ಬೇಡಿಕೆಗಳನ್ನು ಈಡೇರಿಸದಿದ್ದರೆ ಜೈಲ್ ಭರೋ ಚಳವಳಿ: ಗ್ರಾಮ ಪಂಚಾಯಿತಿ ನೌಕರರ ಸಂಘ

KannadaprabhaNewsNetwork | Published : Dec 19, 2024 12:33 AM

ಸಾರಾಂಶ

ಡಾಟಾ ಎಂಟ್ರಿ ಆಪರೇಟರ್ಸ್, ನೀರುಗಂಟಿಗಳು, ಜವಾನ, ಸ್ವಚ್ಛತಾ ಗಾರರನ್ನು ಏಕಕಾಲಕ್ಕೆ ಸರ್ಕಾರಿ ನೌಕರರನ್ನಾಗಿ ಘೋಷಿಸಬೇಕು ಎಂದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ (ಸಿಐಟಿಯು) ಜಿಲ್ಲಾ ಸಮಿತಿ ವತಿಯಿಂದ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ ವಸೂಲಿಗಾರ, ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್ಸ್, ನೀರುಗಂಟಿಗಳು, ಜವಾನ, ಸ್ವಚ್ಛತಾ ಗಾರರನ್ನು ಏಕಕಾಲಕ್ಕೆ ಸರ್ಕಾರಿ ನೌಕರರನ್ನಾಗಿ ಘೋಷಿಸಬೇಕು ಎಂದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ (ಸಿಐಟಿಯು) ಜಿಲ್ಲಾ ಸಮಿತಿ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಸಮಿತಿ ಜಿಲ್ಲಾಧ್ಯಕ್ಷ ಬರಗಿ ಸಿದ್ದರಾಜು ಅವರ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾನಿರತರು ಕೆಲಕಾಲ ಪ್ರತಿಭಟನೆ ನಡೆಸಿ ಜಿಪಂ ಸಿಇಒ ಮೋನಾರೋತ್ ಅವರ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರು ಹಾಗೂ ಅಪರ ಮುಖ್ಯಕಾರ್ಯದರ್ಶಿ ಅವರಿಗೆ ಮನವಿ ಸಲ್ಲಿಸಲಾಯಿತು. ಸಂಘದ ಜಿಲ್ಲಾಧ್ಯಕ್ಷ ಬರಗಿ ಸಿದ್ದರಾಜು ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿ, ಈಗಿನ ದಿನ ನಿತ್ಯದ ಬಳಸುವಾರನ್ನು ಏಕಕಾಲಕ್ಕೆ ಸರ್ಕಾರಿ ನೌಕರರನ್ನಾಗಿ ಪತ್ರ ವೇತನ ₹31,000 ನಿಗದಿಗೊಳಿಸಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ನಿರ್ವಹಿಸುವ ನಾಕರರಿಗೆ ನಿವೃತ್ತಿ ಅಥವಾ ಮರಣ ಹೊಂದಿದರೆ ಅವರಿಗೆ ಪ್ರತಿ ತಿಂಗಳು ಕನಿಷ್ಠ ವೇತನ ₹6000 ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಗ್ರಾಪಂ ಸಿಬ್ಬಂದಿಗೆ ಇ-ಹಾಜರಾತಿ ಲೋಪದೋಷಗಳನ್ನು ಪಂಚತಂತ್ರದಲ್ಲಿ ‌ಸರಿಪಡಿಸುವವರೆಗೆ ಸಿಬ್ಬಂದಿಗೆ ಪೂರ್ಣ ವೇತನ ಪಾವತಿಸಬೇಕು. ರಾಜ್ಯದಲ್ಲಿ ಮೊದಲನೇ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ, ಕ್ಲರ್ಕ್ ಹುದ್ದೆ ತೆರವಾದ ನಂತರ ಅನುಮೋದನೆ ನೀಡಬೇಕೆಂಬ ಷರತ್ತನ್ನು ಕೈಬಿಟ್ಟು ಅನುಮೋದನೆ ನೀಡಲು ಅವಕಾಶ ನೀಡಬೇಕು. ಗ್ರಾಪಂಗಳಲ್ಲಿ ಖಾಲಿ ಇರುವ ಎಲ್ಲ ವಿಭಾಗದ ಹುದ್ದೆಗಳನ್ನು ತುಂಬಬೇಕು ಸಂಖ್ಯೆ ಕೆಪಿಆರ್‌ಸಿ- ಜಿಪಿಎಂ-134/2024 ದಿ.26/06/2024 ರ ಆದೇಶವನ್ನು ಹಿಂಪಡೆಯಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಜೈಲ್ ಭರೋ ಚಳವಳಿ ಮಾಡುವುದಾಗಿ ಎಚ್ಚರಿಸಿದರು.

ಗ್ರಾಪಂಗಳಿಗೆ 2ನೇ ಡಾಟಾ ಎಂಟ್ರಿ ಆಪರೇಟರ್ಸ್ ಹುದ್ದೆಗೆ ಅವಕಾಶ ನೀಡಿದ್ದು ಸ್ವಾಗತ. ಆದರೆ ಈಗಾಗಲೇ ಗ್ರಾಮ ಪಂಚಾಯಿತಿಗಳಲ್ಲಿ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುವ ಡಾಟಾ ಎಂಟ್ರಿ ಆಪರೇಟರ್‌ನ್ನು ನೇಮಕ ಮಾಡಿಕೊಂಡು ಮುಂದುವರಿಸಬೇಕು. ಅಲ್ಲದೆ ಈಗಾಗಲೇ ಪಂಚಾಯಿತಿಗಳಲ್ಲಿ ಕೆಲಸ ನಿರ್ವಹಿಸುವ ನೌಕರರ ಕಂಪ್ಯೂಟರ್ ಜ್ಞಾನ ಹಾಗೂ ವಿದ್ಯಾರ್ಹತೆ ಹೊಂದಿದ್ದರೆ ಅವಕಾಶ ನೀಡಬೇಕು. ಗ್ರಾಪಂಗಳಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ವರ್ಗಾವಣೆಗೆ ನೀಡಬೇಕು. ನೀರುಗಂಟಿಗಳಿಗೆ ಮಲ್ಟಿಪರ್ಪಸ್ ಎಂದಿರುವುದನ್ನು ಕೈಬಿಟ್ಟು ನಿರ್ದಿಷ್ಟ ಕೆಲಸಗಳನ್ನು ನಿಗದಿಪಡಿಸಬೇಕು. ಆದಾಯಕ್ಕೆ ಅನುಗುಣವಾಗಿ ಕರವಸೂಲಿಗಾರರ ಹುದ್ದೆಗಳನ್ನು ನಿಗದಿಗೊಳಿಸಬೇಕು. ಪ್ರತಿಯೊಂದು ಗ್ರಾಪಂಗಳಿಗೆ ಲೆಕ್ಕ ಸಹಾಯಕ ಹುದ್ದೆ ಸೃಷ್ಟಿಸಬೇಕು ಎಂದು ಆಗ್ರಹಿಸಿದರು.

ಗ್ರೇಡ್-1 ಕಾರ್ಯದರ್ಶಿ ಹುದ್ದೆಗೆ ಶೇ.100 ರಷ್ಟು ಸ್ಥಾನಗಳನ್ನು, ಗ್ರೇಡ್-2 ಕಾರ್ಯದರ್ಶಿಗಳಿಗೆ ಶೇ.50 ರಷ್ಟು, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗೆ ಶೇ.50 ರಷ್ಟು ಸ್ಥಾನಗಳನ್ನು ಬಡ್ತಿ ನೀಡಬೇಕು. ಗ್ರೇಡ್-1 ಪಂಚಾಯಿತಿಗಳನ್ನು ಜನಸಂಖ್ಯೆಗೆ ಆಧರಿಸಿ ಗ್ರಾಪಂಗಳನ್ನು ಮೇಲ್ದರ್ಜೆಗೆ ಏರಿಸಬೇಕು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹದ್ದೆಗೆ ಶೇ.60 ರಷ್ಟು ಸ್ಥಾನವನ್ನು ಗ್ರೇಡ್-1 ಕಾರ್ಯದರ್ಶಿಗಳಿಗೆ ನೀಡಬೇಕು. ಐಪಿಡಿ ಸಾಳಪ್ಪ ವರದಿಯಂತೆ ಸ್ವಚ್ಛತಾಗಾರರನ್ನು ನೇಮಿಸಬೇಕು. ಸೇವಾ ಹಿರಿತನ ಪರಿಗಣಿಸಿ ವೇತನ ಹೆಚ್ಚಳ ಮಾಡಬೇಕು. ನೌಕರರು ತೀವ್ರ ಅನಾರೋಗ್ಯಕ್ಕೆ ತುತ್ತಾದ ನೌಕರರಿಗೆ ಆಸತ್ರೆ ವೆಚ್ಚ ಭರಿಸಬೇಕು ಎಂದು ಒತ್ತಾಯಿಸಿದರು.

ಗ್ರೇಡ್-1 ಕಾರ್ಯದರ್ಶಿಗಳಿಂದ ಪಿಡಿಒ ಹುದ್ದೆಗೆ ರಾಜ್ಯ ಮಟ್ಟದಲ್ಲಿ ಕೊಡುವ ಮುಂಬಡ್ತಿಯನ್ನು ಕೈಬಿಟ್ಟು ಜಿಲ್ಲಾ ಮಟ್ಟದಲ್ಲಿ ಮುಂಬಡ್ತಿಗೆ ಅವಕಾಶ ನೀಡಬೇಕು. ಬಿಲ್ ಕಲೆಕ್ಟ್ ಮತ್ತು ಗುಮಾಸ್ತ ವೃಂದದಿಂದ ಗ್ರೇಡ್-2 ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕ ಹುದ್ದೆಗಳಿಗೆ ನೇಮಕಗೊಂಡ ನೌಕರರಿಗೆ ಕೆ.ಸಿ.ಎಸ್‌ಆರ್ 325 ನಿಯಮಾನುಸಾರ ಹಿಂದಿನ ಸೇವೆ ಪರಿಗಣಿಸಿ ಹಳೆ ಪಿಂಚಣಿ ಜಾರಿ ಮಾಡಬೇಕು ಎಂದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಅಮ್ಮನಪುರ, ಉಪಾಧ್ಯಕ್ಷ ರಾದ ಆರ್ಮುಗಂ, ಮಲ್ಲು, ಖಜಾಂಚಿ ದೊರೆಸ್ವಾಮಿ, ತಾಲೂಕು ಅಧ್ಯಕ್ಷ ಕೃಷ್ಣ, ಕಾರ್ಯದರ್ಶಿ ನಂದೀಶ್, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ರಾಜಣ್ಣ, ಉಪಾಧ್ಯಕ್ಷ ಲೋಕೇಶ್, ಕಾರ್ಯದರ್ಶಿ ಸಿದ್ದರಾಜು, ಯಳಂದೂರು ತಾಲೂಕು ಅಧ್ಯಕ್ಷೆ ಮಹದೇವಮ್ಮ, ಕಾರ್ಯದರ್ಶಿ ಕಿಟ್ಟ,ಹನೂರು ತಾಲೂಕು ಅಧ್ಯಕ್ಷ ದೊರೆಸ್ವಾಮಿ, ಕಾರ್ಯದರ್ಶಿ ಮಹದೇವಸ್ವಾಮಿ, ಖಜಾಂಚಿ ಸಿದ್ದರಾಜು ಇತರರು ಭಾಗವಹಿಸಿದ್ದರು.

Share this article