ಕನ್ನಡಪ್ರಭ ವಾರ್ತೆ ಹಾವೇರಿ
ಅತ್ತ ಅಯೋಧ್ಯೆಯಲ್ಲಿ ರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನೆ ವಿಜೃಂಭಣೆಯಿಂದ ನಡೆಯುತ್ತಿದ್ದರೆ, ಜಿಲ್ಲೆಯ ದೇವಸ್ಥಾನಗಳಲ್ಲಿ ರಾಮತಾರಕ ಹೋಮ, ರಾಮ ಭಜನೆ, ಜಪ, ವಿಶೇಷ ಪೂಜೆ ಶ್ರದ್ಧಾ ಭಕ್ತಿಯಿಂದ ನಡೆದವು. ನಗರ, ಗ್ರಾಮೀಣ ಪ್ರದೇಶಗಳೆನ್ನದೇ ಓಣಿ ಓಣಿಗಳಲ್ಲಿ ರಾಮನ ಭಾವಚಿತ್ರವಿಟ್ಟು ಪೂಜೆ ನೆರವೇರಿಸಲಾಯಿತು. ಜಿಲ್ಲಾದ್ಯಂತ ಹಬ್ಬದ ವಾತಾವಣ ನಿರ್ಮಾಣಗೊಂಡು ವಿವಿಧ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು.
ನಗರದ ರಾಮ ಮಂದಿರ, ವಿವಿಧ ದೇವಸ್ಥಾನ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಕ್ತಿ ಸಿಂಚನದಲ್ಲಿ ಮಿಂದು ಪುಳಕಿತರಾದರು.ವಿದ್ಯುತ್ ಅಲಂಕಾರದಿಂದ ಸಿಂಗರಿಸಿದ್ದ ನಗರದ ವಿವಿಧ ದೇವಸ್ಥಾನಗಳಲ್ಲಿ ಬೆಳ್ಳಂಬೆಳಗ್ಗೆ ವಿಶೇಷ ಪೂಜೆ ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಇಡೀ ದಿನ ನಡೆದವು. ಶ್ರೀ ರಾಮ ಹಾಗೂ ಹನುಮನ ಧ್ವಜ ಹಿಡಿದುಕೊಂಡು ರಾಮ ಭಕ್ತರು ಜೈ ಶ್ರೀ ರಾಮ, ಜೈ ಹನುಮಾನ ಎಂದು ಘೋಷಣೆ ಕೂಗಿ ಭಕ್ತಿಯ ಪರಾಕಾಷ್ಠೆ ಮೆರೆದರು. ಪ್ರತಿ ಮನೆ ಮನೆಗಳಲ್ಲೂ ವಿಶೇಷವಾಗಿ ರಾಮನ ಪೂಜೆ, ಪುರಸ್ಕಾರ ನೆರವೇರಿಸಲಾಯಿತು. ಎಲ್ಲರ ಮನೆಯಲ್ಲಿ ಒಂದು ರೀತಿಯ ಹಬ್ಬದ ವಾತಾವರಣ ಕಂಡು ಬಂದಿತು.
ಹಾವೇರಿಯ ಶ್ರೀರಾಮ ದೇವಸ್ಥಾನದಲ್ಲಿ ಬೆಳಗ್ಗೆ ೮ಕ್ಕೆ ಶ್ರೀರಾಮನಿಗೆ ಅಭಿಷೇಕ, ಶ್ರೀರಾಮ ತಾರಕ ಯಾಗದ ಪುಣ್ಯಾಹ ವಾಚನ, ತ್ರಯೋದಶ ಸಹಸ್ರ ಹೋಮ, ಮಧ್ಯಾಹ್ನ ಪೂರ್ಣಾಹುತಿ ನಡೆಯಿತು. ನಂತರ ಭಕ್ತಾದಿಗಳಿಗೆ ಮಹಾಪ್ರಸಾದ ವಿತರಿಸಲಾಯಿತು. ಸಂಜೆ ಮಹಿಳಾ ಮಂಡಳದವರಿಂದ ರಾಮಾಯಣದ ಆಯ್ದಭಾಗ, ಸೀತೆ ಪೂನೀತೆ ನಾಟಕ ಪ್ರದರ್ಶನಗೊಂಡಿತು. ರಾಮಜನ್ಮದ ಗೀತೆಯೊಂದಿಗೆ ಕೋಲಾಟ, ಅಷ್ಟಾವಧಾನ, ಮಹಾಮಂಗಳಾರತಿ ಕಾರ್ಯಕ್ರಮ ಸಂಭ್ರಮದಿಂದ ನೆರವೇರಿತು.
ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಗಾಯತ್ರಿ ತಪೋಭೂಮಿಯಲ್ಲಿ ಅಯೋಧ್ಯೆ ಬಾಲರಾಮ್ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿದವು. ಬೆಳಗ್ಗೆ ರಾಮ ತಾರಕ ಹಾಗೂ ಗಾಯತ್ರಿ ಹೋಮ, ಶ್ರೀ ರಾಮ ಭಜನೆ, ರಾಮ ರಕ್ಷ ಪಠಣ, ಹನುಮಾನ್ ಚಾಲೀಸ್ ಪಾಠಣ ನಡೆಯಲಿತು. ಸಂಜೆ ೭ಕ್ಕೆ ವಿಜೃಂಭಣೆಯಿಂದ ದೀಪೋತ್ಸವ ನಡೆಯಿತು.
ಶ್ರೀರಾಮ ಭಾವಚಿತ್ರದ ಮೆರವಣಿಗೆ:
ಶ್ರೀರಾಮ ದೇವರ ಗುಡಿಯಿಂದ ಸಕಲ ವಾದ್ಯ ವೈಭವದೊಂದಿಗೆ ಆರಂಭಗೊಂಡ ಮೆರವಣಿಗೆ ಗದ್ದಿಗೇರ ಓಣಿ, ಕಾಮಣ್ಣನ ಕಟ್ಟೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಶ್ರೀರಾಮ ದೇವರ ಗುಡಿಗೆ ಮರಳಿತು. ಮೆರವಣಿಗೆಯಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಂಡು ಜೈ ಶ್ರೀರಾಮ ಘೋಷಣೆ ಕೂಗಿದರು.
ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಬಸ್ ನಿಲ್ದಾಣದ ಮುಂಭಾಗ ಗಣೇಶೋತ್ಸವ ಆಚರಿಸುವ ಸ್ಥಳದಲ್ಲಿ ಶ್ರೀರಾಮನ ಭಾವಚಿತ್ರವಿಟ್ಟು ಪೂಜೆಗೆ ಮುಂದಾಗಿದ್ದ ಐವರು ಆರ್‌ಎಸ್‌ಎಸ್ ಹಾಗೂ ಹಿಂದೂ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದ ಸೋಮವಾರ ಘಟನೆ ನಡೆದಿದೆ.