುವ ಉಂಡೆ ಗಾತ್ರದ ಗರ್ಜಿ ಹಣ್ಣು ಅರೆಅರಣ್ಯ ಪ್ರದೇಶದಲ್ಲಿ ಮಾತ್ರ ದೊರೆಯುತ್ತಿದ್ದು, ಅರೆ ಅರಣ್ಯ ಪ್ರದೇಶಗಳು ಈಗ ನಾಶವಾಗುತ್ತಿರುವುದರಿಂದ ಈ ಹಣ್ಣಿನ ಬಳ್ಳಿಗಳು ನಾಶದ ಅಂಚಿಗೆ ತಲುಪಿವೆ.

ಹೆಚ್ಚು ಔಷಧಿಗಳ ಗುಣ ಹೊಂದಿರುವ ಚಕೋತ ಕಾಫಿ ತೋಟಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತಿದ್ದು ಚಕೋತದ ಔಷಧಿಗುಣ ತಿಳಿದಿರುವ ಜನರು ಚಕೋತಕ್ಕೆ ಉಪ್ಪು ಖಾರ ಹಾಕಿ ಸವಿಯುವುದು ಮಲೆನಾಡಿನಲ್ಲಿ ಮಾಮೂಲಿ. ಅಬ್ಬಲ, ಬಕ್ಕಲ, ಜೆಪ್ಲ: ಇವು ಸಹ ಕಾಡು ಹಾಗೂ ಕಾಫಿ ತೋಟಗಳಲ್ಲಿ ಕಂಡುಬರುವ ಹಣ್ಣಿನ ಮರಗಳು. ಮುಂಗಾರು ವೇಳೆ ಈ ಮರಗಳಲ್ಲೂ ಹಣ್ಣು ಮೂಡುತ್ತಿದ್ದು, ತಿನ್ನುವವರಿಗೆ ಅತ್ಯಂತ ರುಚಿಕರ ಹಣ್ಣು. ಹೀಗೆ ಸಾಕಷ್ಟು ಹಣ್ಣುಗಳು ಕಾಡುಪ್ರದೇಶದಲ್ಲಿ ಫಸಲು ಮೂಡಿದ್ದು ಕಾಡುಹಣ್ಣು ತಿಂದವರಿಗಷ್ಟೆ ಗೊತ್ತು ಇವುಗಳ ರುಚಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶಕ್ಕಾಗಿ ಜವಾಹರ್‌ ಲಾಲ್‌ ನೆಹರು ಕೊಡುಗೆ ಸ್ಮರಣೀಯ: ಡಾ.ಅಂಶುಮಂತ್‌
ತಾಳ್ಮೆ, ಸಮಯಪ್ರಜ್ಞೆ ಇಲ್ಲದಿದ್ದರೆ ಯಾವ ಸಾಧನೆಯೂ ಅಸಾಧ್ಯ: ಬಿ.ಸಿ.ಶಿವಕುಮಾರ್‌