ಹಕ್ಕುಪತ್ರಕ್ಕಾಗಿ 15ರಂದು ಜೈಲ್ ಭರೋ ಚಳವಳಿ: ಬಲ್ಲೂರು ರವಿಕುಮಾರ

KannadaprabhaNewsNetwork |  
Published : Feb 13, 2024, 12:49 AM IST
12ಕೆಡಿವಿಜಿ6-ದಾವಣಗೆರೆಯಲ್ಲಿ ಸೋಮವಾರ ರಾಜ್ಯ ರೈತ ಸಂಘದ ಕಾರ್ಯದರ್ಶಿ ಬಲ್ಲೂರು ರವಿಕುಮಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ದಾವಣಗೆರೆ ತಾಲೂಕು ಹೆಬ್ಬಾಳ್ ಗ್ರಾಮದ ರೈತರು 3-4 ದಶಕದಿಂದ ಬಗರ್ ಹುಕುಂ ಸಾಗು‍ವಳಿ ಅರ್ಜಿ ಸಲ್ಲಿಸಿದ್ದಾರೆ. ಇವರೆಗೆ ಹಕ್ಕುಪತ್ರ ನೀಡಿಲ್ಲ. ಹರಿಹರ ತಾಲೂಕಿನ ಮಲೆಬೆನ್ನೂರು, ಕುಮಾರನಹಳ್ಳಿ, ಕೊಪ್ಪ, ಹಾಲಿವಾಣ, ಜಿ.ಟಿ.ಕಟ್ಟೆ ಹಾಗೂ ಇತರೆ ಗ್ರಾಮಗಳ ರೈತರು, ಹೊನ್ನಾಳಿ, ಚನ್ನಗಿರಿ, ಜಗಳೂರು, ನ್ಯಾಮತಿ, ತಾಲೂಕಿನ ರೈತರು ಸಹ 30-40 ವರ್ಷದಿಂದ ಸಾಗುವಳಿ ಮಾಡಿಕೊಂಡು ಬಂದಿದ್ದು, ಫಾರಂ 50, 53 ಹಾಗೂ 57ರಡಿ ಸರ್ಕಾರದ ಕಾನೂನಿನ್ವಯ ಅರ್ಜಿ ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಒತ್ತಾಯಿಸಿ ರಂಟೆ, ಕುಂಟೆ, ನೇಗಿಲು, ಕುಡಿಗೋಲು, ಹಾರೆ, ಸಲಾಕೆ ಸೇರಿ ಕೃಷಿ ಪರಿಕರಗಳು, ಜಾನುವಾರುಗಳ ಸಹಿತ ಫೆ.15ರಂದು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ, ಜೈಲ್ ಭರೋ ಚಳವಳಿ ನಡೆಸುವುದಾಗಿ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ ಎಚ್ಚರಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಂದು ಬೆಳಿಗ್ಗೆ 11ಕ್ಕೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಬಗರ್ ಹುಕುಂ ಸಾಗುವಳಿದಾರ ರೈತರು, ರೈತ ಕುಟುಂಬಗಳು ತಮ್ಮ ರಾಸುಗಳು, ಕೃಷಿ ಪರಿಕರಗಳ ಸಮೇತ ದಾವಣಗೆರೆಗೆ ಆಗಮಿಸಿ, ಜಿಲ್ಲಾ ಧಿಕಾರಿ ಕಚೇರಿ ಬಳಿ ಸಾಗುವಳಿ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಹೋರಾಟ ನಡೆಸಲಿದ್ದಾರೆ ಎಂದರು.

ದಾವಣಗೆರೆ ತಾಲೂಕು ಹೆಬ್ಬಾಳ್ ಗ್ರಾಮದ ರೈತರು 3-4 ದಶಕದಿಂದ ಬಗರ್ ಹುಕುಂ ಸಾಗು‍ವಳಿ ಅರ್ಜಿ ಸಲ್ಲಿಸಿದ್ದಾರೆ. ಇವರೆಗೆ ಹಕ್ಕುಪತ್ರ ನೀಡಿಲ್ಲ. ಹರಿಹರ ತಾಲೂಕಿನ ಮಲೆಬೆನ್ನೂರು, ಕುಮಾರನಹಳ್ಳಿ, ಕೊಪ್ಪ, ಹಾಲಿವಾಣ, ಜಿ.ಟಿ.ಕಟ್ಟೆ ಹಾಗೂ ಇತರೆ ಗ್ರಾಮಗಳ ರೈತರು, ಹೊನ್ನಾಳಿ, ಚನ್ನಗಿರಿ, ಜಗಳೂರು, ನ್ಯಾಮತಿ, ತಾಲೂಕಿನ ರೈತರು ಸಹ 30-40 ವರ್ಷದಿಂದ ಸಾಗುವಳಿ ಮಾಡಿಕೊಂಡು ಬಂದಿದ್ದು, ಫಾರಂ 50, 53 ಹಾಗೂ 57ರಡಿ ಸರ್ಕಾರದ ಕಾನೂನಿನ್ವಯ ಅರ್ಜಿ ಸಲ್ಲಿಸಿದ್ದಾರೆ. ಜಮೀನಿನಲ್ಲಿರುವ ಕಲ್ಲು, ಮುಳ್ಳು, ಗಿಡ ಗಂಟೆ ತೆರೆವು ಮಾಡಿ, ರೈತರು ತಮ್ಮ ಅರ್ಧ ಆಯುಷ್ಯ, ಆರೋಗ್ಯವನ್ನೇ ಇದಕ್ಕಾಗಿ ಕಳೆದಿದ್ದರೂ ಹಕ್ಕುಪತ್ರ ನೀಡಿಲ್ಲ ಎಂದು ಅವರು ಆರೋಪಿಸಿದರು.

ಮಲೆನಾಡು ಭಾಗಗಳಾದ ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಶ್ರೀಮಂತರು 50-100 ಎಕರೆವರೆಗೂ ಒತ್ತುವರಿ ಮಾಡಿಕೊಂಡಿದ್ದಾರೆ. ಅಂತಹವರನ್ನು ಒಕ್ಕಲೆಬ್ಬಿಸುವ, ಒತ್ತುವರಿ ತೆರವುಗೊಳಿಸುವ ಪ್ರಯತ್ನ ಯಾವ ಸರ್ಕಾರವೂ ಮಾಡಲ್ಲ. ಆದರೆ, ಬಡ ಸಾಗುವಳಿದಾರರು, ರೈತರ ಮೇಲೆ ಸರ್ಕಾರ ದಬ್ಬಾಳಿಕೆ ಮಾಡುವುದು ಸರಿಯಲ್ಲ ಎಂದರು.

ಕಳೆದೊಂದು ದಶಕದಿಂದ ಮುಖ್ಯಮಂತ್ರಿ, ಸಚಿವರು, ಶಾಸಕರು, ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಸೀಲ್ದಾರರಿಗೆ ಸಾಗುವಳಿದಾರರು ಅರ್ಜಿ ಸಲ್ಲಿಸಿ, ಬೇಸತ್ತಿದ್ದಾರೆ. ಹರಿಹರ ತಾ. ಮಲೆಬೆನ್ನೂರು, ಕೊಮಾರನಹಳ್ಳಿ, ಕೊಪ್ಪ, ಹಾಲಿವಾಣ ಇತರೆ ಗ್ರಾಮಗಳಲ್ಲಿ ಜಂಟಿ ಸಮೀಕ್ಷೆ ವರದಿಯಾಗಿದ್ದು, ಹಕ್ಕುಪತ್ರ ನೀಡಲು ವಿಳಂಬ ಮಾಡಲಾಗುತ್ತಿದೆ ಎಂದು ಬಲ್ಲೂರು ರವಿಕುಮಾರ ದೂರಿದರು.

ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಮಾಯಕೊಂಡ ಅಶೋಕ, ಉಪಾಧ್ಯಕ್ಷ ರಾಂಪುರ ಬಸವರಾಜ, ಪ್ರಧಾನ ಕಾರ್ಯದರ್ಶಿ, ವಕೀಲ ಕೊಮಾರನಹಳ್ಳಿ ಮಂಜುನಾಥ, ನಾಗರಕಟ್ಟೆ ಜಯನಾಯ್ಕ, ಪ್ರತಾಪ ಮಾಯಕೊಂಡ, ಕೋಗಳಿ ಮಂಡುನಾಥ ಹರಿಹರ, ಹೆಬ್ಬಾಳ ರಾಜಯೋಗಿ, ಮಿಯ್ಯಾಪುರ ತಿರುಮಲೇಶ, ಪ್ರಕಾಶ, ಫೈಜುಲ್ಲಾ ಮಲೆಬೆನ್ನರು, ಮಂಜುನಾಥ ಕೊಮಾರನಹಳ್ಳಿ, ಜಯನಾಯ್ಕ, ಹೆಬ್ಬಾಳ ಗೋವಿಂದರಾಜ, ಬಾಡಾ ಹನುಮಂತಪ್ಪ ಇತರರಿದ್ದರು.

ರೈತರು 2-3 ಎಕರೆ ಸಾಗುವಳಿ ಮಾಡಿ, ದೇಶದ 140 ಕೋಟಿ ಜನರಿಗೆ ಅನ್ನ ಹಾಕುತ್ತಿದ್ದಾರೆ. ಇಂತಹ ಬಡ ರೈತರನ್ನು ಒಕ್ಕಲೆಬ್ಬಿಸಲು ಸರ್ಕಾರಗಳು ಪ್ರಯತ್ನಿಸುತ್ತವೆ. ಆ ಬಡ ರೈತರು ಬ್ಯಾಂಕ್‌ಗೆ ಹೋದರೆ, ಪಹಣಿ ತರಲು, ಬೆಸ್ಕಾಂಗೆ ಹೋದರೆ ದಾಖಲೆ ತರಲು ಹೇಳುತ್ತಾರೆ. ಇದರಿಂದಾಗಿ ರೈತರು ಅತ್ತ ಸಾಯಲು ಆಗದೇ, ಇತ್ತ ಬಾಳಲೂ ಆಗದ ಸ್ಥಿತಿಗೆ ತಲುಪಿದ್ದಾರೆ. ಬಲ್ಲೂರು ರವಿಕುಮಾರ, ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ