* ಅನಾವೃಷ್ಟಿ ಕಾಟ; ಸಚಿವ ಸ್ಥಾನಕ್ಕಾಗಿ ಪರದಾಟ । ಅವರು ಅಧಿಕಾರಕ್ಕಾಗಿ ದೆಹಲಿ, ಬೆಂಗಳೂರು ಸುತ್ತಾಟ । ಇವರಿಗೆ ನೀರಿಗಾಗಿ ಅಲೆದಾಟ

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ಕೈಕೊಟ್ಟ ಮುಂಗಾರು, ನೀರಿಲ್ಲದೇ ರೈತರು, ಜನಸಾಮಾನ್ಯರು ಕಂಗಾಲು, ಜನಪ್ರತಿನಿಧಿಗಳಿಗೇರಿದ ಅಧಿಕಾರ ಪಡೆಯುವ ಅಮಲು, ಒಂದು ಕಡೆ ಅನಾವೃಷ್ಟಿಯ ಕಾಟ, ಮತ್ತೊಂದು ಕಡೆ ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವುದಕ್ಕಾಗಿ ಪರಿಪಾಠವು ಸಾಗಿದೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೇತೃತ್ವದ ರಾಜ್ಯದ ಕಾಂಗ್ರೆಸ್‌ ಸರ್ಕಾರದಲ್ಲಿ ಎರಡನೇ ಹಂತದ ಸಚಿವ ಸಂಪುಟದ ವಿಸ್ತರಣೆ ಪ್ರಕ್ರಿಯೇಯು ಕಳೆದ ಹಲವು ವಾರಗಳಿಂದ ಮುನ್ನಲೆಗೆ ಬಂದಿರುವುದರಿಂದ ಜಿಲ್ಲೆಯ ಬಹುತೇಕ ಎಲ್ಲ ಜನಪ್ರತಿನಿಧಿಗಳು, ಮುಂಚೂಣಿಯ ಮುಖಂಡರು, ಬೆಂಬಲಿಗರು ಬೆಂಗಳೂರು, ದೆಹಲಿ ಎಂದು ಅಲೆದಾಟ ನಡೆಸುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ಮುಂಗಾರು ಮಳೆಯ ತೀವ್ರ ಅಭಾವದಿಂದ ಸೃಷ್ಠಿಯಾಗುತ್ತಿರುವ ಬರದ ಪರಿಸ್ಥಿತಿ ನಿರ್ವಹಣೆಯನ್ನು ಗಾಳಿಗೆ ತೂರಿ ಅಧಿಕಾರ ಗಿಟ್ಟಿಸಿಕೊಳ್ಳಲು ಜಿಲ್ಲೆ ಜನರನ್ನು ಮರೆಯುತ್ತಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.


ಜಿಲ್ಲೆಯ ಬರ ಪರಿಸ್ಥಿತಿಯ ಮೇಲೆ ನಿಗಾ ವಹಿಸುವುದಕ್ಕಾಗಿಯೇ ಮೇಲುಸ್ತುವಾರಿಯನ್ನು ನಿಭಾಯಿಸಲು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್‌ ಅವರನ್ನು ಸಿಎಂ ನಿಯುಕ್ತಿಗೊಳಿಸಿದ್ದಾರೆ ಆದರೆ ಅವರು ಬಂದೆ ಪುಟ್ಟಾ ಹೋದೆ ಪುಟ್ಟಾ ಎನ್ನುವಂತೆ ಕಳೆದ ಜು.3 ರಂದು ಬೇಕಾಬಿಟ್ಟಿ ಜಿಲ್ಲೆಗೆ ಭೇಟಿ ನೀಡಿ ಕೇವಲ ಒಂದೇ ತಾಸಿನಲ್ಲಿ ಬರ ಸನ್ನಿವೇಶದ ಸಭೆ ನಡೆಸಿ ಹೋದದ್ದು ಬಿಟ್ಟರೇ. ಉಳಿದಂತೆ ಅನಾವೃಷ್ಠಿಗೆ ಸಂಬಂಧಿಸಿದಂತಹ ಯಾವುದೇ ಕ್ರಮಗಳನ್ನು ಸರ್ಕಾರವಾಗಲಿ, ಜಿಲ್ಲಾಡಳಿತವಾಗಲಿ, ಜಿಲ್ಲೆ ಶಾಸಕರಾಗಲಿ, ಎಂಎಲ್ಸಿಗಳಾಗಲಿ ಎಲ್ಲಿಯೂ ಆಸಕ್ತಿ ತೋರದೇ ಇರುವುದು ಎದ್ದು ಕಾಣುತ್ತಿದೆ.

ಜಿಲ್ಲೆ ಜನ ನಗರ,ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ನೀರಿಗಾಗಿ ಜನರು ಅಲೆದಾಟ ನಡೆಸುತ್ತಿದ್ದರೇ. ಜಿಲ್ಲೆ ಜನನಾಯಕರು ಸಚಿವ ಸ್ಥಾನಕ್ಕಾಗಿ ದೆಹಲಿ,ಬೆಂಗಳೂರು ಸುತ್ತಾಟ ಮಾಡುತ್ತಿರುವುದನ್ನು ಜನಮಸಾಮಾನ್ಯರು ಗಮನಿಸುತ್ತಿದ್ದಾರೆ. ತೀವ್ರ ಮಳೆಯ ಅಭಾವದಿಂದಾಗಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯ ಕಾರ್ಯವು ನಿಗದಿತ ಗುರಿಗಿಂತ ಶೇ.50 ಕ್ಕಿಂತ ಕಡಿಮೆಯಾಗಿದೆ. ಜೂನ್‌ ಪೂರ್ತಿ ಕೈಕೊಳ್ಳ ಮಳೆ ಒಂದುವಾರ ಮುಖ ತೋರಿಸಿ ಹೋಗಿರುವುದು ಕೊಂಚ ಸಮಧಾನ ನೀಡಿದರೂ ಸಹ ರೈತರ ಬೆಳೆಗಳಿಗೆ ಆ ಮಳೆಯಿಂದ ಯಾವುದೇ ಪ್ರಯೋಜನವಾಗದ ಕಾರಣಕ್ಕೆ, ಈಗಾಗಲೇ ಎರಡ್ಮೂರು ಸಲ ಬೆಳೆಗಳನ್ನು ಬಿತ್ತಿದ ರೈತರು ನಷ್ಟಕ್ಕೀಡಾಗಿದ್ದಾರೆ. ಮತ್ತೊಂದು ಕಡೆ ಹಲವಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಜನ್ಮತಾಳುತ್ತಿವೆ.

ಗ್ರಾಮೀಣ ಭಾಗದಲ್ಲಿ ಕೆಲಸವಿಲ್ಲದೇ ಜನ ಗುಳೆ ಹೋಗುತ್ತಿದ್ದಾರೆ. ಇಷ್ಟೇಲ್ಲಾ ಸಮಸ್ಯೆಗಳಿಂದ ಜಿಲ್ಲೆ ತುಂಬಿ ತುಳುಕುತ್ತಿರುವ ತರುಣದಲ್ಲಿ ಜಿಲ್ಲೆಯಲ್ಲಿಯೇ ಇದ್ದುಕೊಂಡು ಜನ ಹಾಗೂ ರೈತರ ಸಂಕಷ್ಟಗಳಿಗೆ ಸ್ಪಂದಿಸುವುದರ ಜೊತೆಗೆ ಸರ್ಕಾರದಿಂದ ಆಗಬೇಕಾದ ಕಾರ್ಯಗಳನ್ನು ಮುಂದೆ ನಿಂತುಕೊಂಡು ಮಾಡುವ ಜವಾಬ್ದಾರಿಯನ್ನು ಹೊಂದಿವ ಜನನಾಯಕರು ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವುದಕ್ಕಾಗಿ ಅವರಿವರ ಬೆನ್ನುಬಿದ್ದಿರುವುದು ಇವರಿಗೆ ತಮ್ಮನ್ನು ಗೆಲ್ಲಿಸಿದ ಜನರಿಗಿಂತ, ಜಿಲ್ಲೆಗಿಂತ ಅಧಿಕಾರವೇ ಹೆಚ್ಚು ಎನ್ನುವ ಸಂದೇಶವನ್ನು ಪರೋಕ್ಷವಾಗಿ ರವಾನಿಸುವಂತೆ ಮಾಡಿದೆ.

ಆಡಳಿತ ನಡೆಸುವ ಸರ್ಕಾರವು ಜಿಲ್ಲೆಗೆ ಸಚಿವಸ್ಥಾನವನ್ನು ದಯಪಾಲಿಸುತ್ತದೆಯೋ? ಇಲ್ಲವೋ? ಜಿಲ್ಲೆ ಜನಪ್ರತಿನಿಧಿಗಳು ಅಧಿಕಾರ ಪಡೆಯುವುದಕ್ಕಾಗಿ ಎಲ್ಲಿಲ್ಲದ ಕಸರತ್ತನ್ನು ನಡೆಸುತ್ತಿದ್ದಾರೆ. ಜಿಲ್ಲೆ ಬಣ ರಾಜಕೀಯದ ಸಂಘರ್ಷದಡಿ ಯಾರಿಗೆ ಸಚಿವ ಸ್ಥಾನ ಕೊಡಬೇಕು ಎನ್ನುವ ಗೊಂದಲಕ್ಕೆ ಹೈಕಮಾಂಡ್ ಸಿಲುಕಿದ್ದು, ಆದರೂ ಸಹ ಪಟ್ಟು ಬಿಡದ ಜನನಾಯಕರು ಜಿಲ್ಲೆಯ ಬರ ಸಂಕಷ್ಟಗಳನ್ನು ಬದಿಗಿಟ್ಟು ಸಚಿವ ಸ್ಥಾನಕ್ಕಾಗಿ ಬಲಪ್ರದರ್ಶನ ತೋರುತ್ತಿರುವುದು ವಿಮರ್ಶೆಗೆ ಎಡೆಮಾಡಿಕೊಟ್ಟಿದೆ.

---

25ಕೆಪಿಆರ್‌ಸಿಆರ್‌ 01: ಬರ ಪರಿಸ್ಥಿತಿಯನ್ನು ಬಿಂಬಿಸುವ ಬರಡು ಭೂಮಿಯಲ್ಲಿ ಜನಪ್ರತಿನಿಧಿಗಳು ಸಭೆ ನಡೆಸುತ್ತಿರುವ ಎಐ ಚಿತ್ರ.