ಕನ್ನಡಪ್ರಭ ವಾರ್ತೆ ಧಾರವಾಡ
ಮನಸೂರ ರೇವಣಸಿದ್ಧೇಶ್ವರ ಮಹಾಮಠ ಹಾಗೂ ವಿದ್ಯಾಪೀಠದ ಸಹಯೋಗದಲ್ಲಿ ಕನಕ ಜಯಂತಿ ಪ್ರಯುಕ್ತ ಕನಕ ಪಂಚಮಿ ಸಾಂಸ್ಕೃತಿಕ ಕಾರ್ಯಕ್ರಮ, ಕನಕ ಪ್ರಶಸ್ತಿ ಪ್ರದಾನವನ್ನು ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಲಾಗಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೇವಣಸಿದ್ಧೇಶ್ವರ ಮಠದ ಡಾ. ಬಸವರಾಜ ದೇವರು, ಜ. 23ರಿಂದ 27ರ ವರೆಗೆ ಐದು ದಿನಗಳ ಕಾರ್ಯಕ್ರಮಗಳು ನಡೆಯಲಿವೆ.
ಜ.23 ಮತ್ತು 24ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯವುದಾಗಿ ಹಾಗೂ ಜ. 25ರ ಬೆಳಗ್ಗೆ 10.30ಕ್ಕೆ ಹನುಮಗೌಡ ಪಾಟೀಲ ಅಧ್ಯಕ್ಷತೆಯಲ್ಲಿ ಕನಕದಾಸರ ಬದುಕು-ಬರಹ ವಿಚಾರ ಸಂಕಿರಣ, ಕನಕ ಕವಿಗೋಷ್ಠಿ ನಡೆಯಲಿದೆ.
ಪ್ರಾಧ್ಯಾಪಕರಾದ ಡಾ. ಕೆ.ಎಸ್. ಕಟಗಿ, ಡಾ. ವೈ.ಎಂ. ಯಾಕೊಳ್ಳಿ ಚಿಂತನ ನಡೆಸಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಕುರಬರ ನೌಕರ ಸಂಘದ ಅಧ್ಯಕ್ಷ ನಿಂಗಪ್ಪ ಸವಣೂರ, ಪ್ರಾಧ್ಯಾಪಕ ಡಾ. ನಿಂಗಪ್ಪ ಮುದೇನೂರ ಪಾಲ್ಗೊಳ್ಳಲಿದ್ದಾರೆ ಎಂದರು.
ವಕೀಲರಾದ ಪ್ರಕಾಶ ಉಡಕೇರಿ ಅಧ್ಯಕ್ಷತೆ, ರಾಜೇಶ್ವರಿ ಸಾಲಗಟ್ಟಿ, ಬಸವರಾಜ ಮಲಕಾರಿ, ರವಿ ಮಾಳಗೇರ, ಮಹೇಶ ಹುಲ್ಲೆನ್ನವರ ಸಮ್ಮುಖದಲ್ಲಿ ನಾಟಕ, ನೃತ್ಯ, ಸಂಗೀತ, ಯೋಗ ಹಾಗೂ ಜನಪದ ಕಾರ್ಯಕ್ರಮ ಜರುಗಲಿವೆ.
ತಮ್ಮ ಸಾನಿಧ್ಯದಲ್ಲಿ ಜ. 26ರ ಬೆಳಗ್ಗೆ 11ಕ್ಕೆ ವಿಶ್ವ ಸಂತ ಕನಕ ಪ್ರಶಸ್ತಿ ಪ್ರದಾನ ಸಮಾರಂಭ ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸಿ, ಪ್ರಶಸ್ತಿ ಸ್ವೀಕರಿಸುವರು. ಶಾಸಕ ಜಗದೀಶ ಶೆಟ್ಟರ್ ಪ್ರಶಸ್ತಿ ಪ್ರದಾನ ಮಾಡುವರು ಎಂದರು.
ವಿಪ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಪ್ರಹ್ಲಾದ್ ಜೋಶಿ, ಭೈರತಿ ಸುರೇಶ, ಸಂತೋಷ ಲಾಡ್, ಶಿವರಾಜ ತಂಗಡಗಿ, ಶಾಸಕರಾದ ಅರವಿಂದ ಬೆಲ್ಲದ, ಸಲೀಂ ಅಹ್ಮದ್, ದೊಡ್ಡನಗೌಡ ಪಾಟೀಲ ಭಾಗವಹಿಸುತ್ತಾರೆ.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಕನಕ ಪ್ರಶಸ್ತಿ ನೀಡಿ ಗೌರವಿಸಲಿದೆ. ಜ. 27ರ ಸಂಜೆ 5ಕ್ಕೆ ಕನಕ ಪಂಚಮಿ ಸಮಾರೋಪ ಜರುಗಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕೋರಿದರು.