ಜಕಣಾಚಾರಿ ಶಿಲ್ಪಕಲೆ ಭಾರತೀಯ ಇತಿಹಾಸದ ಶ್ರೀಮಂತಿಕೆಗೆ ಕೈಗನ್ನಡಿ: ಸಿ.ಟಿ.ರವಿ

KannadaprabhaNewsNetwork |  
Published : Jan 02, 2026, 02:15 AM IST
ಚಿಕ್ಕಮಗಳೂರಿನ ಕುವೆಂಪು ಕಲಾ ಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿಯ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮವನ್ನು ಸಿ.ಟಿ. ರವಿ ಅವರು ಉದ್ಘಾಟಿಸಿದರು. | Kannada Prabha

ಸಾರಾಂಶ

ಚಿಕ್ಕಮಗಳೂರುಬೇಲೂರು, ಹಳೆಬೀಡು, ಅಮೃತಾಪುರ ಸೇರಿದಂತೆ ರಾಜ್ಯದ ವಿವಿಧೆಡೆ ಅಮರ ಶಿಲ್ಪಿ ಜಕಣಾಚಾರಿ ಕೌಶಲ್ಯದಲ್ಲಿ ಮೂಡಿ ಬಂದಿರುವ ಶಿಲ್ಪಕಲೆ ಭಾರತೀಯ ಇತಿಹಾಸದ ಶ್ರೀಮಂತಿಕೆಗೆ ಕೈಗನ್ನಡಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

- ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿಯ ಸಂಸ್ಮರಣಾ ದಿನಾಚರಣೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಬೇಲೂರು, ಹಳೆಬೀಡು, ಅಮೃತಾಪುರ ಸೇರಿದಂತೆ ರಾಜ್ಯದ ವಿವಿಧೆಡೆ ಅಮರ ಶಿಲ್ಪಿ ಜಕಣಾಚಾರಿ ಕೌಶಲ್ಯದಲ್ಲಿ ಮೂಡಿ ಬಂದಿರುವ ಶಿಲ್ಪಕಲೆ ಭಾರತೀಯ ಇತಿಹಾಸದ ಶ್ರೀಮಂತಿಕೆಗೆ ಕೈಗನ್ನಡಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು. ನಗರದ ಕುವೆಂಪು ಕಲಾ ಮಂದಿರದಲ್ಲಿ ಗುರುವಾರ ಜಿಲ್ಲಾಡಳಿತದಿಂದ ಆಯೋಜಿಸಲಾದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಶಿಲ್ಪಿ ಕೈಯಲ್ಲಿ ದೊರೆತ ಶಿಲೆ ಮಾತ್ರ ಶಿಲ್ಪವಾಗುತ್ತದೆ. ಎಲ್ಲರೂ ಅಮರ ಶಿಲ್ಪಿಗಳಾಗಲು ಸಾಧ್ಯವಿಲ್ಲ. ಕೌಶಲ್ಯದ ಜೊತೆಗೆ ತಪಸ್ಸಿನ ಶಕ್ತಿ ಇರುವವರು ಮಾತ್ರ ಅಮರ ಶಿಲ್ಪಿಗಳು ಆಗಬಲ್ಲರು. ಜಕಣಾಚಾರಿಯವರಿಗೆ ಕೌಶಲ್ಯ, ತಪಸ್ಸು ಹಾಗೂ ಅಪಾರ ಶ್ರದ್ಧೆಯಿತ್ತು. ಈ ಕಾರಣಕ್ಕಾಗಿ ಅಮರ ಶಿಲ್ಪಿ ಜಕಣಾಚಾರಿ ಎಂದು ಹೆಸರುವಾಸಿಯಾಗಿದ್ದಾರೆ. ಜಕಣಾಚಾರಿಯವರಿಗೆ ಪ್ರತಿಭೆ ಹಾಗೂ ಕೌಶಲ್ಯಕ್ಕೆ ಹೊಯ್ಸಳರ ದೊರೆ ವಿಷ್ಣುವರ್ಧನ ಹಾಗೂ ಶಾಂತಲಾದೇವಿಯವರ ರಾಜಾಶ್ರಯ ದೊರಕಿತ್ತು. ಇದರ ಫಲವಾಗಿಯೇ ಸಾವಿರ ವರ್ಷದ ನಂತರವೂ ಅತ್ಯಂತ ಕುತೂಹಲಕ್ಕೆ ಎಡೆಮಾಡುವ ವಿಜ್ಞಾನಕ್ಕೆ ಸವಾಲು ಎನಿಸುವ ಕತ್ತನೆಗಳು ಜಕಣಾಚಾರಿ ಯವರಿಂದ ಮೂಡಿಬಂದವು ಎಂದರು.

ಭಾರತ ದೇಶ ಕೌಶಲ್ಯ, ಕಲೆ, ಸಂಸ್ಕೃತಿ, ಸಾಹಿತ್ಯದಲ್ಲಿ ಜಗತ್ತಿಗೆ ಮಾದರಿಯಾಗಿತ್ತು. ಇದನ್ನು ಯಾರಾದರೂ ಪ್ರಶ್ನಿಸಿದರೆ ಬೇಲೂರು, ಹಳೆಬೀಡು, ಅಜಂತಾ, ಎಲ್ಲೋರಾಗಳ ಅದ್ಭುತ ಶಿಲ್ಪಕಲೆಯನ್ನು ತೋರಿಸಬಹುದು. ಭಾರತ ಕಸುಬುಗಳನ್ನು ಆಧರಿಸಿ ಶ್ರೀಮಂತವಾಗಿತ್ತು. ಭಾರತದಲ್ಲಿ ತಯಾರಾದ ಆಭರಣ, ವಸ್ತುಗಳಿಗೆ ವಿದೇಶಿಯರು ಮುತ್ತಿಗೆ ಬೀಳುತ್ತಿದ್ದರು. ಇಂದಿಗೂ ದೇಶದಲ್ಲಿ ಸಹ ಜಕಣಾಚಾರಿಯ ಪರಂಪರೆಯನ್ನು ಮುಂದುವರಿಸುವ ಶಿಲ್ಪಿಗಳು ಇದ್ದಾರೆ. ಅಯೋಧ್ಯೆಯಲ್ಲಿ ಬಾಲ ರಾಮನ ಮೂರ್ತಿ ಕೆತ್ತಿದವರು ಸಹ ಕನ್ನಡಿಗರೇ ಆಗಿದ್ದಾರೆ. ಭಾರತ ಸರ್ಕಾರದಿಂದ 18 ಕುಲ ಕಸುಬುಗಳಿಗೆ ಪಿ.ಎಂ . ವಿಶ್ವಕರ್ಮ ಯೋಜನೆ ಜಾರಿಗೊಳಿಸಲಾಗಿದೆ. ಭಾರತ ಸಭ್ಯ ಸುಸಂಸ್ಕೃತ ರಾಷ್ಟ್ರವಾಗಿ ಬದಲಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರ ಆಶಯವಾಗಿದೆ ಎಂದು ಹೇಳಿದರು.ಸಾಮಾಜಿಕ ಚಿಂತಕ ಹರ್ಷವರ್ಧನ್ ನಿಟ್ಟೆ ಉಪನ್ಯಾಸ ನೀಡಿ, ಅಮರಶಿಲ್ಪಿ ಜಕಣಾಚಾರಿ ಶಿಲ್ಪಕಲೆಗೆ ಅಪಾರ ಕೊಡುಗೆ ನೀಡಿ ದ್ದಾರೆ. ಅವರು ಶಿಲ್ಪಿ ಮಾತ್ರವಲ್ಲದೇ ಅದೊಂದು ಪರಂಪರೆ. ಶಿಲೆಗೆ ಉಸಿರನ್ನು ತುಂಬಿದ ಕಲಾವಿದ. ಕಲ್ಲಿಗೆ ಸಂವೇದನೆ ನೀಡಿದ ಒಬ್ಬ ಸೃಷ್ಟಿಕರ್ತ. ಕಾಲವನ್ನು ಮೀರಿ ಮೆರೆಯುತ್ತಿರುವವರು ಅಮರಶಿಲ್ಪಿ ಜಕಣಾಚಾರಿ ಎಂದರು. ಕಲ್ಲು ಕೂಡ ಮಾತನಾಡುತ್ತದೆ ಎಂಬುದನ್ನು ಇಡೀ ಜಗತ್ತಿಗೆ ಸಾರಿರುವ ವ್ಯಕ್ತಿ ಮಹಾನ್ ಶಿಲ್ಪಿ ಜಕಣಾಚಾರಿ. ಜಕಣಾಚಾರಿ ಶಿಲ್ಪದಲ್ಲಿ ಯಾಂತ್ರಿಕತೆ ಕಾಣುವುದಿಲ್ಲ. ಮಾನವೀಯತೆ ಕಾಣುತ್ತಿದೆ. ಅವರ ಶಿಲ್ಪಾಕಲಾ ಕೃತಿಗಳಲ್ಲಿ ಅತಿರೇಕವಿಲ್ಲ. ಸಮ ತೋಲನ ಇದೆ. ಎಲ್ಲಿಯೂ ಕೂಡ ಅಡಂಬರ ಇಲ್ಲ. ಆತ್ಮಸೌಂದರ್ಯ ಇರುವುದು ಅಮರಶಿಲ್ಪಿ ಜಕಣಾಚಾರಿ ಶಿಲ್ಪಿಯ ವಿಶೇಷತೆ ಎಂದು ಬಣ್ಣಿಸಿದರು.ರಾಜ್ಯ ಶಿಲ್ಪಕಲಾ ಅಕಾಡೆಮಿ ಸದಸ್ಯ ವಿಶ್ವಕರ್ಮ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ವಿಶ್ವ ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಎಂ.ಜೆ.ಚಂದ್ರಶೇಖರ್, ವಿಶ್ವಕರ್ಮ ಕೈಗಾರಿಕೆ ಮತ್ತು ವಿವಿಧೋದ್ದೇಶ ಸಹಕಾರ ಸಂಘದ ಸತೀಶ್, ಸಮಾಜದ ಮುಖಂಡ ರಾದ ಭೀಮಾಚಾರ್, ನಾರಾಯಣಾಚಾರ್, ಉಮಾಶಂಕರ್, ಕೃಷ್ಣಾಚಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಸಿ.ರಮೇಶ್ ಸ್ವಾಗತಿಸಿದರು. 1 ಕೆಸಿಕೆಎಂ 1ಚಿಕ್ಕಮಗಳೂರಿನ ಕುವೆಂಪು ಕಲಾ ಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿಯ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮವನ್ನು ಸಿ.ಟಿ. ರವಿ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಯಕತ್ವ ಬದಲಾವಣೆ ಗೊಂದಲದ ನಡುವೆಯೇ ಕಸರತ್ತು ಸಿದ್ದರಾಮಯ್ಯ ಬಜೆಟ್‌ ತಯಾರಿ
ಬಳ್ಳಾರಿ - ಗುಂಡೇಟಿಗೆ ಯುವಕ ಬಲಿ - ನಗರದಲ್ಲಿ 144 ಸೆಕ್ಷನ್ ಜಾರಿ