ತಾಲೂಕಿನಲ್ಲಿ 16 ಪದವಿ ಪೂರ್ವ ಕಾಲೇಜುಗಳ ದ್ವಿತೀಯ ವರ್ಷದ ಪಿಯುಸಿ ಪರೀಕ್ಷೆಗಳು ಕನ್ನಡ ಪಠ್ಯ ವಿಷಯಕ್ಕೆ ಸಂಬಂಧ ಪಟ್ಟಂತೆ ಶನಿವಾರ ನಿಗದಿಪಡಿಸಿದ 5 ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಏಕಕಾಲದಲ್ಲಿ ಆರಂಭಗೊಂಡವು.

ಕನ್ನಡಪ್ರಭ ವಾರ್ತೆ ಚನ್ನಗಿರಿ

ತಾಲೂಕಿನಲ್ಲಿ 16 ಪದವಿ ಪೂರ್ವ ಕಾಲೇಜುಗಳ ದ್ವಿತೀಯ ವರ್ಷದ ಪಿಯುಸಿ ಪರೀಕ್ಷೆಗಳು ಕನ್ನಡ ಪಠ್ಯ ವಿಷಯಕ್ಕೆ ಸಂಬಂಧ ಪಟ್ಟಂತೆ ಶನಿವಾರ ನಿಗದಿಪಡಿಸಿದ 5 ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಏಕಕಾಲದಲ್ಲಿ ಆರಂಭಗೊಂಡವು.

ತಾಲೂಕಿನಲ್ಲಿ 8 ಸರ್ಕಾರಿ ಪದವಿಪೂರ್ವ ಕಾಲೇಜುಗಳಿದ್ದರೆ, 4 ಅನುದಾನಿತ ಕಾಲೇಜುಗಳು, 4 ಅನುದಾನ ರಹಿತ ಕಾಲೇಜುಗಳು ಸೇರಿದಂತೆ ಒಟ್ಟು 16 ಪದವಿ ಪೂರ್ವ ಕಾಲೇಜುಗಳಿವೆ. ಈ ಎಲ್ಲ 16 ಕಾಲೇಜುಗಳಿಂದ 5 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿದ್ದು, ಚನ್ನಗಿರಿ ಪಟ್ಟಣದಲ್ಲಿ 2 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅದರಲ್ಲಿ ಸರ್ಕಾರಿ ಪ.ಪೂ. ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ 455 ವಿದ್ಯಾರ್ಥಿಗಳು ಪರೀಕ್ಷಾ ನೋಂದಣಿ ಮಾಡಿಸಿದ್ದು, ಇವರಲ್ಲಿ 25 ವಿದ್ಯಾರ್ಥಿಗಳು ಗೈರಾಗಿದ್ದರು. 430 ವಿದ್ಯಾರ್ಥಿಗಳು ಪರೀಕ್ಷೆ ಬರೆದರು ಎಂದು ಪ್ರಾಚಾರ್ಯ ದೇವರಾಜ್ ತಿಳಿಸಿದ್ದಾರೆ.

ಪಟ್ಟಣದ ಮತ್ತೊಂದು ಪರೀಕ್ಷಾ ಕೇಂದ್ರವಾದ ಶ್ರೀ ಮಣ್ಣಮ್ಮ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ 323 ಜನ ಪರೀಕ್ಷೆ ಬರೆಯಲು ನೋಂದಣಿ ಮಾಡಿಸಿದ್ದು, ಇವರಲ್ಲಿ 313 ಜನ ಪರೀಕ್ಷೆಯನ್ನು ಬರೆದಿದ್ದಾರೆ. 10 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ಸಿದ್ದೇಶ್ ತಿಳಿಸಿದ್ದಾರೆ.

ಬಸವಾಪಟ್ಟಣದ ಎಲ್.ಸಿದ್ದಪ್ಪ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ 263ಜನ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲು ನೋಂದಾವಣೆ ಮಾಡಿಸಿಕೊಂಡಿದ್ದು, ಇವರಲ್ಲಿ 251 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ 12 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಪ್ರಾಚಾರ್ಯ ಪದ್ಮಪ್ಪ ತಿಳಿಸಿದ್ದಾರೆ.

ಸಂತೆಬೆನ್ನೂರಿನ ಎಸ್.ಜೆ.ವಿ.ಪಿ. ಪರೀಕ್ಷಾ ಕೇಂದ್ರದಲ್ಲಿ 248 ವಿದ್ಯಾರ್ಥಿಗಳು ಪರೀಕ್ಷೆ ನ್ನು ಬರೆಯಲು ನೋಂದಣಿ ಮಾಡಿಕೊಂಡಿದ್ದು, ಇವರಲ್ಲಿ 226 ವಿದ್ಯಾರ್ಥಿಗಳು ಪರೀಕ್ಷೆ ಬರೆದು, 22 ವಿದ್ಯಾರ್ಥಿಗಳು ಗೈರಾಗಿದ್ದಾರೆಂದು ಪ್ರಾಚಾರ್ಯ ಜಗದೀಶ್ ತಿಳಿಸಿದ್ದಾರೆ.

ಕೆಂಗಾಪುರ ಗ್ರಾಮದ ಶ್ರೀ ರಾಮಲಿಂಗೇಶ್ವರ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಯನ್ನು ಬರೆಯಲು 192 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಇವರಲ್ಲಿ 183 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 9 ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಪ್ರಾಚಾರ್ಯ ದಾದಾಪೀರ್ ತಿಳಿಸಿದ್ದಾರೆ.