ದಶಕ ಕಳೆದರೂ ಉದ್ಘಾಟನೆಯಾಗದ ಜಗಜೀವನ್ ರಾಮ್ ಭವನ

KannadaprabhaNewsNetwork |  
Published : Apr 06, 2026, 01:45 AM IST
ಪೋಟೋ: 05ಎಸ್‌ಎಂಜಿಕೆಪಿ03 ಶಿವಮೊಗ್ಗದ ಕುವೆಂಪು ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಬಾಬು ಜಗ ಜೀವನ್ ರಾಮ್ ಸಮುದಾಯ ಭವನ. | Kannada Prabha

ಸಾರಾಂಶ

ಇಲ್ಲಿನ ಕುವೆಂಪು ನಗರದಲ್ಲಿ ದಶಕ ಕಳೆದರೂ 3 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡ ಬಾಬು ಜಗಜೀವನ್ ರಾಮ್ ಸಮುದಾಯ ಭವನ ಅಪೂರ್ಣವಾಗಿದ್ದು, ಇನ್ನೂ ಉದ್ಘಾಟನೆ ಭಾಗ್ಯ ಕಂಡಿಲ್ಲ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಇಲ್ಲಿನ ಕುವೆಂಪು ನಗರದಲ್ಲಿ ದಶಕ ಕಳೆದರೂ 3 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡ ಬಾಬು ಜಗಜೀವನ್ ರಾಮ್ ಸಮುದಾಯ ಭವನ ಅಪೂರ್ಣವಾಗಿದ್ದು, ಇನ್ನೂ ಉದ್ಘಾಟನೆ ಭಾಗ್ಯ ಕಂಡಿಲ್ಲ.

ಈ ಬಗ್ಗೆ ಎರಡು ತಿಂಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತಂದರೂ ಉದ್ಘಾಟನೆಗೆ ದಿನಾಂಕ ನಿಗದಿಯಾಗಿಲ್ಲ. ದಲಿತರ, ಹಿಂದುಳಿದ ವರ್ಗದ ಬಗ್ಗೆ ಸರ್ಕಾರ ಎಷ್ಟು ನಿರ್ಲಕ್ಷ್ಯ ಧೋರಣೆ ತೋರುತ್ತಿದೆ ಎನ್ನುವುದಕ್ಕೆ ಈ ಭವನ ಸಾಕ್ಷಿಯಾಗಿದೆ. ಈಗ ಭವನ ಗೆದ್ದಲು ಹಿಡಿಯುತ್ತಿದ್ದು, ಕಬ್ಬಿಣದ ಕಿಟಕಿಗಳು ತುಕ್ಕು ಹಿಡಿಯಲಾರಂಭಿಸಿದೆ. ಭವನದ ಸುತ್ತಲು ಕುಡುಕರ ಹಾವಳಿ ಜಾಸ್ತಿಯಾಗಿದ್ದು, ಎಲ್ಲಿ ನೋಡಿದರಲ್ಲಿ ಮದ್ಯದ ಬಾಟಲಿಗಳು ಬಿದ್ದಿವೆ. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಪ್ರಶ್ನಿಸಿದಾಗ, ಅವರು ಈ ಭವನದ ಗುತ್ತಿಗೆದಾರರು ಮೃತಪಟ್ಟಿದ್ದರಿಂದ 3 ವರ್ಷಗಳಿಂದ ಕಾಮಗಾರಿ ನಿಂತಿದೆ. ಈಗ ಮತ್ತೆ 30 ಲಕ್ಷ ರು. ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ.

ಬಾಬು ಜಗಜೀವನ್ ರಾಮ್ ಹೆಸರಿನಲ್ಲಿ ದಲಿತರ ಮಕ್ಕಳಿಗೆ ಮದುವೆ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಮೀಸಲಾಗಬೇಕಾದ ಈ ಭವನ ಅಪೂರ್ಣ ಕಾಮಗಾರಿಯಿಂದಾಗಿ ಇನ್ನೂ ಆ ವರ್ಗಕ್ಕೆ ಲಭ್ಯವಾಗದೇ ಇರುವುದು ದುರಂತವೇ ಸರಿ, ಒಂದು ತಿಂಗಳ ಹಿಂದೆ ಜಿಲ್ಲಾಧಿಕಾರಿಗಳು ತಮ್ಮ ಕಚೇರಿಯಲ್ಲಿ ವಿಶೇಷ ಸಭೆ ಕರೆದು ಈ ಭವನ ಪೂರ್ಣಗೊಳ್ಳಲು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದರು.

ಬಾಬು ಜಗಜೀವನ್ ರಾಮ್ ಜನ್ಮದಿನ ಹತ್ತಿರವಾದಾಗ ಪೂರ್ವಭಾವಿ ಸಭೆಯಲ್ಲಿ ಮಾತ್ರ ಈ ಕುರಿತು ಚರ್ಚೆಯಾಗುತ್ತದೆ. ಆದರೆ ಅನುಷ್ಠಾನ ಆಗುತ್ತಿಲ್ಲ. ಎರಡು ಭಾರಿ ಸುಣ್ಣ-ಬಣ್ಣ ಬಳಿದಿದ್ದು ಬಿಟ್ಟರೆ ಬೇರೆ ಏನೂ ಅಭಿವೃದ್ಧಿ ಕಾಣುತ್ತಿಲ್ಲ. ಭವನದ ಸುತ್ತಲೂ ಗಿಡಗಂಟೆಗಳು ಬೆಳೆದಿದೆ. ಬಾಗಿಲ ಚಿಲಕ ಮುರಿದು ಹೋಗಿದೆ.

ಎಸ್‌ಟಿಪಿ ಪ್ಲಾಂಟ್‌ನಲ್ಲಿ ಮುಚ್ಚಳವಿಲ್ಲದೆ ಕಸ ತುಂಬಿದ್ದು, ಎಣ್ಣೆ ಬಾಟಲಿಗಳು ಯಥೇಚ್ಚವಾಗಿ ಬಿದ್ದಿದೆ. ಆ ಪರಿಸರ ಪುಂಡು-ಪೋಕರಿಗಳ, ಮದ್ಯವ್ಯಸನಿಗಳ ಮತ್ತು ಅನೈತಿಕ ಚಟುವಟಿಕೆಗಳ ತಾಣವಾಗಿದ್ದು, ಬಹುಕೋಟಿ ರು. ವೆಚ್ಚದ ಈ ಭವನ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಸಮಾಜ ಕಲ್ಯಾಣ ಮತ್ತು ಪಿಡಬ್ಲ್ಯೂಡಿ ಅಧಿಕಾರಿಗಳ ಪ್ರಕಾರ ಈ ಭವನ ಸಂಪೂರ್ಣವಾಗಿ ಸುಂದರವಾಗಿ ಕಾಣಲು ಇನ್ನೂ ಒಂದು ಕೋಟಿಗೂ ಹೆಚ್ಚು ಅನುದಾನ ಬೇಕು. ಕಟ್ಟಡ ಕಟ್ಟಿದ ಗುತ್ತಿಗೆದಾರ ಮೃತಪಟ್ಟಿದ್ದು ಆತನಿಗೆ ಬಾಕಿ ಸಂದಾಯ ಮಾಡಿ ಇನ್ನೂ ಒಂದು ಕೋಟಿಗೂ ಹೆಚ್ಚಿನ ಅನುದಾನದ ಅವಶ್ಯಕತೆ ಇದೆ ಎಂದು ಅಧಿಕಾರಿಗಳ ಅಭಿಪ್ರಾಯ.

ಸಾರ್ವಜನಿಕರ ತೆರಿಗೆಯ ಹಣ ಹತ್ತಾರು ವರ್ಷಗಳಿಂದ ಈ ರೀತಿ ಪೋಲಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಕೂಡಲೇ ಸಂಬಂಧಪಟ್ಟವರು ಈ ಸಮಸ್ಯೆ ಬಗೆಹರಿಸಿ ದಲಿತರ ಆಶಯಗಳನ್ನು ಪೂರೈಸಲಿ. ಭವನ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಿ ಕಟ್ಟಡವನ್ನು ಉದ್ಘಾಟಿಸಬೇಕು ಎಂದು ದಲಿತ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಟ್ಟಸೋಗೆಯಲ್ಲಿ ಶಾಸಕ ಮಂಜು ಕ್ರಿಕೆಟ್‌ ಕಪ್‌
ಏಕಶಿಲಾ ಆಂಜನೇಯ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆ