ಅಂತರಾಷ್ಟ್ರೀಯ ಸಾಕ್ಷರತಾ ದಿನದ ಅರ್ಥಪೂರ್ಣ ಆಚರಣೆ । ವಿವಿಧ ಸ್ಪರ್ಧೆಗಳ ಆಯೋಜನೆ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕಾರಾಗೃಹವು ಖೈದಿಗಳಿಗೆ ಮನ ಪರಿವರ್ತನೆಯ ತಾಣವಾಗಬೇಕು. ಆಕಸ್ಮಿಕವಾಗಿ ತಪ್ಪುಗಳು ಸಹಜ. ಆದರೆ ಅದನ್ನು ತಿದ್ದಿ ನಡೆಯುವುದರಲ್ಲಿ ನಿಜವಾದ ಅರ್ಥವಿದೆ ಎಂದು ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್ ತಿಳಿಸಿದರು.ನಗರದ ಜಿಲ್ಲಾ ಕಾರಾಗೃಹದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾಗೂ ಜಿಲ್ಲಾ ಕಾರಾಗೃಹದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ, ಸಾಕ್ಷರತಾ ಸಪ್ತಾಹ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳ ವಿಜೇತ ಖೈದಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಕಾರಾಗೃಹದಲ್ಲಿ ಕಂಪ್ಯೂಟರ್ ಕಲಿಕೆ ಹಾಗೂ ಗ್ರಂಥಾಲಯಗಳನ್ನು ಆರಂಭಿಸುವ ಮೂಲಕ ಖೈದಿಗಳ ಪರಿವರ್ತನೆಗೆ ಸರ್ಕಾರವು ಸಾಕಷ್ಟು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅವುಗಳನ್ನು ಸದ್ಭಳಕೆ ಮಾಡಿಕೊಂಡು ಕಾರಾಗೃಹ ವಾಸ ಮುಗಿದ ಬಳಿಕ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕಿ ಸಾಮಾಜಿಕ ಸುಸ್ಥಿರತೆಗೆ ಕೊಡುಗೆ ನೀಡುವಂತಾಗಬೇಕು ಎಂದರು.ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಪ್ರಾಂಶುಪಾಲ ಕಾಶೀನಾಥ್ ಮಾತನಾಡಿ, ಅಜ್ಞಾನದಿಂದ ಸುಜ್ಞಾನದೆಡೆಗೆ ನಡೆಸುವುದೇ ಶಿಕ್ಷಣ. ಮಾನವನಿಂದ ಮಹಾಮಾನವನಾಗಲು ಶಿಕ್ಷಣ, ಸಾಕ್ಷರತೆ ಅಗತ್ಯವಾಗಿದೆ. ಹಿಂದೆ ದೇಶದಲ್ಲಿ ಕಡುಬಡತನ, ಅನಕ್ಷರತೆ ಇತ್ತು. ಪ್ರಸ್ತುತ ಶಿಕ್ಷಣದ ಮಹತ್ವವನ್ನು ಮನಗಂಡು ದೇಶ ಸಾಕ್ಷರತೆಯಲ್ಲಿ ಮುನ್ನೆಡೆಯುತ್ತಿದೆ. ಇದು ಆರೋಗ್ಯಕರ ಬೆಳವಣಿಗೆಯಾಗಿದೆ. ಖೈದಿಗಳು ಕಾರಾಗೃಹದಲ್ಲಿರುವಷ್ಟು ದಿನಗಳನ್ನು ವ್ಯರ್ಥ ಮಾಡದೆ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಬೇಕು. ಬರವಣಿಗೆ ಶೈಲಿ ರೂಢಿಸಿಕೊಳ್ಳಬೇಕು. ಗ್ರಂಥಾಲಯದಲ್ಲಿರುವ ಮಹಾತ್ಮರ, ದಾರ್ಶನಿಕರ ಜೀವನಚರಿತ್ರೆಗಳನ್ನು ಓದಬೇಕು. ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಲೋಕೇಶ್, ಸೆ.೮ರಂದು ವಿಶ್ವಾದ್ಯಂತ ಸಾಕ್ಷರತಾ ದಿನ ಆಚರಿಸಲಾಗುತ್ತಿದೆ. ದೇಶದಲ್ಲಿ ಅನಕ್ಷರತೆ ತೊಲಗಿಸಿ ಪ್ರತಿಯೊಬ್ಬರಲ್ಲೂ ಸಾಕ್ಷರತೆಯ ಬೀಜ ಬಿತ್ತಲು ೧೯೬೭ರಿಂದ ಪ್ರತಿ ವರ್ಷ ವಿಶ್ವ ಸಾಕ್ಷರತಾ ದಿನವನ್ನು ಆಚರಿಸಲಾಗುತ್ತಿದೆ. ಸಾಕ್ಷರರಾಗಲು ಮೊದಲು ನಾವು ಶಿಕ್ಷಣ, ಸಂಸ್ಕಾರ, ನೈತಿಕತೆ ಕಲಿಯಬೇಕು. ಬಳಿಕ ಇತರರಿಗೂ ಕಲಿಸಬೇಕು. ಆಗಮಾತ್ರ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯವಾಗಲಿದೆ. ಸಾಕ್ಷರತೆಯ ಮೂಲಮಂತ್ರವಾಗಿರುವ ಶಿಕ್ಷಣ ಅಮೂಲ್ಯ ವಸ್ತುವಾಗಿದೆ. ಸ್ವಾತಂತ್ರ್ಯಪೂರ್ವದಲ್ಲಿ ದೇಶದಲ್ಲಿ ಶೇ.೧೬ರಷ್ಟಿದ್ದ ಸಾಕ್ಷರತೆ ಈಗ ಶೇ.೭೫ಕ್ಕೇ ಏರಿದೆ. ಕರ್ನಾಟಕದಲ್ಲಿ ಸಾಕ್ಷರತೆ ಶೇ.೭೬ರಷ್ಟಿದ್ದು, ಸಾಕ್ಷರತೆಯಲ್ಲಿ ಜಿಲ್ಲೆ ಶೇ.೬೧ರಷ್ಟು ಪ್ರಗತಿ ಸಾಧಿಸಿದೆ ಎಂದರು.ಜಿಲ್ಲಾ ಕಾರಾಗೃಹದ ಪ್ರಭಾರ ಅಧೀಕ್ಷಕ ಉತ್ತಮ್ ಜೀ ತಳ್ಳಿಮನಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕ ಸುರೇಶ್‌ಕುಮಾರ್ ಶಿಕ್ಷಣ ಹಾಗೂ ಸಾಕ್ಷರತೆಯ ಮಹತ್ವ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾರ್ವಜನಿಕರಲ್ಲಿ ಸಾಕ್ಷರತೆಯ ಅರಿವು ಮೂಡಿಸುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಾಕ್ಷರತಾ ಪಾಕ್ಷಿಕ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಲಾಯಿತು. ಖೈದಿಗಳಿಗೆ ಸಾಕ್ಷರತಾ ಪ್ರಮಾಣ ವಚನವನ್ನು ಬೋಧಿಸಲಾಯಿತು. ಬಳಿಕ ಕಾರಾಗೃಹದಲ್ಲಿರುವ ಖೈದಿಗಳಿಗೆ ಮನಪರಿವರ್ತನೆಗಾಗಿ ಏರ್ಪಡಿಸಿದ್ದ ಪ್ರಬಂಧ, ಚಿತ್ರಕಲೆ ಹಾಗೂ ರಂಗೋಲಿ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಖೈದಿಗಳ ಮನಪರಿವರ್ತನೆಗಾಗಿ ಅಕ್ಷರ ಬೀಜ ಬಿತ್ತಿ, ಸ್ವತಹ ಖೈದಿಗಳಿಗೆ ಶಿಕ್ಷಣ ವಿಚಾರ ಕುರಿತ ಪ್ರಬಂಧ ಸ್ಪರ್ಧೆ, ಚಿತ್ರಕಲೆ ಹಾಗೂ ಮಹಿಳಾ ಖೈದಿಗಳಿಗೆ ರಂಗೋಲಿ, ಇತರ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸುವ ಮೂಲಕ ಅಂತಾರಾಷ್ಟ್ರೀಯ ಸಾಕ್ಷರತೆ ದಿನವನ್ನು ನಗರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜಿಲ್ಲಾ ಕಾರಾಗೃಹದ ವಾರ್ಡರ್ ಅರ್ಪಿತಾ, ಬೋರೇಗೌಡ, ವಯಸ್ಕರ ಶಿಕ್ಷಣ ಇಲಾಖೆಯ ಕಾರ್ಯಕ್ರಮ ಸಹಾಯಕರಾದ ಶೋಭಾ, ಜ್ಯೋತಿ, ಶಿಕ್ಷಣ ಇಲಾಖೆಯ ಬಿ.ಆರ್.ಸಿ ಕೇಂದ್ರದ ರೆಬೆಲ್ಲೋ, ಸಿ.ಆರ್.ಪಿ ಕಿಟ್ಟು ಇದ್ದರು.