ಜೈಬುನ್ನಿಸಾಗೆ ಉತ್ತಮ ಶಿಕ್ಷಕಿ ಪ್ರಶಸ್ತಿ ಗರಿ

KannadaprabhaNewsNetwork |  
Published : Sep 18, 2025, 01:10 AM IST
ಪೋಟೊ ಕ್ಯಾಪ್ಸನ್: ಇತ್ತೀಚೆಗೆ  ಮುಂಡರಗಿ ತಾಲೂಕಿನಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮುಂಡರಗಿ ತಾಲೂಕ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಜೈಬುನ್ನಿಸಾ ಉ ನಮಾಜಿ ಅವರಿಗೆ ನೀಡಿ ಗೌರವಿಸಲಾಯಿತು. ರೋಣ ಶಾಸಕ ಜಿ.ಎಸ್.ಪಾಟೀಲ, ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ ಸೇರಿದಂತೆ ಗಣ್ಯರು ಸನ್ಮಾನಿಸಿದರು.ಪೋಟೊ ಕ್ಯಾಪ್ಸನ್:ಜೈಬುನ್ನಿಸಾ ಉ ನಮಾಜಿ(ಹಿರೇಹಾಳ) ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಪ್ರಾಚಾರ್ಯರು ಮುಂಡರಗಿ.  | Kannada Prabha

ಸಾರಾಂಶ

ಇತ್ತೀಚೆಗೆ ಮುಂಡರಗಿ ತಾಲೂಕು ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ

ರಿಯಾಜಅಹ್ಮದ ಎಂ. ದೊಡ್ಡಮನಿ ಡಂಬಳ

ಕಳೆದ 24 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಹಿಂದಿ ಭಾಷಾ ವಿಷಯ ಬೋಧಿಸುತ್ತಾ ಅವರ ಉಜ್ವಲ ಭವಿಷ್ಯ ರೂಪಿಸಿ, ಅವರನ್ನು ಸಮಾಜದಲ್ಲಿ ಅತ್ಯುತ್ತಮ ನಾಗರಿಕರಾಗಿ ರೂಪಿಸುತ್ತ ಬಂದಿರುವ ಮುಂಡರಗಿಯ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ಪ್ರಾಚಾರ್ಯರಾಗಿರುವ ಜೈಬುನ್ನಿಸಾ ಉಮರಸಾಬ ನಮಾಜಿ (ಹಿರೇಹಾಳ) ಅವರಿಗೆ ಮುಂಡರಗಿ ತಾಲೂಕು ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಉಮರಸಾಬ-ರಜಿಯಾಬೇಗಂ ಅವರು ಜೈಬುನ್ನಿಸಾ ನಮಾಜಿ ಅವರ ತಂದೆ-ತಾಯಿಗಳು. ಎಸ್‌ಎಜೆಡಿ ಪ್ರಾಥಮಿಕ ಶಾಲೆ ಹಾಗೂ ಚಕ್ಕಲಿ ಪ್ರೌಢಶಾಲೆಯಲ್ಲಿ ಮೊದಲ ಶಿಕ್ಷಣ ಪಡೆದರು. ನರೇಗಲ್ಲದ ಪ್ರತಿಷ್ಠಿತ ಎಸ್.ಎ‌. ಕಾಲೇಜಿನಲ್ಲಿ ಬಿಎ‌ ಪದವಿ ಪಡೆದರು. ಹಿಂದಿ ಬಿಎಯಲ್ಲಿ ಉತ್ತಮ ಅಂಕದೊಂದಿಗೆ ಮದ್ರಾಸ್‌ ಸೆಂಟರ್‌ನಿಂದ ಬಂಗಾರದ ಪದಕ ಪಡೆದರು. ಹುಬ್ಬಳ್ಳಿಯಲ್ಲಿ ಹಿಂದಿ ವಿಷಯದಲ್ಲಿ ಬಿಇಡಿ, ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಹಿಂದಿಯಲ್ಲಿ ಎಂಎ ಸ್ನಾತಕೋತ್ತರ ಪದವಿ ಪಡೆದುಕೊಂಡರು.

ಡಂಬಳ ಗ್ರಾಮದ ಉರ್ದುಶಾಲೆಯ ಶಿಕ್ಷಕ ಜೀವನಸಾಬ ಹಿರೇಹಾಳ ಅವರ ಕೈ ಹಿಡಿದರು. 2002ರಲ್ಲಿ ಮುಂಡಗೋಡದ ಮೊರಾರ್ಜಿ ವಸತಿ ಶಾಲೆಯಲ್ಲಿ ವೃತ್ತಿಜೀವನ ಪ್ರಾರಂಭಿಸಿದರು. ಅಲ್ಲಿ 2 ವರ್ಷ ಸೇವೆ, ಆನಂತರ ಗದಗ ನಗರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 6 ವರ್ಷ, ಡಂಬಳ ಗ್ರಾಮದ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 10 ವರ್ಷ ಸೇವೆ ಸಲ್ಲಿಸಿದರು. ಮುಂಡರಗಿ ನಗರದ ಪ್ರತಿಷ್ಠಿತ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ಪ್ರಾಚಾರ್ಯರಾಗಿ 3 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಹಲವು ಹಿಂದಿ ಕಾರ್ಯಾಗಾರ ನಡೆಸಿಕೊಟ್ಟಿದ್ದಾರೆ. ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕಿ ಎನಿಸಿಕೊಂಡಿದ್ದಾರೆ.

ಪ್ರಶಸ್ತಿ: ಹಿಂದಿ ವಿಷಯದಲ್ಲಿ ಪ್ರತಿವರ್ಷ ಶೇ.100 ಫಲಿತಾಂಶ ನೀಡಿದ ಹಿನ್ನೆಲೆಯಲ್ಲಿ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ, ಗದಗ ಜಿಲ್ಲಾ ಹಿಂದಿ ವಿಷಯದಲ್ಲಿ ಉತ್ತಮ ಮಾರ್ಗದರ್ಶಕಿ ಪ್ರಶಸ್ತಿ, ಇತ್ತೀಚೆಗೆ ಮುಂಡರಗಿ ತಾಲೂಕು ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಹೊರ ತೆಗೆಯುವಲ್ಲಿ ಅವರು ಪರಿಣತರು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಂತ್ರಜ್ಞಾನ ಬಳಸಿ ಪಾಠ ಮಾಡುವ ಮೂಲಕ ಜ್ಞಾನ ಪ್ರಾಯೋಗಿಕವಾಗಿ ತಲುಪಿಸುವುದರೊಂದಿಗೆ ವಿದ್ಯಾರ್ಥಿಗಳ ಆಸಕ್ತಿ ಹೆಚ್ಚಿಸುವಂತೆ ಮಾಡಿದ್ದಾರೆ.

ಶಿಕ್ಷಕಿ ಜೈಬುನ್ನಿಸಾ ಹಿಂದಿ ಭಾಷೆಯ ಬೋಧನಾ ಕೌಶಲ್ಯದ ಮೂಲಕ ನಗರ, ಗ್ರಾಮೀಣ ಮಕ್ಕಳ ಆಶಾಕಿರಣವಾಗಿ ಹೊರಹೊಮ್ಮಿದ್ದಾರೆ. ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿ, ಉನ್ನತ ಹುದ್ದೆಗೇರಲು ನೆರವಾಗಿದ್ದಾರೆ. ಅವರ ಉತ್ತಮ ಸೇವೆ ಗುರುತಿಸಿ ಮುಂಡರಗಿ ತಾಲೂಕು ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಲಾಗಿದೆ.

ವಿದ್ಯಾರ್ಥಿಗಳು ತಮ್ಮನ್ನು ನಿರಂತರ ಜ್ಞಾನ ಹೊಂದಲು ತೊಡಗಿಸಿಕೊಂಡಾಗ ಉತ್ತಮ ಫಲ ಸಿಗುತ್ತದೆ. ಪರಿಶ್ರಮ, ತ್ಯಾಗ ಹಾಗೂ ವಿದ್ಯಾರ್ಥಿಗಳ ಬದುಕನ್ನು ರೂಪಿಸುವಲ್ಲಿ ತೋರಿಸುವ ನಿಷ್ಠೆ ಗುರುತಿಸಿ, ಇಲಾಖೆ ಮತ್ತು ಹಿರಿಯ ಅಧಿಕಾರಿಗಳು ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿರುವುದು ಸಂತೋಷ ತಂದಿದೆ ಎಂದು ಮುಂಡರಗಿ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ಪ್ರಾಚಾರ್ಯೆ ಜೈಬುನ್ನಿಸಾ ಉ ನಮಾಜಿ (ಹಿರೇಹಾಳ)ತಿಳಿಸಿದ್ದಾರೆ.ಶಿಕ್ಷಕರೇ ಸಮಾಜದ ಶಿಲ್ಪಿಗಳು. ಅವರೇ ಹೊಸ ಪೀಳಿಗೆಯ ಕನಸುಗಳನ್ನು ರೂಪಿಸುವವರು, ಜ್ಞಾನ–ಮೌಲ್ಯಗಳನ್ನು ಬಿತ್ತುವವರು. ಆ ಹಿನ್ನೆಲೆಯಲ್ಲಿ ಶಿಕ್ಷಕಿಯರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿರುವ ಜೈಬುನ್ನಿಸಾ ನಮಾಜಿ ಅವರ ಉತ್ತಮ ಸೇವೆ ಗುರುತಿಸಿ ತಾಲೂಕು ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಿರುವುದು ಪ್ರಶಂಸನೀಯ ಎಂದು , ಮುಂಡರಗಿ ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ