ಕನ್ನಡಪ್ರಭ ವಾರ್ತೆ ಕೋಲಾರಜಗತ್ತಿಗೆ ಶಾಂತಿ, ಅಹಿಂಸೆಯ ಸಂದೇಶ ಸಾರಿದ ಮಹಾಪುರುಷ ಭಗವಾನ್ ಮಹಾವೀರರ ಆದರ್ಶಗಳು ಸಮಾಜ ಎಲ್ಲ ವರ್ಗಗಳಿಗೂ ಅನುಕರಣೀಯ ಎಂದು ಅಪರ ಜಿಲ್ಲಾಧಿಕಾರಿ ಮಂಗಳಾ ತಿಳಿಸಿದರು.ನಗರದ ಟಿ.ಚನ್ನಯ ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಜೈನರ ಸಂಘದ ವತಿಯಿಂದ ನಡೆದ ಮಹಾವೀರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜೈನ ಸಿದ್ದಾಂತದಲ್ಲಿ ಋಷಿ ಮುನಿಗಳಿಗೆ ಹೆಚ್ಚಿನ ಗೌರವವಿದೆ. ಸ್ತ್ರೀಯರು ಪುರುಷರಿಗೆ ಸಮಾನರಾಗಿದ್ದಾರೆ ಎಂದು ನುಡಿದರು.ಅಹಿಂಸೆ ಪ್ರತಿಪಾದಿಸುವ ಧರ್ಮ
ಜೈನ ಧರ್ಮ ಎಂದೂ ಹಿಂಸೆಗೆ ಪ್ರೋತ್ಸಾಹ ನೀಡಿಲ್ಲ. ಹಿಂಸೆಯ ಸಂಕಲ್ಪ ಮಾಡುವುದೇ ಪಾಪ ಎಂಬ ಸಂದೇಶ ಮಾಡಿರುವ ಈ ಧರ್ಮ ಸಾಮಾಜಿಕ ಬದಲಾವಣೆಯಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ತಿಳಿಸಿದರು.ನಗರಠಾಣೆ ವೃತ್ತ ನಿರೀಕ್ಷಕ ಸದಾನಂದ ಮಾತನಾಡಿ, ಎರಡೂವರೆ ಸಾವಿರ ವರ್ಷಗಳ ಇತಿಹಾಸವಿರುವ ಜೈನ ಧರ್ಮದ ವಿಚಾರಗಳು ಸಮಾಜಕ್ಕೆ ಮುಟ್ಟುವಂತಾಗಬೇಕು. ಜೈನ ಧರ್ಮದಲ್ಲಿ ಮಹಾವೀರ, ಭರತ ಸೇರಿದಂತೆ ನೂರಾರು ಮಹಾಪುರುಷರು ಹುಟ್ಟಿ ಸಮಾಜಕ್ಕೆ ಉತ್ತಮ ವಿಚಾರಗಳನ್ನು ಸಾರಿದ್ದಾರೆ. ಅವು ಕೃತಿ, ಗ್ರಂಥ, ಓಲೆಗರಿಗಳಿಗೆ ಸೀಮಿತವಾಗದೆ ಪುಸ್ತಕ ರೂಪದಲ್ಲಿ ಬಂದು ಮಕ್ಕಳು ಓದುವಂತಾಗಬೇಕು ಎಂದರು.ಮಹಾವೀರರ ಪ್ರತಿಮೆ ಮೆರವಣಿಗೆವೇದಿಕೆ ಕಾರ್ಯಕ್ರಮಕ್ಕೂ ಮೊದಲು ಮಹಾವೀರ ಜಯಂತಿ ಪ್ರಯುಕ್ತ ಜೈನ ಸಮುದಾಯದವರು ನಗರದ ನಾನಾ ಬೀದಿಗಳಲ್ಲಿ ಮಹಾವೀರ ಪ್ರತಿಮೆಯನ್ನು ಹೂವಿನ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಮಹಾವೀರ ಜಯಂತಿಯನ್ನು ಸಂಭ್ರಮದಿಂದ ಆಚರಿಸಿದರು.
ಭಗವಾನ್ ಮಹಾವೀರರು ಬೋಧಿಸಿದ ಪಂಚಾಮೃತ ತತ್ವಗಳಾದ ಸತ್ಯ, ಅಹಿಂಸೆ, ಅಪರಿಗೃಹ, ಅಶೌರ್ಯ, ಬ್ರಹ್ಮಚಾರ್ಯ ತತ್ವಗಳನ್ನು ಸಾರಲಾಯಿತು. ನೀನು ಬದುಕು ಬದುಕಲು ಬೀಡು. ಲೋಕಕಲ್ಯಾಣಕ್ಕೋಸ್ಕರ ಕಾಲ ಕಾಲಕ್ಕೆ ಮಳೆಯಾಗಿ ಬೆಳೆಯಾಗಲಿ ದುಷ್ಟಶಕ್ತಿಗಳೆಲ್ಲ ಹೋಗಲಿ ಎನ್ನುವ ತತ್ವಗಳನ್ನು ಸಾರಲಾಯಿತು.