ಮಂಗಳೂರು: ಮಂಗಳೂರಿನ ಸಂತ ಆಗ್ನೆಸ್ ಕಾಲೇಜಿನ ಪರೀಕ್ಷೆ ಮುಂದೂಡುವ ವಿಚಾರವನ್ನು ಮುಂದಿಟ್ಟುಕೊಂಡು ವಿದ್ಯಾರ್ಥಿಗಳನ್ನು ಪ್ರಚೋದಿಸಿ, ಶಿಕ್ಷಣ ಸಂಸ್ಥೆಯ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ನಡೆದಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಆರೋಪಿಸಿದ್ದಾರೆ.ಮಂಗಳೂರಿನ ತಮ್ಮ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ವೇದವ್ಯಾಸ ಕಾಮತ್ ಅವರು ಪೊಲೀಸ್ ಠಾಣೆಯಲ್ಲಿ ಕುಳಿತು ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಪ್ರಚೋದನೆ ನೀಡಿರುವುದು ಸರಿಯಲ್ಲ. ಶಿಕ್ಷಣ ಸಂಸ್ಥೆಗಳನ್ನು ಧರ್ಮದ ಆಧಾರದಲ್ಲಿ ಗುರಿಯಾಗಿಸುವುದು ಖಂಡನೀಯ ಎಂದರು.
ಸೋಮವಾರ ಎಬಿವಿಪಿ ವಿದ್ಯಾರ್ಥಿಗಳು ಕಾಲೇಜಿಗೆ ಪ್ರವೇಶಿಸಲು ಯತ್ನಿಸಿದಾಗ ಪೊಲೀಸರು ಅವರನ್ನು ತಡೆದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ವಶಕ್ಕೆ ಪಡೆದಿದ್ದರು. ಈ ಸಂದರ್ಭದಲ್ಲಿ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಹಾಗೂ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಅವರು ಕದ್ರಿ ಪೊಲೀಸ್ ಠಾಣೆಗೆ ತೆರಳಿ ಮಧ್ಯಪ್ರವೇಶಿಸಿದ್ದರು ಎಂದರು.
ಭಾರತ್ ಮಾತಾಕಿ ಜೈ ಘೋಷಣೆ ಕೂಗಿದ ಕಾರಣಕ್ಕೆ ಪೊಲೀಸರೇ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವೂ ಸರಿಯಲ್ಲ ಎಂದು ಐವನ್ ಡಿ’ಸೋಜಾ ಹೇಳಿದರು.