ರಾಣಿಬೆನ್ನೂರು: ಭಾರತ ದೇಶದಲ್ಲಿ ಜಕಣಾಚಾರ‍್ಯರಿಂದ ನಿರ್ಮಾಣವಾದ ಶಿಲ್ಪಕಲೆಗಳುಳ್ಳ ದೇವಾಲಯಗಳು ಹಿಂದೂ ಪರಂಪರೆಯನ್ನು ಜೀವಂತವಾಗಿರಿಸಿವೆ ಎಂದು ವಡ್ಡನಹಾಳ ವಿಶ್ವಕರ್ಮ ಸಂಸ್ಥಾನ ಸಾವಿತ್ರಿ ಪೀಠದ ಶಂಕರಾತ್ಮಾನಂದ ಸರಸ್ವತಿ ಮಹಾಸ್ವಾಮಿಗಳು ನುಡಿದರು.ನಗರದ ಮೌನೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಮೌನೇಶ್ವರ ಜಯಂತ್ಯುತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಮೌನೇಶ್ವರ ಸ್ವಾಮಿಗಳು ಕೇವಲ ವಿಶ್ವಕರ್ಮ ಸಮಾಜಕ್ಕೆ ಸೀಮಿತರಾಗದೇ ಇಡೀ ಮನುಕುಲದ ಉದ್ದಾರಕ್ಕೆ ಶ್ರಮಿಸಿದವರು. ಅವರೊಬ್ಬ ಪವಾಡ ಪುರುಷರು ಎಂಬುದಕ್ಕೆ ವರವಿ ಹಾಗೂ ಲಿಂಗನಬಂಡಿಯಲ್ಲಿ ಸಾಕಷ್ಟು ಪುರಾವೆಗಳಿವೆ. ಅವರು ನೀಡಿದ ಪ್ರಸಾದದಿಂದಲೇ ಹಾಲುಮತದವರು ಆರ್ಥಿಕವಾಗಿ ಸುಭಿಕ್ಷಿತರಾಗಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ, ದ್ವಾರಕೆಯಿಂದ ಪುರಿ ತನಕ ನಿರ್ಮಾಣವಾದ ದೇವಾಲಯಗಳು ವಿಶ್ವಕರ್ಮರು ಶಿಲ್ಪಕಲೆಗೆ ನೀಡಿದ ಕೊಡುಗೆಯನ್ನು ಮುಂದಿನ ಮನುಕುಲವೂ ಈ ಸಮಾಜಕ್ಕೆ ಚಿರಋಣಿಯಾಗಿಸಿದೆ.ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಮಾತನಾಡಿ, ನಮ್ಮ ದೇಶದ ಸಂಸ್ಕೃತಿ, ಕಲೆ, ಸಂಪ್ರದಾಯವನ್ನು ಇಡೀ ವಿಶ್ವಕ್ಕೆ ಪರಿಚಯಿಸಿದವರು ವಿಶ್ವಕರ್ಮರು. ಮಕ್ಕಳಿಗೆ ಉಪನಯನ ಕಾರ್ಯ ಮಾಡಿದ್ದು ಸಂಸ್ಕಾರವಂತರಾಗಿಸಲು ಪ್ರೇರಣೆಯಾಗಿದೆ. ಮನುಷ್ಯನಿಗೆ ಆಸೆ ಎಂಬುದಕ್ಕೆ ಕೊನೆ ಇಲ್ಲ. ನಿಸ್ವಾರ್ಥ ಮನೋಭಾವನೆಯಿಂದ ಧರ್ಮವನ್ನು ಉಳಿಸುವ ಕಾಯಕವಾಗಲಿ, ಅದು ಸಂಘಟನೆಯಿಂದ ಮಾತ್ರ ಸಾಧ್ಯ. ಸರಕಾರದ ಸೌಲತ್ತುಗಳನ್ನು ಪಡೆಯಿರಿ ಜೊತೆಗೆ ನಾನು ಕೂಡಾ ವೈಯಕ್ತಿಕವಾಗಿ ನಿಮ್ಮ ಸಮಾಜಕ್ಕೆ ಆರ್ಥಿಕ ಸಹಾಯ ನೀಡುವೆ ಎಂದು ಭರವಸೆ ನೀಡಿದರು.ಮೌನೇಶ್ವರ ಉತ್ಸವ ಸಮಿತಿ ಅಧ್ಯಕ್ಷ ಪರಮೇಶ್ವರಾಚಾರ್ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿರೂಪಾಕ್ಷ ಹಾವನೂರ, ಮೌನೇಶ್ವರ ಕಮಿಟಿ ಅಧ್ಯಕ್ಷ ಓಂಕಾರೆಪ್ಪ ಅರ್ಕಾಚಾರ, ಗೌರವಾಧ್ಯಕ್ಷ ಬಸವರಾಜ ಬಡಿಗೇರ, ವೀರಣ್ಣ ಅರ್ಕಾಚಾರ, ಚಿದಾನಂದ ಬಡಿಗೇರ, ರಾಘವೇಂದ್ರ ಕಮ್ಮಾರ, ದೇವೇಂದ್ರಪ್ಪ ಅರ್ಕಾಚಾರ, ಶಿಕ್ಷಕ ಕರಿಯಪ್ಪ ಕಾಟೇನಹಳ್ಳಿ, ಸಹನಾ ಬಡಿಗೇರ, ಶೋಭಾ ಪ್ರಕಾಶಾಚಾರ, ಹೇಮಾಚಾರ ಬಡಿಗೇರ ಮತ್ತಿತರರು ಇದ್ದರು.