-ಯಾದಗಿರಿ: 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಜಾಗೃತಿ ಮಾಸಾಚರಣೆಗೆ ಚಾಲನೆ
----
ಕನ್ನಡಪ್ರಭ ವಾರ್ತೆ ಯಾದಗಿರಿರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವ ಮೂಲಕ ವಾಹನಗಳನ್ನು ಚಲಾಯಿಸಿ, ತಮ್ಮ ಅಮೂಲ್ಯವಾದ ಜೀವ ಉಳಿಸಿಕೊಳ್ಳಬೇಕೆಂದು
ಹಿರಿಯ ಸಿವಿಲ್ ನ್ಯಾಯಾಧೀಶರೂ ಆಗಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಮರಿಯಪ್ಪ ಹೇಳಿದರು.ಸಾರಿಗೆ ಇಲಾಖೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಸಾರಿಗೆ ಇಲಾಖೆಯಿಂದ, ನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಗುರುವಾರ, 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಜಾಗೃತಿ ಮಾಸಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಅತಿ ವೇಗದ ಚಾಲನೆ, ನಿರ್ಲಕ್ಷ್ಯದ ಚಾಲನೆ, ಮೊಬೈಲ್ ಬಳಕೆ ಮಾಡುತ್ತ ಚಾಲನೆ ಮಾಡುವುದು ಮತ್ತು ಹೆಲ್ಮೆಟ್ ಧರಿಸದೇ ವಾಹನಗಳನ್ನುನಡೆಸುವವರ ಸಂಖ್ಯೆ ಅಧಿಕವಾಗಿದೆ. ಆದ್ದರಿಂದಲೇ ಹೆಚ್ಚಿನ ಅಪಘಾತಗಳು ಆಗುತ್ತಿವೆ ಎಂದು ಅವರು ಹೇಳಿದರು. ವಾಹನಗಳ ಸವಾರರು ಒಂದು ಮಾತು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ನಮಗೂ ಕುಟುಂಬವಿದೆ. ತಂದೆ, ತಾಯಿ, ಹೆಂಡತಿ ಮತ್ತು ಮಕ್ಕಳು ಇದ್ದಾರೆ. ಹೊರಗೆ ಹೋದ ನಮ್ಮವರು ಸುರಕ್ಷಿತವಾಗಿ ಮನೆಗೆ ಬಂದು ತಲುಪಲಿ ಎಂದು ಹಂಬಲಿಸುತ್ತಾರೆ. ಕಾರಣ, ನೀವು ಆ ಕುಟುಂಬದ ಆಧಾರಸ್ತಂಭವಾಗಿರುತ್ತೀರಿ. ಅಡ್ಡಾದಿಡ್ಡಿ ವಾಹನ ಚಲಾಯಿಸಿ ರಸ್ತೆ ಅಪಘಾತದಲ್ಲಿ ಮೃತಪಟ್ಟರೇ ಕುಟುಂಬ ಅನಾಥವಾಗುತ್ತದೆ ಎಂದು ನ್ಯಾಯಾಧೀಶರಾದ ಮರಿಯಪ್ಪ ಬಹುಮಾರ್ಮಿಕವಾಗಿ ಹೇಳಿದರು.
ರಾಜ್ಯದಲ್ಲಿ ಪ್ರತಿವರ್ಷವೂ ಸುಮಾರು 12 ಸಾವಿರ ಜನರು ರಸ್ತೆ ಅಪಘಾತದಲ್ಲಿ ಸತ್ತರೇ, ಕೈ- ಕಾಲು, ದೇಹದ ವಿವಿಧ ಅಂಗಗಳನ್ನು ಕಳೆದುಕೊಳ್ಳುವವರ ಲೆಕ್ಕವೇ ಇಲ್ಲ ಎಂದು ಅವರು ಹೇಳಿದರು.ಯಾದಗಿರಿ ಜಿಲ್ಲೆಯಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ವಾಹನ ಚಲಾಯಿಸುವವರು ಅಧಿಕವಾಗಿ ಕಾಣಸಿಗುತ್ತಾರೆ. ಇದನ್ನು ತಪ್ಪಿಸುವ ಉದ್ದೇಶದಿಂದಲೇ ಈ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. 18 ವರ್ಷಕ್ಕಿಂತ ಕಡಿಮೆ ಇರುವವರು ಸಹ ವಾಹನ ಚಲಾಯಿಸುವ ಮೂಲಕ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆಂದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಮಿಲಿಂದಕುಮಾರ ಎಸ್. ಎಸ್. ಮಾತನಾಡಿ, ಸಂಚಾರಿ ನಿಮಯ ಕಟ್ಟುನಿಟ್ಟಾಗಿ ಪಾಲಿಸುವ ಕುರಿತು ಅನೇಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಕಾರಣ, ಸಾರ್ವಜನಿಕರ ಸಹಕಾರ ಇದಕ್ಕೆ ಅತಿಮುಖ್ಯವಾಗಿದೆ ಎಂದರು.ಲೋಕೋಪಯೋಗಿ ಇಲಾಖೆ ಅಧಿಕಾರಿ ಡಿಡಿಪಿಯು, ಅಧಿಕಾರಿ, ಎನ್ಎಚ್ಐ ಅಧಿಕಾರಿ, ಪೊಲೀಸ್ ಅಧಿಕಾರಿ, ಆಟೋರಿಕ್ಷಾ ಸಂಘ, ಸೇರಿದಂತೆ ಸಾರಿಗೆ ಇಲಾಖೆ ಅಧೀಕ್ಷಕರಾದ ಮೌನೇಶ ಮತ್ತು ಆನಂದ, ಸಿಬ್ಬಂದಿಗಳಾದ ಶಿವಕುಮಾರ ನವಲೆ, ಅವಿನಾಷ್, ಆನಂದ, ಡ್ರೈವಿಂಗ್ ಸ್ಕೂಲ್ ಅಧ್ಯಕ್ಷ ಯಲ್ಲಪ್ಪ ದೊಡ್ಮನಿ, ಜುಬೇರ್ ಅಹ್ಮದ್ ಇದ್ದರು.
-1ವೈಡಿಆರ್1 :
ಯಾದಗಿರಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಗುರುವಾರ, 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಜಾಗೃತಿ ಮಾಸಾಚರಣೆಗೆ ಹಿರಿಯ ಸಿವಿಲ್ ನ್ಯಾಯಾಧೀಶರೂ ಆಗಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಮರಿಯಪ್ಪ ಚಾಲನೆ ನೀಡಿದರು.