ರಾಮನಗರ: ಅಮರ ಶಿಲ್ಪಿ ಜಕಣಾಚಾರಿಯವರು ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಸೇರಿ ಹಲವೆಡೆ ಶಿಲ್ಪ ಕಲೆಗಳ ಕೊಡುಗೆ ನೀಡಿದ್ದು, ಎಲ್ಲಿಯೂ ಸಹ ಅವರು ರಚಿಸಿರುವುದು ಎಂದು ಬರೆದುಕೊಂಡಿಲ್ಲ. ಆ ರೀತಿಯ ನೈಜ ಕಲಾವಿದರು ಇಂದಿಗೂ ಅಜರಾಮರರಾಗಿ ಉಳಿದಿರುತ್ತಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ. ಸತೀಶ್ ಹೇಳಿದರು.
ವಿಶ್ವಕರ್ಮ ಅಭಿವೃದ್ಧಿಯ ಮುಖಾಂತರ ಸವಲತ್ತುಗಳನ್ನು ಬಳಸಿಕೊಂಡು ಎಲ್ಲರೂ ಸ್ವಾವಲಂಬಿಯಾಗಿ ಬದುಕಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಹಾಗೂ ತಮ್ಮ ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಿ ತಮ್ಮ ಮೂಲ ಕಸುಬಿನ ಜೊತೆಗೆ ಅವರು ಸಮಾಜಕ್ಕೆ ಕೊಡುಗೆಯಾಗುವ ರೀತಿಯಲ್ಲಿ ಬೆಳಸಬೇಕು ಎಂದರು.
ಸಮುದಾಯದ ಮುಖಂಡರಾದ ಶ್ರೀಧರ್ ಆಚಾರ್ ಮಾತನಾಡಿ, ವಿಶ್ವದಲ್ಲಿಯೇ ಅತ್ಯುತ್ತಮ ವಾಸ್ತು ಶಿಲ್ಪ ಕಲೆಯನ್ನು ಮುಂಚೂಣಿಗೆ ತಂದಿದ್ದೇ ಅಮರ ಶಿಲ್ಪಿ ಜಕಣಾಚಾರಿಯವರು, ಅವರು ನಮ್ಮ ಸಮುದಾಯದವರಾಗಿರುವುದು ನಮಗೆ ಹೆಮ್ಮೆಯ ವಿಷಯ. ಅವರು ಹಾಕಿಕೊಟ್ಟಂತಹ ದಾರಿಯಲ್ಲಿಯೇ ನಮ್ಮ ಮೂಲ ಕಸುಬನ್ನು ಇಂದಿನ ಆಧುನಿಕ ಜಗತ್ತಿಗೆ ನಾವು ಮುಂದುವರಿಸಿಕೊಂಡು ಹೋಗುವುದು ಅವಶ್ಯಕವಾಗಿದೆ ಎಂದರು.ಜಿಪಂ ಸಹಾಯಕ ಕಾರ್ಯದರ್ಶಿಗಳಾದ ಶಿವಕುಮಾರ್, ಸಮುದಾಯದ ಮುಖಂಡ, ರಾಜ್ಯ ಗೌರವಾಧ್ಯಕ್ಷರಾದ ಬಿ. ಉಮೇಶ್, ತಾಲೂಕು ಅಧ್ಯಕ್ಷ ಪಿ. ಲಿಂಗಾಚಾರ್, ಕಾರ್ಯದರ್ಶಿ ಶ್ರೀನಿವಾಸ್, ಪ್ರಭು, ಜಗನ್ನಾಥ್, ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.