ಉಪಕಾರ ಸ್ಮರಣೆ, ಕ್ಷಮಾ ಗುಣ ಪ್ರತಿಪಾದಿಸುವ ಜೈನಧರ್ಮ: ಬಸವರಾಜ ಬೊಮ್ಮಾಯಿ

KannadaprabhaNewsNetwork | Updated : Sep 12 2024, 01:51 AM IST

ಸಾರಾಂಶ

ಮಾನವ ಕುಲ ಸಾವಿರಾರು ವರ್ಷಗಳಿಂದ ಬೇರೆ ಬೇರೆ ಆಯಾಮದಲ್ಲಿ ಬೆಳೆದುಕೊಂಡು ಬಂದಿದೆ. ಮೂಲ ತತ್ವ ಮಾನವೀಯತೆ ಎನ್ನುವುದು ಎಂದೂ ಬದಲಾಗಿಲ್ಲ, ಬದಲಾಗುವುದೂ ಇಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಶಿಗ್ಗಾಂವಿ: ಉಪಕಾರ ಸ್ಮರಣೆ ಹಾಗೂ ಕ್ಷಮಾ ಗುಣವನ್ನು ಜೈನಧರ್ಮ ಪ್ರತಿಪಾದಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ತಾಲೂಕಿನ ದುಂಢಸಿ ಗ್ರಾಮದಲ್ಲಿ ಜೈನ ಸಮಾಜದ ವತಿಯಿಂದ ಏರ್ಪಡಿಸಿದ ಹಾವೇರಿ ಜಿಲ್ಲಾ ದಿಗಂಬರ ಜೈನ ಸಂಘದ ದಶ ಲಕ್ಷ ಮಹಾಪರ್ವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಎಲ್ಲ ಧರ್ಮಗಳ ಮೂಲ ಮಾನವ ಅಭಿವೃದ್ಧಿ, ಮಾನವೀಯತೆ ಎಲ್ಲ ಧರ್ಮಗಳ ಆಗರ, ನಾವೆಲ್ಲರೂ ಪರಸ್ಪರರು ಪ್ರೀತಿ-ವಿಶ್ವಾಸದಿಂದ ಬದುಕು ಸಾಗಿಸುವಂಥದ್ದು, ಮಾನವ ಉಳಿದೆಲ್ಲ ಪ್ರಾಣಿಗಳಿಗಿಂತ ಶ್ರೇಷ್ಠ, ದೇವರು ಮಾನವನಿಗೆ ಬುದ್ಧಿಶಕ್ತಿಯನ್ನು ಕೊಟ್ಟಿದ್ದಾನೆ. ಅದನ್ನು ಅಭಿವ್ಯಕ್ತಿ ಮಾಡುವ ಧ್ವನಿಯನ್ನು ಕೊಟ್ಟಿದ್ದಾನೆ ಎಂದು ಹೇಳಿದರು. ಮಾನವ ಕುಲ ಸಾವಿರಾರು ವರ್ಷಗಳಿಂದ ಬೇರೆ ಬೇರೆ ಆಯಾಮದಲ್ಲಿ ಬೆಳೆದುಕೊಂಡು ಬಂದಿದೆ. ಮೂಲ ತತ್ವ ಮಾನವೀಯತೆ ಎನ್ನುವುದು ಎಂದೂ ಬದಲಾಗಿಲ್ಲ, ಬದಲಾಗುವುದೂ ಇಲ್ಲ. ಮಾನವ ಧರ್ಮಕ್ಕೆ ಜಯವಾಗಲಿ ಅಂತ ಹೇಳಿದ್ದಾರೆ. ಮನುಷ್ಯ ಧರ್ಮಕ್ಕೆ ಜಯವಾಗಲಿ ಎಂದು ಹೇಳಿಲ್ಲ. ಕಾಮ, ಕ್ರೋಧ, ಮದ, ಮತ್ಸರದ ಸಂಕೋಲೆಯಲ್ಲಿ ಇರುವುದು ಮನುಷ್ಯ. ಈ ಸಂಕೋಲೆಯಿಂದ ಹೊರ ಬಂದು ಪ್ರೀತಿ, ವಿಶ್ವಾಸದ ಸಂಕೋಲೆಯಲ್ಲಿ ಸಿಲುಕುವುದು ಮಾನವ ಧರ್ಮ ಎಂದರು.

ಮನುಷ್ಯ ಧರ್ಮದಲ್ಲಿ ಎರಡು ಗುಣ ಮುಖ್ಯ. ಒಂದು ಉಪಕಾರ ಸ್ಮರಣೆ, ಯಾರು ಉಪಕಾರ ಸ್ಮರಣೆ ಮಾಡುವುದಿಲ್ಲವೋ ಅವರು ಮನುಷ್ಯರೇ ಅಲ್ಲ. ದಿನನಿತ್ಯ ಭಗವಂತನ ಸ್ಮರಣೆ ಮಾಡುವಾಗ ಭಗವಂತ ನನಗೆ ನೀನು ಅಸ್ತಿತ್ವ ಕೊಟ್ಟಿದ್ದೀಯಾ, ಪ್ರಕೃತಿ ಕೊಟ್ಟಿದ್ದೀಯಾ, ಬಂಧು-ಬಳಗ ಕೊಟ್ಟಿದ್ದೀಯಾ, ನಿನ್ನ ಉಪಕಾರ ಸ್ಮರಣೆ ನಾನು ಎಂದೂ ಮರೆಯುವುದಿಲ್ಲ ಎಂದು ಉಪಕಾರ ಸ್ಮರಣೆ ಮಾಡುವುದು. ಒಂದು ಸಣ್ಣ ಹುಲ್ಲು ಕಡ್ಡಿಯೂ ಉಪಕಾರ ಸ್ಮರಣೆ ಮಾಡುತ್ತದೆ. ಯಾರು ಉಪಕಾರ ಸ್ಮರಣೆ ಮಾಡುತ್ತಾರೆಯೋ ಅವರು ಸದಾ ಯಶಸ್ವಿಯಾಗುತ್ತಾರೆ ಎಂದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಸಮಾಜದ ಹಲವಾರು ಪ್ರಮುಖರು ಮಾತನಾಡಿದರು. ವಕೀಲರಾದ ಎಸ್.ಜಿ. ಪಾಟೀಲ, ಯಲಿಗಾರ ಸೇವಾ ಸಂಸ್ಥೆಯ ಅಧ್ಯಕ್ಷ ಶಶಿಧರ ಯಲಿಗಾರ, ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ಹೊಸೂರ ಗ್ರಾಪಂ ಉಪಾಧ್ಯಕ್ಷ ಧರಣೇಂದ್ರ ಪುಟ್ಟಣ್ಣವರ, ಗುತ್ತಿಗೆದಾರ ಸುನೀಲ ಆರೇಗೊಪ್ಪ, ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ತ್ರಿಲೋಕ ವಾಗಣ್ಣವರ, ಮಂಜುನಾಥ ತಡಸ, ಅಭಿನಂದನ, ಅವರಾದಿ, ಭರತ ಹಜಾರೆ ಉಪಸ್ಥಿತರಿದ್ದರು.

ಬಾಹುಬಲಿ ಅಕ್ಕಿ ಕಾರ್ಯಕ್ರಮ ಕಾರ್ಯಕ್ರಮ ನಿರೂಪಿಸಿದರು.

Share this article