ಕೊಪ್ಪ: ಅಮರಶಿಲ್ಪಿ ಜಕಣಾಚಾರಿ ಸಾಧನೆ ಸಮಾಜಕ್ಕೆ ದೊಡ್ಡ ಕೊಡುಗೆಯಾಗಿದೆ. ಇಂತಹ ಸಾಧಕರನ್ನು ಪಡೆದಿರುವುದಕ್ಕೆ ಸಮುದಾಯ ಹೆಮ್ಮೆ ಪಡಬೇಕು ಎಂದು ವಾಗ್ಮಿ ಅರುಣ್ ಆಚಾರ್ಯ ಹೇಳಿದರು.
ಕೊಪ್ಪ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ನಡೆದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಅಮರಶಿಲ್ಪಿ ಜಕಣಾಚಾರಿಯವರ ಶಿಲ್ಪಕಲೆ, ಕೆತ್ತನೆ ನೈಪುಣ್ಯತೆ ನಾಡಿನ ಹಿರಿಮೆಯ ಪ್ರತೀಕ. ಬೇಲೂರು ಚೆನ್ನಕೇಶವ ದೇವಾಲಯದ ಶಿಲ್ಪಕಲೆ, ಕೆತ್ತನೆ, ಡಂಕಣ್ಣ ಮತ್ತು ಜಕಣಾಚಾರಿಯವರ ನೈಪುಣ್ಯತೆಗೆ ಹಿಡಿದ ಕೈಗನ್ನಡಿ. ಹೊಯ್ಸಳ ಅರಸ ವಿಷ್ಣುವರ್ಧನನ ಕಾಲದಲ್ಲಿ ಬೇಲೂರು, ಹಳೇಬೀಡು ದೇವಾಲಯಗಳ ಶಿಲ್ಪಕಲೆಗಳ ಕೆತ್ತನೆ ಇಬ್ಬರು ಮಹಾನ್ ಶಿಲ್ಪಿಗಳ ಕೈಗಳಿಂದ ಅರಳಿದೆ. ನಾಗರಶೈಲಿ ಮತ್ತು ದ್ರಾವಿಡ ಶೈಲಿ ಸೇರಿಸಿ ವೇಸರ ಶೈಲಿಯಲ್ಲಿ ಸೋಮನಾಥ ದೇವಸ್ಥಾನದ ಕೆತ್ತನೆ ಕೆಲಸವನ್ನು ಮಾಡಲಾಗಿದೆ. ವಿಶ್ವಕರ್ಮ ಸಮುದಾಯದಲ್ಲಿ ಮರಗೆಲಸ, ಅತೀ ಸೂಕ್ಷ್ಮತೆಯ ಕುಸುರಿ ಕೆಲಸದ ಮೂಲಕ ಚಿನ್ನ ಬೆಳ್ಳಿ ಆಭರಣಗಳ ತಯಾರಿಕೆ, ವಿಗ್ರಹಗಳ ತಯಾರಿಕೆ ಈ ರೀತಿಯ ಹಲವಾರು ಕೌಶಲ್ಯತೆಗಳಿದ್ದು ಯುವ ಜನತೆ ಶಿಕ್ಷಣದ ಜೊತೆಗೆ ಈ ಕೌಶಲ್ಯತೆಗಳನ್ನು ರೂಢಿಸಿಕೊಂಡು ಇದನ್ನು ಉಳಿಸಿ ಬೆಳೆಸಬೇಕು ಎಂದ ಅವರು ಸಮುದಾಯವು ಸಂಘಟಿತರಾಗಿ ಸರ್ಕಾರದಿಂದ ಸಿಗುವ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.ತಹಶೀಲ್ದಾರ್ ಮಂಜುಳಾ ಬಿ.ಹೆಗಡಾಳ ಮಾತನಾಡಿ, ಜಕಣಾಚಾರಿ ಸಂಸ್ಮರಣಾ ದಿನಾಚರಣೆಯ ಶುಭಾಶಯ ಕೋರಿದರು.
ಗುಣವಂತೆ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಧಾಕರ್ ಆಚಾರ್ಯ, ಗೌರವಾಧ್ಯಕ್ಷ ಉಮೇಶ್ ಆಚಾರ್ಯ, ಮೇಲಿನಪೇಟೆ ವಿಶ್ವಕರ್ಮ ಸಮಾಜದ ಅಧ್ಯಕ್ಷ ಉಪೇಂದ್ರ ಆಚಾರ್ಯ, ಕುದುರೆಗುಂಡಿ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಜಯರಾಮ್ ಆಚಾರ್ಯ, ವಿಶ್ವಕರ್ಮ ಮಹಿಳಾ ಮಂಡಳಿಯ ಅಧ್ಯಕ್ಷ ಶಾಲಿನಿ ಸಂಜೀವ ಆಚಾರ್ಯ, ಲಲಿತಾ ರಾಮಚಂದ್ರ ಆಚಾರ್ಯ, ಗುಣವಂತೆ ವಿಶ್ವಕರ್ಮ ಯುವಕ ಸಂಘದ ಅಧ್ಯಕ್ಷ ರವಿ ಆಚಾರ್ಯ, ಕಸಾಪ ಅಧ್ಯಕ್ಷೆ ಎಸ್.ಎನ್. ಚಂದ್ರಕಲಾ, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.