ಶಾಸಕ ಸತೀಶ ಸೈಲ್‌ಗೆ ಜೈಲು: ಪಕ್ಷಗಳು ಮೌನ

KannadaprabhaNewsNetwork |  
Published : Oct 28, 2024, 01:04 AM IST
ಸತೀಶ ಸೈಲ್ | Kannada Prabha

ಸಾರಾಂಶ

ಸೈಲ್ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ದೀರ್ಘ ಅವಧಿಗೆ ಶಿಕ್ಷೆ, ದಂಡ ವಿಧಿಸಿದೆ. ಆದರೆ ಕಾಂಗ್ರೆಸ್ ಇದು ಸೈಲ್ ಅವರ ವೈಯಕ್ತಿಕ ವಿಚಾರ ಎಂಬಂತೆ ಸೈಲ್ ಅವರಿಂದ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿದೆ.

ಕಾರವಾರ: ಕಾರವಾರ ಶಾಸಕ ಸತೀಶ ಸೈಲ್ ಅವರಿಗೆ 7 ವರ್ಷ ಶಿಕ್ಷೆಯಾದರೂ ರಾಜಕೀಯ ಪಕ್ಷಗಳು ಮೌನಕ್ಕೆ ಶರಣಾಗಿವೆ. ಜಿಲ್ಲೆಯ ಕಾಂಗ್ರೆಸ್‌ಗೆ ಇದು ಅರಗಿಸಿಕೊಳ್ಳಲಾರದ ಸಂಗತಿಯಾಗಿದೆ. ಹಾಗಂತ ಬಿಜೆಪಿಯ ಮುಖಂಡರೂ ತುಟಿ ಬಿಚ್ಚುತ್ತಿಲ್ಲ.ಸೈಲ್ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ದೀರ್ಘ ಅವಧಿಗೆ ಶಿಕ್ಷೆ, ದಂಡ ವಿಧಿಸಿದೆ. ಆದರೆ ಕಾಂಗ್ರೆಸ್ ಇದು ಸೈಲ್ ಅವರ ವೈಯಕ್ತಿಕ ವಿಚಾರ ಎಂಬಂತೆ ಸೈಲ್ ಅವರಿಂದ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿದೆ.ಹಾಗೆ ಬಿಜೆಪಿಯವರೂ ಈ ಬಗ್ಗೆ ಯಾವುದೆ ಪ್ರತಿಕ್ರಿಯೆ ನೀಡಿಲ್ಲ. ಅವರು ಮಾಡಿದ ತಪ್ಪಿಗೆ ಶಿಕ್ಷೆ ಆಗಿದೆ. ನಾವೇಕೆ ಮೂಗು ತೂರಿಸಬೇಕು ಎನ್ನುವುದೂ ಕೆಲವರ ಅಭಿಪ್ರಾಯವಾಗಿದೆ. ಜತೆಗೆ ಗಣಿ ಹಗರಣದಲ್ಲಿ ಬಳ್ಳಾರಿಯ ಬಿಜೆಪಿ ಮುಖಂಡರ ಮೇಲೂ ಆರೋಪ ಇದೆ.

ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ಯಾರಿಗೆ, ಯಾವಾಗ ಸುತ್ತಿಕೊಳ್ಳಲಿದೆ ಎನ್ನುವುದು ತಿಳಿಯುತ್ತಿಲ್ಲ. ಇದರಿಂದ ಉತ್ತರ ಕನ್ನಡ ಜಿಲ್ಲೆಯ ಪಾಲಿಗೆ ಇದೊಂದು ಅತಿ ದೊಡ್ಡ ಪ್ರಕರಣವಾಗಿದ್ದರೂ ಪ್ರತಿಕ್ರಿಯೆಗೆ ಮುಂದಾಗದೆ ಮೌನಕ್ಕೆ ಶರಣಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಗಣಿ ಹಗರಣ ವಿರೋಧಿಸಿ ಬಳ್ಳಾರಿಯಿಂದ ಈ ಹಿಂದೆ ಪಾದಯಾತ್ರೆ ನಡೆಸಿದ್ದರು. ಆನಂತರ ಅದೇ ಹಗರಣದ ಆರೋಪಿಯನ್ನು ಪಕ್ಷಕ್ಕೆ ಕರೆತಂದು ಸಚಿವರನ್ನಾಗಿಸಿದರು. ಹೀಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳಿಗೆ ಗಣಿಯ ಧೂಳು ಅಂಟಿಕೊಂಡಿದೆ. ಚುನಾವಣೆ ಲೆಕ್ಕಾಚಾರ ಆರಂಭ: ಸೈಲ್ ಅವರಿಗೆ 7 ವರ್ಷ ಶಿಕ್ಷೆ ಆಗಿರುವುದರಿಂದ ಉಚ್ಚ ನ್ಯಾಯಾಲಯದಲ್ಲಿ ತಡೆ ಸಿಗದೆ ಇದ್ದಲ್ಲಿ ಶಾಸಕ ಸ್ಥಾನದಿಂದ ಅನರ್ಹರಾಗುತ್ತಾರೆ. ಆಗ ಉಪಚುನಾವಣೆ ನಡೆದಲ್ಲಿ ಸದ್ಯ ಜೆಡಿಎಸ್‌ನಲ್ಲಿರುವ ಆನಂದ ಅಸ್ನೋಟಿಕರ್ ಕಾಂಗ್ರೆಸ್‌ಗೆ ಬಂದು ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿದೆ. ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಮಾಜಿ ಶಾಸಕಿ ರೂಪಾಲಿ ನಾಯ್ಕ ಪ್ರಬಲರಾಗಿದ್ದಾರೆ. ಬಿಜೆಪಿ ರಾಜ್ಯ ಉಪಾಧ್ಯಕ್ಷೆಯಾಗಿ ಪಕ್ಷ ಸಂಘಟನೆಯಲ್ಲೂ ಮುಂಚೂಣಿಯಲ್ಲಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಉಪಚುನಾವಣೆಯಲ್ಲೂ ಮುಂದುವರಿಯುವ ಸಾಧ್ಯತೆ ಇರುವುದರಿಂದ ರೂಪಾಲಿ ನಾಯ್ಕ ಅವರಿಗೆ ಟಿಕೆಟ್ ದೊರೆಯುವ ಸಾಧ್ಯತೆ ಹೆಚ್ಚಿದೆ. ಆಗ ಆನಂದ ಅಸ್ನೋಟಿಕರ್ ಕಾಂಗ್ರೆಸ್‌ನಿಂದ ಕಣಕ್ಕಿಳಿಯಲಿದ್ದಾರೆ ಎಂಬ ಲೆಕ್ಕಾಚಾರವನ್ನು ಕೆಲವರು ಹಾಕುತ್ತಿದ್ದಾರೆ.

ಆನಂದ ಅಸ್ನೋಟಿಕರ್ ಕಾರಾಗೃಹಕ್ಕೆ ತೆರಳಿ ಸತೀಶ ಸೈಲ್ ಅವರನ್ನು ಭೇಟಿ ಮಾಡಲು ಉದ್ದೇಶಿಸಿರುವುದಾಗಿ ಮಾಹಿತಿ ಲಭಿಸಿದೆ. ಈ ಭೇಟಿಯ ಹಿಂದಿನ ಉದ್ದೇಶ ಕುತೂಹಲವನ್ನು ಕೆರಳಿಸಿದೆ. ಕ್ಷೇತ್ರದಲ್ಲೀಗ ವಿವಿಧ ಲೆಕ್ಕಾಚಾರ, ಊಹಾಪೋಹಗಳು ಕೇಳಿಬರುತ್ತಿದೆ. ಆದರೆ ಸೈಲ್ ಉಚ್ಚ ನ್ಯಾಯಾಲಯಕ್ಕೆ ಹೋದಲಿ ಅಲ್ಲಿ ಬರುವ ತೀರ್ಪು ಸೈಲ್ ಅವರ ಜತೆಗೆ ಉಪಚುನಾವಣೆಯ ಭವಿಷ್ಯವನ್ನು ನಿರ್ಧರಿಸಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ