ಕನ್ನಡಪ್ರಭ ವಾರ್ತೆ ಖಾನಾಪುರ
ಲಿಂಗನಮಠದ ಬಳಿ ಜೈನ ಯುವ ಸಂಘಟನೆಯ ಅಧ್ಯಕ್ಷ ರಾಜಕುಮಾರ ಕಂಚಿ ಹಾಗೂ ಇತರರು ಮುನಿಗಳನ್ನು ತಾಲೂಕಿನ ಜೈನಸಮಾಜದ ಪರವಾಗಿ ಪೂಜೆ ಸಲ್ಲಿಸಿ ಸ್ವಾಗತಿಸಿದರು. ಲಿಂಗನಮಠದಿಂದ ಹೊರಟ ಮುನಿಗಳ ತಂಡ ಕಕ್ಕೇರಿ, ಬೀಡಿ, ಮುಗಳಿಹಾಳ, ಅವರೊಳ್ಳಿ ಮಾರ್ಗವಾಗಿ ಚಿಕದಿನಕೊಪ್ಪ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣಕ್ಕೆ ಆಗಮಿಸಿತು. ಶಾಲೆಯ ಆವರಣದಲ್ಲಿ ವಾಸ್ತವ್ಯ ಹೂಡಿದ ಜೈನಮುನಿಗಳು ರಾತ್ರಿ ಧರ್ಮಸಭೆ ನಡೆಸಿ ಭಕ್ತರಿಗೆ ಮಾರ್ಗದರ್ಶನ ನೀಡಿದರು. ಬುಧವಾರ ಪ್ರಾತಃಕಾಲ ತಮ್ಮ ಪ್ರಾಥಮಿಕ ವಿಧಿಗಳನ್ನು ಮತ್ತು ಪೂಜಾ ಕಾರ್ಯ ಪೂರೈಸಿ ಚಿಕದಿನಕೊಪ್ಪದಿಂದ ಬೀಳ್ಕೊಟ್ಟು ಪಾರಿಶ್ವಾಡ, ಬಡಸ, ಹಿರೇಬಾಗೇವಾಡಿ ಮಾರ್ಗವಾಗಿ ಪುಣೆ-ಬೆಂಗಳೂರು ಹೆದ್ದಾರಿ ತಲುಪಿ ತಮ್ಮ ಪ್ರವಾಸ ಮುಂದುವರಿಸಿದರು. ಈ ಸಂದರ್ಭದಲ್ಲಿ ಆಚಾರ್ಯ ಕುಂತಿಸಾಗರ ಮುನಿಗಳು, ಜೈನ ಯುವ ಸಂಘಟನೆಯ ಕಾರ್ಯಕರ್ತರು ಹಾಗೂ ಜೈನ ಬಾಂಧವರು ಇದ್ದರು.