ಕನ್ನಡಪ್ರಭ ವಾರ್ತೆ ಮೈಸೂರು
ಗಣೇಶ ಚತುರ್ಥಿ ಅಂಗವಾಗಿ ದಸರಾ ಗಜಪಡೆಗೆ ಮೈಸೂರು ಅರಮನೆಯ ಆನೆ ಬಿಡಾರದಲ್ಲಿ ಶನಿವಾರ ವಿಶೇಷ ಪೂಜೆ ಸಲ್ಲಿಸಲಾಯಿತು.ದಸರಾ ಆನೆಗಳನ್ನು ಸಾಲಾಗಿ ನಿಲ್ಲಿಸಿ ಅರ್ಚಕ ಪ್ರಹ್ಲಾದ್ ರಾವ್ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಈ ವೇಳೆ ಅಂಬಾರಿ ಅಂಬಾರಿ ಆನೆ ಅಭಿಮನ್ಯು, ಧನಂಜಯ, ಗೋಪಿ, ಭೀಮ, ಕಂಜನ್, ರೋಹಿತ್, ಏಕಲವ್ಯ, ವರಲಕ್ಷ್ಮಿ, ಲಕ್ಷ್ಮಿ, ಪ್ರಶಾಂತ, ಮಹೇಂದ್ರ, ಸುಗ್ರೀವ, ದೊಡ್ಡಹರವೆ ಲಕ್ಷ್ಮಿ ಮತ್ತು ಹಿರಣ್ಯಾ ಆನೆಗಳಿಗೆ ಪೂಜೆ ಸಲ್ಲಿಸಿ ಹೂವಿನ ಹಾರ ಹಾಕಿ, ಕಬ್ಬು, ಬೆಲ್ಲ, ಹಣ್ಣುಗಳನ್ನು ನೀಡಲಾಯಿತು.
ಪೂಜೆ ಸಮಯಕ್ಕೆ ಮಳೆ:ಅರಮನೆ ಆನೆ ಬಿಡಾರದಲ್ಲಿ ಮಧ್ಯಾಹ್ನ 12.30ಕ್ಕೆ ದಸರಾ ಆನೆಗಳನ್ನು ಗಣೇಶ ಚತುರ್ಥಿ ಅಂಗವಾಗಿ ಅರಣ್ಯ ಇಲಾಖೆಯು ವಿಶೇಷ ಪೂಜೆಗೆ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಆ ವೇಳೆಗಾಗಲೇ ಸಣ್ಣದಾಗಿ ಆಗಮಿಸಿದ ಮಳೆಯು ಜೋರಾಯಿತು. ಹೀಗಾಗಿ, ಆನೆಗಳಿಗಾಗಿ ನಿರ್ಮಿಸಿರುವ ಶೆಡ್ ನಲ್ಲಿ 14 ಆನೆಗಳನ್ನು ನಿಲ್ಲಿಸಿ ಪೂಜಾ ಕೈಂಕರ್ಯವನ್ನು ಪುರೋಹಿತರು ಆರಂಭಿಸಿದರು.
ಸ್ವಲ್ಪ ಸಮಯದ ಬಳಿಕ ಮಳೆ ಕಡಿಮೆ ಆಯಿತು. ಹೀಗಾಗಿ, ಆನೆಗಳನ್ನು ಆನೆ ಬಿಡಾರ ಆವರಣಕ್ಕೆ ಕರೆ ತಂದು ಸಾಲಾಗಿ ನಿಲ್ಲಿಸಿ ಪೂಜೆ ಸಲ್ಲಿಸಲಾಯಿತು.ಈ ವೇಳೆ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಮೈಸೂರು ವಲಯ ಮುಖ್ಯ ಅರಣ್ಯ ಸಂರಕ್ಷಾಧಿಕಾರಿ ಡಾ.ಎಂ. ಮಾಲತಿಪ್ರಿಯಾ, ಹುಲಿ ಯೋಜನೆ ನಿರ್ದೇಶಕ ಡಾ. ರಮೇಶ್ ಕುಮಾರ್, ಡಿಸಿಎಫ್ ಗಳಾದ ಡಾ.ಐ.ಬಿ. ಪ್ರಭುಗೌಡ, ಡಾ.ಕೆ.ಎನ್. ಬಸವರಾಜು, ಆರ್.ಎಫ್.ಓ ಸಂತೋಷ್ ಹೂಗಾರ್, ಆನೆ ವೈದ್ಯ ಡಾ. ಮುಜೀಬ್ ರೆಹಮಾನ್, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ, ಎಸಿಪಿ ಚಂದ್ರಶೇಖರ್ ಮೊದಲಾದವರು ಇದ್ದರು.
ಶೀಘ್ರದಲ್ಲೇ ನಿಶಾನೆ ಆನೆ ಗುರುತಿಸಲಾಗುವುದು:ಗಣೇಶ ಹಬ್ಬದ ಅಂಗವಾಗಿ ವಾಡಿಕೆಯಂತೆ ಆನೆಗಳಿಗೆ ಸಾಂಪ್ರದಾಯಿಕವಾಗಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಮೊದಲ ಹಂತದಲ್ಲಿ 9 ಆನೆಗಳು ಬಂದಿದ್ದವು. ಎರಡನೇ ಹಂತದಲ್ಲಿ 5 ಆನೆಗಳು ಆಗಮಿಸಿವೆ. ಪೂಜೆಯಲ್ಲಿ ಎಲ್ಲಾ ಆನೆಗಳು ಭಾಗಿಯಾಗಿವೆ. ಎಲ್ಲಾ ಆನೆಗಳ ಆರೋಗ್ಯ ಉತ್ತಮವಾಗಿದೆ ಎಂದು ಮೈಸೂರು ವಲಯ ಸಿಎಫ್ ಡಾ.ಎಂ. ಮಾಲತಿಪ್ರಿಯಾ ತಿಳಿಸಿದರು.
ಅರ್ಜುನ ನಿಶಾನೆ ಆನೆಯಾಗಿ ದಸರಾದಲ್ಲಿ ಭಾಗಿಯಾಗುತ್ತಿತ್ತು. ಈಗ ಆತನಿಲ್ಲದ ಕಾರಣ ಹೊಸ ನಿಶಾನೆ ಆನೆಯನ್ನು ಗುರುತಿಸಬೇಕಾಗಿದೆ. ಯಾವ ಆನೆಯನ್ನು ನಿಶಾನೆ ಆನೆಯನ್ನಾಗಿ ನೇಮಿಸಬೇಕೆಂದು ಶೀಘ್ರದಲ್ಲೇ ನಿರ್ಧಾರ ಮಾಡುತ್ತೇವೆ.ಯಾವ್ಯಾವ ಆನೆಗಳಿಗೆ ಯಾವ ಜವಾಬ್ದಾರಿ ನೀಡಬೇಕೆಂದು ನಿರ್ಧಾರ ಮಾಡುತ್ತೇವೆ. ಕಳೆದ ವರ್ಷ ಮಹೇಂದ್ರ, ಧನಂಜಯ ಆನೆಗಳಿಗೆ ಮರದ ಅಂಬಾರಿ ಕಟ್ಟಿ ತಾಲೀಮು ನಡೆಸಿದ್ದೆವು. ಈ ಬಾರಿಯೂ ಮಹೇಂದ್ರ, ಧನಂಜಯ ಆನೆಗಳಿಗೆ ಮರದ ಅಂಬಾರಿ ಕಟ್ಟಿ ತಾಲಿಮು ನಡೆಸಲಾಗುವುದು ಎಂದು ಹೇಳಿದರು.