ಆರುಷಿ ಮೈ ಡಾಟರ್ ಯೋಜನೆ ಜಾರಿಗೆ ಜಕ್ಕಾಳಿ ಒತ್ತಾಯ

KannadaprabhaNewsNetwork |  
Published : Jul 18, 2026, 02:00 AM IST
17ಕೆಡಿವಿಜಿ2-ದಾವಣಗೆರೆಯಲ್ಲಿ ಶುಕ್ರವಾರ ಆರುಷಿ ಮೈ ಡಾಟರ್ ಯೋಜನೆ ರೂವಾರಿ ಚನ್ನೇಶ ಎಂ.ಜಕ್ಕಾಳಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಹೆಣ್ಣುಮಕ್ಕಳು, ಮಹಿಳೆಯರ ಸುರಕ್ಷತೆ, ಹಕ್ಕುಗಳ ರಕ್ಷಣೆ ಹಾಗೂ ಸರ್ವಾಂಗೀಣ ಅಭಿವೃದ್ಧಿಗೆ ಆರುಷಿ ಮೈ ಡಾಟರ್ ಯೋಜನೆಯನ್ನು ದೇಶಾದ್ಯಂತ ಕಡ್ಡಾಯವಾಗಿ ಜಾರಿಗೊಳಿಸುವಂತೆ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಿರುವುದಾಗಿ ಹೆಣ್ಣುಭ್ರೂಣ ಹತ್ಯೆ ನಿಯಂತ್ರಣ ಮತ್ತು ಹಕ್ಕುಗಳ ರಕ್ಷಣೆಯ ಆರುಷಿ ಯೋಜನೆ ರೂವಾರಿ ಹೊನ್ನಾಳಿಯ ಚನ್ನೇಶ ಎಂ. ಜಕ್ಕಾಳಿ ತಿಳಿಸಿದ್ದಅರೆ.

- ಹೆಣ್ಣುಮಕ್ಕಳು, ಮಹಿಳೆಯರ ಹಕ್ಕುಗಳ ರಕ್ಷಣೆ, ಸರ್ವಾಂಗೀಣ ಅಭಿವೃದ್ಧಿಗೆ ಯೋಜನೆ ಜಾರಿಗೆ ಮನವಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಹೆಣ್ಣುಮಕ್ಕಳು, ಮಹಿಳೆಯರ ಸುರಕ್ಷತೆ, ಹಕ್ಕುಗಳ ರಕ್ಷಣೆ ಹಾಗೂ ಸರ್ವಾಂಗೀಣ ಅಭಿವೃದ್ಧಿಗೆ ಆರುಷಿ ಮೈ ಡಾಟರ್ ಯೋಜನೆಯನ್ನು ದೇಶಾದ್ಯಂತ ಕಡ್ಡಾಯವಾಗಿ ಜಾರಿಗೊಳಿಸುವಂತೆ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಿರುವುದಾಗಿ ಹೆಣ್ಣುಭ್ರೂಣ ಹತ್ಯೆ ನಿಯಂತ್ರಣ ಮತ್ತು ಹಕ್ಕುಗಳ ರಕ್ಷಣೆಯ ಆರುಷಿ ಯೋಜನೆ ರೂವಾರಿ ಹೊನ್ನಾಳಿಯ ಚನ್ನೇಶ ಎಂ. ಜಕ್ಕಾಳಿ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಸರ್ಕಾರಿ ಭರವಸೆಗಳ ಸಮಿತಿಯ ಸದಸ್ಯರೂ ಆದ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿ, ಈ ಸಂಬಂಧ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಹೇಳಿದರು.

ಲೋಕಸಭೆಯ ಮಳೆಗಾಲದ ಅಧಿವೇಶನದಲ್ಲಿ ಹೆಣ್ಣುಭ್ರೂಣ ಹತ್ಯೆ ನಿಯಂತ್ರಣ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗೆ ಸಿದ್ಧಪಡಿಸಿದ ಆರುಷಿ ಮೈ ಡಾಟರ್ ಯೋಜನೆ ಬಗ್ಗೆ ಚರ್ಚಿಸಿ, ಕೇಂದ್ರದ ಗಮನ ಸೆಳೆಸಬೇಕು. 14 ವರ್ಷದಿಂದ ತಾವು ಹೋರಾಟ ನಡೆಸಿ, ರೂಪಿಸಿದ ಆರುಷಿ ಯೋಜನೆ ಕೇವಲ ದಾವಣಗೆರೆಗೆ ಮಾತ್ರ ಸಂಬಂಧಿಸಿದ ವಿಷಯವಲ್ಲ. ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯಮಟ್ಟಕ್ಕೂ ಸಂಬಂಧಿಸಿದ ಅತಿ ಸೂಕ್ಷ್ಮ ವಿಷಯ. ಹಾಗಾಗಿ, ಸಂಸತ್ ಕಲಾಪದಲ್ಲಿ ಯೋಜನೆ ಬಗ್ಗೆ ವಿಷಯ ಮಂಡಿಸುವಂತೆ ಅವರು ಆಗ್ರಹಿಸಿದರು.

ದೇಶದಲ್ಲಿ 16 ಸಾವಿರದಷ್ಟು ಹೆಣ್ಣುಭ್ರೂಣ ಹತ್ಯೆ ನಡೆದ ಮಾಹಿತಿ ಇದೆ. ಮಕ್ಕಳ ಹಕ್ಕುಗಳ ಉಲ್ಲಂಘನೆಯೂ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಆರುಷಿ ಮೈ ಡಾಟರ್ ಯೋಜನೆ ಹೆಣ್ಣುಭ್ರೂಣ ಹತ್ಯೆ ತಡೆಯುವ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ವಿಷಯದಲ್ಲಿ ತುಂಬಾ ಉಪಯುಕ್ತವಾಗಲಿದೆ. ಸಂಸದರು ಚಳಿಗಾಲದ ಅಧಿವೇಶನದಲ್ಲಿ ಯೋಜನೆ ಬಗ್ಗೆ ಪ್ರಸ್ತಾಪಿಸಬೇಕು. ಯೋಜನೆ ಬಗ್ಗೆ ಪ್ರಸ್ತಾಪಿಸುವ ಮೂಲಕ ಜಿಲ್ಲೆಗೆ ಕೀರ್ತಿ ತರಬೇಕು. ಈ ಬಗ್ಗೆ ಸಂಸದರಾಗಿ ಡಾ.ಪ್ರಭಾ ಮಲ್ಲಿಕಾರ್ಜುನ ಆಯ್ಕೆಯಾದ ನಂತರ 2 ಸಲ ಭೇಟಿ ಮಾಡಿ, ಮನವಿ ಮಾಡಿದ್ದೇನೆ ಎಂದು ಅವರು ತಿಳಿಸಿದರು.

ಹೆಣ್ಣು ಭ್ರೂಣ ಹತ್ಯೆ ನಿಯಂತ್ರಣ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗೆ ಸಿದ್ಧಪಡಿಸಿದ ಆರುಷಿ ಮೈ ಡಾಟರ್ ಯೋಜನೆ ಒಂದೇ ಇಲಾಖೆಗೆ ಸಂಬಂಧಿಸಿದ್ದಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ಘಟಕ, ಆರೋಗ್ಯ ಇಲಾಖೆ ಹೀಗೆ ಹಲವಾರು ಇಲಾಖೆಗೆ ಸಂಬಂಧಿಸಿದ್ದಾಗಿದೆ. ಎಲ್ಲ ಇಲಾಖೆಗಳ ಕಾರ್ಯಗಳ ಬಗ್ಗೆಯೂ ಯೋಜನೆಯಲ್ಲಿ ತಿಳಿಸಲಾಗಿದೆ. ಅತಿ ಮುಖ್ಯವಾಗಿ ಆರುಷಿ ಮೈ ಡಾಟರ್ ಯೋಜನೆ ಬಗ್ಗೆ ಸಂಸತ್‌ನಲ್ಲಿ ಚರ್ಚೆ ನಡೆಸಿದರೆ ಇಡೀ ದೇಶದ ಗಮನ ಸೆಳೆದಂತಾಗುತ್ತದೆ. ಕೇಂದ್ರವೂ ಈ ವಿಚಾರದ ಬಗ್ಗೆ ಗಮನ ಹರಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ತಾವು 2014ರಿಂದ ಪ್ರತಿ ವರ್ಷವೂ ಯೋಜನೆ ಅನುಷ್ಠಾನಕ್ಕಾಗಿ ತಾಲೂಕು ಕಚೇರಿ ಮುಖಾಂತರ, ಬೆಳಗಾವಿ ಅಧಿವೇಶನದ ವೇಳೆ ಧರಣಿ ನಡೆಸಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದೆ. ಬೆಂಗಳೂರಿನಿಂದ ಕನ್ಯಾಕುಮಾರಿಯವರೆಗೆ, ದೆಹಲಿವರೆಗೂ ಪಾದಯಾತ್ರೆ ನಡೆಸಿ, ಯೋಜನೆಗೆ ರಾಷ್ಟ್ರೀಯ ಮನ್ನಣೆ ದೊರಕಿಸಿಕೊಡಲು ಸಮಿತಿ ಶ್ರಮಿಸಿತ್ತು. ಆದರೆ, ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ ಯಾವುದೇ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯೂ ಆಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ದೇಶದ ಪ್ರತಿ ಜಿಲ್ಲೆ, ಹಳ್ಳಿ ಹಳ್ಳಿಯಲ್ಲೂ ಗರ್ಭಿಣಿಯರಿಗೆ ಸೂಕ್ತ ಚಿಕಿತ್ಸೆ, ಉಚಿತ ಔಷಧ ಹಾಗೂ ಹೆರಿಗೆ ಸೌಲಭ್ಯ ಸಿಗಬೇಕು. ಕಡ್ಡಾಯ ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆ ನಡೆಯಬೇಕು. ಪ್ರತಿ ಮಗುವಿಗೂ ಉಚಿತ ಕಡ್ಡಾಯ ಶಿಕ್ಷಣ, ಕಡ್ಡಾಯ ವಿವಾಹ ನೋಂದಣಿ, ಪೌಷ್ಟಿಕ ಆಹಾರ ಹಾಗೂ ರಕ್ಷಣೆ ಸಿಗುವಂತಾಗಬೇಕು. ಬಾಲಕಾರ್ಮಿಕ ಪದ್ಧತಿ ಮತ್ತು ಬಾಲ್ಯವಿವಾಹ ಮುಕ್ತ ಸಮಾಜ ನಿರ್ಮಾಣವಾಗಬೇಕು. ಯಾವುದೇ ತುರ್ತು ಸಂದರ್ಭದಲ್ಲಿ ನೆರವು ನೀಡಲು ದೇಶದಾದ್ಯಂತ 24 ಗಂಟೆ ಲಭ್ಯವಿರುವ ರಾಷ್ಟ್ರೀಯ 100 ಗಂಭೀರ ಸಮಸ್ಯೆಗೆ ಪರಿಹಾರ ನೀಡುವ ಅರುಷಿ ಯೋಜನೆ ಜಾರಿಗೊಳಿಸಬೇಕಿದೆ ಎಂದು ಚನ್ನೇಶ ಎಂ.ಜಕ್ಕಾಳಿ ತಿಳಿಸಿದರು.

ಹೊನ್ನಾಳಿ ಕಿರಣಕುಮಾರ, ದತ್ತಾತ್ರೇಯ ಇದ್ದರು.

- - -

(ಕೋಟ್‌) ಈಚಿನ ವರದಿ ಪ್ರಕಾರ ರಾಜ್ಯದಲ್ಲಿ ಸರಾಸರಿ 10 ಸಾವಿರಕ್ಕೂ ಹೆಚ್ಚು ಭ್ರೂಣ ಹತ್ಯೆಗಳಾಗಿದ್ದು, ಮಕ್ಕಳ ಸಾಗಾಣಿಕೆ (ಟ್ರಾಫಿಕಿಂಗ್) ಹೆಚ್ಚುತ್ತಿದೆ. ಶೇ.2-3ರಷ್ಟು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದನ್ನೆಲ್ಲಾ ತಡೆಗಟ್ಟಲು ಬಲಿಷ್ಠ ಕಾನೂನು ಜಾರಿಗೊಳ್ಳಬೇಕು. ಆದರೆ, ಇದುವರೆಗೂ ಇದೆಲ್ಲಾ ಸಾಧ್ಯವಾಗಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರುಷಿ ಮೈ ಡಾಟರ್ ಯೋಜನೆ ಸೂಕ್ಷ್ಮತೆ ಅರಿತು, ತಕ್ಷಣವೇ ''''''''ಆರುಷಿ ಮೈ ಡಾಟರ್'''''''' ಯೋಜನೆ ಜಿಲ್ಲಾ, ರಾಜ್ಯ ಮಟ್ಟದಲ್ಲಿ ಅಧಿಕೃತವಾಗಿ ಜಾರಿಗೆ ತರಲಿ.

- ಚನ್ನೇಶ ಎಂ. ಜಕ್ಕಾಳಿ, ರೂವಾರಿ, ಆರುಷಿ ಮೈ ಡಾಟರ್ ಯೋಜನೆ.

- - -

-17ಕೆಡಿವಿಜಿ2: ದಾವಣಗೆರೆಯಲ್ಲಿ ಶುಕ್ರವಾರ ಆರುಷಿ ಮೈ ಡಾಟರ್ ಯೋಜನೆ ರೂವಾರಿ ಚನ್ನೇಶ ಎಂ. ಜಕ್ಕಾಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

153 ಜನ ಹುತಾತ್ಮರಾದ್ರೂ ರೈತರಿಗೆ ಸಿಗದ ಸೌಲಭ್ಯ
ಆರ್.ಜೆ ಕಾಲೇಜು ನೀಟ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ