ಕನ್ನಡಪ್ರಭ ವಾರ್ತೆ ತುಮಕೂರು
ನಗರ ಸೇರಿದಂತೆ ಜಿಲ್ಲೆಯಾದ್ಯಂತ ಎಲ್ಲೆಡೆ ರಾಮನಾಮ ಸ್ಮರಣೆ ಮೊಳಗಿದ್ದು, ಮಧ್ಯಾಹ್ನ 12.30 ಕ್ಕೆ ಅಯೋಧ್ಯೆಯಲ್ಲಿ ನಡೆದ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಶುಭ ಸಂದರ್ಭದಲ್ಲಿ ಶ್ರೀರಾಮ ದೇವಾಲಯಗಳಲ್ಲಿ ವಿಶೇಷ ಪೂಜಾದಿಗಳು, ಹೋಮ ಹವನಗಳು ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿದವು.
ಈಗಾಗಲೇ ಜಿಲ್ಲೆಯಾದ್ಯಂತ ಮನೆ ಮನೆಗೆ ಅಯೋಧ್ಯೆ ಮಂತ್ರಾಕ್ಷತೆ ತಲುಪಿಸಲಾಗಿದ್ದು, ಪ್ರತಿ ದೇವಾಲಯ, ಮನೆ ಮನೆಗಳಲ್ಲೂ ದೀಪ ಹಚ್ಚಿ, ಬಣ್ಣ ಬಣ್ಣದ ಚಿತ್ತಾಕರ್ಷಕ ರಂಗೋಲಿ ಹಾಕಿ ವಿಶೇಷ ಭಕ್ತಿಯನ್ನು ಶ್ರೀರಾಮನಿಗೆ ಸಮರ್ಪಿಸಲಾಯಿತು.ನಗರದ ಬಾರ್‌ಲೈನ್ ರಸ್ತೆಯಲ್ಲಿರುವ ಶ್ರೀರಾಮ ದೇವಾಲಯ, ಹನುಮಂತಪುರ, ಬನಶಂಕರಿ, ಮರಳೂರು, ಎಸ್.ಎಸ್. ಪುರಂನ ಸೀತಾ ರಾಮ ಮಂದಿರ, ಶೆಟ್ಟಿಹಳ್ಳಿ ಗೇಟ್‌ನ ಅಭಯ ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ವಿವಿಧ ಬಡಾವಣೆಗಳಲ್ಲಿರುವ ಶ್ರೀರಾಮ, ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಬೆಳಿಗ್ಗೆಯಿಂದಲೇ ಭಜನೆಗಳು ನಡೆದಿದ್ದು, ಭಕ್ತರಿಂದ ಶ್ರೀರಾಮ ನಾಮ ಸ್ಮರಣೆ ಮೊಳಗಿತು.
ಬಾರ್‌ಲೈನ್ ರಸ್ತೆಯ ಶ್ರೀರಾಮಮಂದಿರದಲ್ಲಿ ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾ ಪ್ರತಿಷ್ಠಾಪನೆಯ ನೇರ ಪ್ರಸಾರದ ಕ್ಷಣವನ್ನು ಕಣ್ತುಂಬಿಕೊಳ್ಳಲು ಎಲ್‌ಇಡಿ ವ್ಯವಸ್ಥೆ ಮಾಡಲಾಗಿತ್ತು. ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ಶ್ರೀರಾಮನ ಘೋಷಣೆಗಳನ್ನು ಕೂಗಿದ ಭಕ್ತರ ಕಣ್ಣಲ್ಲಿ ಆನಂದಬಾಷ್ಪ ಕಂಡು ಬಂತು.
ಅಮರಜ್ಯೋತಿ ನಗರದಲ್ಲಿರುವ ಶಿರಡಿಸಾಯಿಬಾಬ ಮಂದಿರದಲ್ಲಿ ವಿಶೇಷ ಪೂಜಾ ಕೈಂಕರ್ಯ, ಭಜನೆಗಳು ಮೊಳಗಿದ್ದು, ಪ್ರಸಾದ ವಿತರಣೆ ಮಾಡಲಾಯಿತು. ಶೆಟ್ಟಿಹಳ್ಳಿ ಮುಖ್ಯ ರಸ್ತೆಯಲ್ಲಿರುವ ವಿಶಾಲಾಕ್ಷಮ್ಮ ಸದಾಶಿವಯ್ಯ ಸಭಾ ಮಂಟಪದಲ್ಲಿ ಅಯೋಧ್ಯೆಯ ರಾಮ ಮಂದಿರ ಹೋರಾಟದಲ್ಲಿ ಭಾಗವಹಿಸಿದ್ದ ಕರಸೇವಕರ ಮಿಲನ ಕಾರ್ಯಕ್ರಮ ಸಹ ಇದೇ ವೇಳೆ ನಡೆಯಿತು.
ರಾಮಮಂದಿರ ಉದ್ಘಾಟನೆ ಅಂಗವಾಗಿ ನಗರದ ಎಲ್ಲೆಡೆ ಆಟೋಗಳಲ್ಲಿ ಶ್ರೀರಾಮ ಮತ್ತು ರಾಮಮಂದಿರದ ಚಿತ್ರ ಇರುವ ಬಾವುಟಗಳು ರಾರಾಜಿಸುತ್ತಿದ್ದವು. ನಗರದ ವಿವಿಧ ಬಡಾವಣೆ, ರಸ್ತೆಗಳಲ್ಲಿ ಶ್ರೀರಾಮನ ಬೃಹತ್ ಕಟೌಟ್‌ಗಳು, ಫ್ಲೆಕ್ಸ್‌ಗಳನ್ನು ಹಾಕಲಾಗಿದ್ದು, ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.