ಹುಬ್ಬಳ್ಳಿ: ಮಹದಾಯಿ ನೀರಿಗಾಗಿ ಕಳೆದ ಸರಿಸುಮಾರು 10 ವರ್ಷದಿಂದ ನಿರಂತರ ಧರಣಿ ನಡೆಸುತ್ತಿರುವ ರೈತಸೇನೆ ಕರ್ನಾಟಕ ಇದೀಗ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದೆ.
ಕೂಡಲೇ ನ್ಯಾಯಾಧೀಕರಣದ ತೀರ್ಪಿನಂತೆ ನೀರು ಹರಿಸಲು ಬೇಕಾದ ಅನುಮತಿ ಕೊಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೇಳಿಕೊಂಡಿದೆ. ಅಲ್ಲದೇ, ಅನುಮತಿ ಕೊಡದೇ ಇರುವುದಕ್ಕೆ ಕಾರಣವೇನು ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಿದೆ. ಈ ನಡುವೆ ಮಹದಾಯಿ ನೀರಿಗಾಗಿ ಕೇಂದ್ರ ಸರ್ಕಾರದ ವಿರುದ್ಧ ರಾಷ್ಟ್ರಪತಿ ಭವನದ ಎದುರು ಪರೇಡ್ ನಡೆಸಲು ರೈತ ಸೇನೆ ಕರ್ನಾಟಕ ಚಿಂತನೆ ನಡೆಸಿದೆ.ಮಹದಾಯಿ ನೀರು ಹಂಚಿಕೆ ಕುರಿತಂತೆ 2018ರಲ್ಲೇ ನ್ಯಾಯಾಧೀಕರಣ ತೀರ್ಪು ನೀಡಿದೆ. ಕೇಂದ್ರ ಸರ್ಕಾರವೂ ಅದಕ್ಕೆ ಗೆಜೆಟ್ ನೋಟಿಫಿಕೇಶನ್ ಕೂಡ ಮಾಡಿದೆ. ಆದರೆ ಈವರೆಗೂ ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಸಚಿವಾಲಯದಿಂದ ಅನುಮತಿ ಸಿಗುತ್ತಿಲ್ಲ. ಇದಕ್ಕೆ ಕಾರಣ ಕೇಂದ್ರ ಸರ್ಕಾರ ಕೊಡುತ್ತಿಲ್ಲ. ಮಹದಾಯಿ ಯೋಜನೆ ಜಾರಿಗೆ ಬೇಕಾದ ಪ್ರಸ್ತಾವನೆಯನ್ನೆಲ್ಲ ರಾಜ್ಯ ಸರ್ಕಾರ ಕೇಂದ್ರಕ್ಕೆ ಸಲ್ಲಿಸಿದೆ. ಯಾವುದೇ ಲೋಪದೋಷಗಳಾಗಿಲ್ಲ ಎಂಬ ವಿಷಯ ಅರ್ಜಿಯಲ್ಲಿ ತಿಳಿಸಲಾಗಿದೆ.
ಕೇಂದ್ರ ಪರಿಸರ ಹಾಗೂ ಅರಣ್ಯ ಇಲಾಖೆ ಸಚಿವ ಭೂಪೇಂದ್ರ ಯಾದವ ಅವರನ್ನೇ ಪಾರ್ಟಿಯನ್ನಾಗಿ ಮಾಡಲಾಗಿದೆ. ಅನುಮತಿ ಕೊಡದೇ ಇರುವುದಕ್ಕೆ ಕಾರಣ ತಿಳಿಸುವಂತೆ ಕೋರಿದೆ.ಈ ಕುರಿತಂತೆ ಪಿಐಎಲ್ ಹಾಕಿರುವ ರೈತ ಸೇನೆ ಕರ್ನಾಟಕದ ಅಧ್ಯಕ್ಷ ವೀರೇಶ ಸೊಬರದಮಠ ಕನ್ನಡಪ್ರಭದೊಂದಿಗೆ ಮಾತನಾಡಿ, ಮಹದಾಯಿ ಯೋಜನೆಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ವಿನಾಕಾರಣ ವಿಳಂಬ ನೀತಿ ಅನುಸರಿಸುತ್ತಿದೆ. ರಾಜ್ಯ ಸರ್ಕಾರದಿಂದ ಸಲ್ಲಿಸಬೇಕಾದ ದಾಖಲೆಗಳನ್ನೆಲ್ಲ ಕೊಟ್ಟಿದೆ. ಆದರೂ ಅನುಮತಿ ಏಕೆ ಕೊಡುತ್ತಿಲ್ಲ ಎಂಬುದನ್ನು ಪ್ರಶ್ನಿಸಿ ಪಿಐಎಲ್ ಹಾಕಲಾಗಿದೆ ಎಂದರು.
ಸುಪ್ರೀಂಕೋರ್ಟ್‌ನಲ್ಲಿದೆ ಎಂದು ಸುಳ್ಳು ಹೇಳಿ ಜನರ ದಾರಿ ತಪ್ಪಿಸುವ ಕೆಲಸ ರಾಜಕಾರಣಿಗಳು ಮಾಡುತ್ತಿದ್ದಾರೆ. ಆದರೆ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಇದೆಯೇ ಹೊರತು ನ್ಯಾಯಾಧೀಕರಣ ನೀಡಿರುವ ನೀರಿನ ಹಂಚಿಕೆ ಬಳಸಿಕೊಳ್ಳುವುದಕ್ಕೆ ಸಮಸ್ಯೆಯಿಲ್ಲ ಎಂದು ಸ್ಪಷ್ಟಪಡಿಸಿದರು.ಟೈಗರ್ ಕಾರಿಡಾರ್ ಕೂಡ ಇಲ್ಲ. ಈ ಬಗ್ಗೆಯೂ ಸುಳ್ಳು ಹೇಳಲಾಗುತ್ತಿದೆ. ಟೈಗರ್ ಕಾರಿಡಾರ್ ಇದ್ದರೆ ಹತ್ತಾರು ವರ್ಷಗಳಿಂದ ಹಲವು ರೇಸಾರ್ಟ್‌ಗಳು ಆಗಿವೆ, ಅವಕ್ಕೆ ಅದ್ಹೇಗೆ ಅನುಮತಿ ಸಿಕ್ಕಿದೆ ಎಂದು ಪ್ರಶ್ನಿಸಿದ್ದಾರೆ. ಇದೆಲ್ಲವೂ ರಾಜಕಾರಣಿಗಳ ಆಟ ಅಷ್ಟೇ. ರಾಜಕಾರಣಿಗಳಿಗೆ ಇಚ್ಚಾಶಕ್ತಿ ಇಲ್ಲ. ರಾಜಕೀಯ ಜಿದ್ದಾಜಿದ್ದಿಗೆ ಬಿದ್ದಿದ್ದಾರೆ. ಹೀಗಾಗಿ ಅನುಮತಿ ಕೊಡಿಸುತ್ತಿಲ್ಲ. ಕೂಡಲೇ ಅನುಮತಿ ಕೊಡಬೇಕು. ಇಲ್ಲವೇ ಅನುಮತಿ ಕೊಡದೇ ಇರುವುದಕ್ಕೆ ಕಾರಣ ತಿಳಿಸಬೇಕು ಎಂದರು.
ರಾಷ್ಟ್ರಪತಿ ಭವನ ಎದುರು ಪರೇಡ್: ಹಿಂದೆ 232 ಜನ ದಯಾಮರಣಕ್ಕೆ ಕೋರಿದ್ದೇವು. ಇದೀಗ ಕಾನೂನಾತ್ಮಕ ಹೋರಾಟದೊಂದಿಗೆ ರಾಷ್ಟ್ರಪತಿ ಭವನ ಎದುರಿಗೆ ಪರೇಡ್ ಕೂಡ ನಡೆಸಲು ಚಿಂತನೆ ನಡೆಸಿದ್ದೇವೆ. ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.