ಹುಬ್ಬಳ್ಳಿ:
ಈ ಜಗ್ಗಲಗಿ ಹಬ್ಬದಲ್ಲಿ ಜಗ್ಗಲಿಗೆಗಳೊಂದಿಗೆ ಹಲಿಗೆ, ತಮಟೆ, ಜಾಂಜ್ ಮೇಳ, ಡೊಳ್ಳು, ಕರಡಿ ಮಜಲು. ಹೀಗೆ ಹತ್ತಾರು ನಾದಗಳಿಂದು ಹೊರಸೂಸುತ್ತಿದ್ದ ಸದ್ದಿಗೆ ಸೇರಿದ್ದ ಸಾವಿರಾರು ಸಂಖ್ಯೆಯ ಜನರು ಕುಣಿದು ಕುಪ್ಪಳಿಸಿದರು. ಮೆರವಣಿಗೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಲಗೆ ಬಾರಿಸುವ ಮೂಲಕ ಚಾಲನೆ ನೀಡಿದರು. ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಿಂದ 50ಕ್ಕೂ ಅಧಿಕ ಜಗ್ಗಲಗಿ ಮೇಳ, ಸಾವಿರಕ್ಕೂ ಅಧಿಕ ವಾದ್ಯಮೇಳ ಕಲಾವಿದರು, 400ಕ್ಕೂ ಅಧಿಕ ಜಗ್ಗಲಗಿಗಳು, 50ಕ್ಕೂ ಅಧಿಕ ವಿವಿಧ ವಾದ್ಯಮೇಳಗಳು ಪಾಲ್ಗೊಂಡಿದ್ದವು.
ಮಹಾರಾಷ್ಟ್ರ ಈಚಲಕರಂಜಿಯ ಜೀವಿಕಾ ಇವೆಂಟ್ಸ್‌ನ 50 ಜನರ ತಂಡ, ಹುಬ್ಬಳ್ಳಿ ನ್ಯೂ ಆಲ್ ಮ್ಯೂಸಿಕಲ್ ಸ್ಟಾಪ್ ತಾಷಾರಾಮ್ ಡೋಲ್ ಕಮ್ ಹಾಗೂ ಸುಪರ್ ಕಿಂಗ್ ನಾಸಿಕ ಡೋಳ ತಂಡದ 40 ಸದಸ್ಯರು, ಉಡುಪಿ ಕಾಡು ಬೆಟ್ಟ ಪ್ರದೇಶದಿಂದ ಹುಲಿ ಕುಣಿತ, ಹನುಮಾನ, ನಂದಿ, ನಾಗಾಸಾಧುಗಳೊಂದಿಗೆ, ವೇಷಧಾರಿಗಳಾದ ಪರಮೇಶ್ವರ ನರಸಿಂಹ ಸೇರಿದಂತೆ 1 ಸಾವಿರಕ್ಕೂ ಅಧಿಕ ಕಲಾವಿದರು ಪಾಲ್ಗೊಳ್ಳುವ ಮೂಲಕ ಜಗ್ಗಲಗಿ ಹಬ್ಬಕ್ಕೆ ಹೊಸ ಮೆರಗು ತಂದವು.ಅದ್ಧೂರಿ ಮೆರವಣಿಗೆ:
ವಿಶೇಷತೆ ಅಡಗಿವೆ:
ಜಗ್ಗಲಗಿ ಹಬ್ಬಕ್ಕೆ ಚಾಲನೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಭಾರತೀಯ ಸಂಪ್ರದಾಯದಲ್ಲಿ ಹೋಳಿ ಹಬ್ಬ ಮತ್ತು ಯುಗಾದಿ ಹಬ್ಬ ಸೇರಿದಂತೆ ಎಲ್ಲ ಹಬ್ಬಗಳಿಗೂ ತನ್ನದೇಯಾದ ವಿಶೇಷತೆ ಅಡಗಿದೆ. ಹಿಂದೂ ಕ್ಯಾಲೆಂಡರ್‌ನಲ್ಲಿ ಹೋಳಿ ಹಬ್ಬವು ವರ್ಷದ ಕೊನೆಯ ಹಬ್ಬವಾಗಿ ಆಚರಿಸಲಾಗುತ್ತದೆ. ಆಯಾ ಕಾಲಕ್ಕೆ ತಕ್ಕಂತೆ ಪೂರ್ವಜರು ಹಬ್ಬಗಳನ್ನು ಆಚರಣೆಗೆ ತಂದಿದ್ದು, ಅವುಗಳನ್ನು ಉಳಿಸಿ-ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬ ಹಿಂದೂಗಳ ಮೇಲಿದೆ. ಮರೆಯಾಗುತ್ತಿರುವ ಜಗ್ಗಲಗಿಯಂತಹ ಕಲೆಗಳನ್ನು ಶಾಸಕ ಮಹೇಶ ಟೆಂಗಿನಕಾಯಿ ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿರುವುದು ಅಭಿನಂದನಾರ್ಹ ಎಂದರು.ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಮಾತನಾಡಿ, ಹಿಂದೂ ಸಮಾಜವನ್ನು ಒಗ್ಗೂಡಿಸುವ ಜತೆಗೆ ಏಕತೆ ಸಂದೇಶದ ಕಡೆಗೆ ಕೊಂಡೊಯ್ಯುವಲ್ಲಿ ಹಬ್ಬಗಳು ಸಹಕಾರಿಯಾಗಿವೆ ಎಂದು ಹೇಳಿದರು.
ಶಾಸಕ, ಕಾರ್ಯಕ್ರಮದ ಆಯೋಜಕ ಮಹೇಶ ಟೆಂಗಿನಕಾಯಿ ಪ್ರಾಸ್ತಾವಿಕ ಮಾತನಾಡಿದರು. ಹಾವೇರಿ ಹುಕ್ಕೇರಿ ಮಠದ ಸದಾಶಿವ ಶ್ರೀ, ಮಣಕವಾಡದ ಅಭಿನವ ಮೃತ್ಯುಂಜಯ ಶ್ರೀ ಆಶೀರ್ವಚನ ನೀಡಿದರು. ನವಲಗುಂದ ಗವಿಮಠದ ಬಸವಲಿಂಗ ಶ್ರೀ, ರುದ್ರಾಕ್ಷಿ ಮಠದ ಬಸವಲಿಂಗ ಶ್ರೀ, ಮಲ್ಲಿಕಾರ್ಜುನ ಶ್ರೀ, ರಾಯನಾಳ ವಿರಕ್ತಮಠದ ಅಭಿನವ ರೇವಣಸಿದ್ದೇಶ್ವರ ಶ್ರೀ, ಮೇಯರ್ ಜ್ಯೋತಿ ಪಾಟೀಲ, ಉಪಮೇಯರ್ ಸಂತೋಷ ಚೌಹಾಣ, ಮಾಜಿ ಶಾಸಕ ಅಶೋಕ ಕಾಟವೆ, ಮುಖಂಡರಾದ ತಿಪ್ಪಣ್ಣ ಮಜ್ಜಗಿ, ಲಿಂಗರಾಜ ಪಾಟೀಲ ಸೇರಿದಂತೆ ಹಲವರಿದ್ದರು.